ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಅತ್ಯಾಚಾರ: ಕ್ರಮಕ್ಕೆ ಆಗ್ರಹಿಸಿ ಮನವಿ

Lingaraj Badiger
Updated On : 27 Jun 2013, 10:56 am

ಚಿಕ್ಕಮಗಳೂರು: ಮಣಿಪಾಲದಲ್ಲಿ ವೈದ್ಯಕೀಯ ವಿದ್ಯಾರ್ಥಿನಿ ಮೇಲೆ ಅತ್ಯಾಚಾರವೆಸಗಿದ ಕೃತ್ಯವನ್ನು ಯುವಶಕ್ತಿ ಮಾನವತಾ ವೇದಿಕೆ ಖಂಡಿಸಿದೆ. ಈ ಸಂಬಂಧ ಜಿಲ್ಲಾಧಿಕಾರಿ ವಿ. ಯಶ್ವಂತ್ ಅವರಿಗೆ ಮನವಿ ಸಲ್ಲಿಸಿ ಮಾತನಾಡಿದ ವೇದಿಕೆಯ ಅಧ್ಯಕ್ಷ ಸತೀಶ್, ಹಾಡಹಗಲೇ ನಡೆದ ಈ ಕೃತ್ಯದಿಂದ ಮಹಿಳೆಯರು ಮತ್ತು ಸಾರ್ವಜನಿಕರು ಆತಂಕ್ಕೀಡಾಗಿದ್ದಾರೆ. ಒಂಟಿ ಮಹಿಳೆಯರಿಗೆ ನಾಡಿನಲ್ಲಿ ರಕ್ಷಣೆ ಇಲ್ಲವೆ ಎಂದು ಪ್ರಶ್ನಿಸಿದರು. ಇತ್ತೀಚಿನ ದಿನಗಳಲ್ಲಿ ಅತ್ಯಾಚಾರ ಪ್ರಕರಣ ಹೆಚ್ಚಾಗುತ್ತಿದ್ದು ದೆಹಲಿಯಲ್ಲಿ ನಡೆದ ಅತ್ಯಾಚಾರ ಪ್ರಕರಣ ಮಾಸುವ ಮುನ್ನವೇ ವೈದ್ಯಕೀಯ ವಿದ್ಯಾರ್ಥಿನಿ ಮೇಲಿನ ಅತ್ಯಾಚಾರ ಪ್ರಕರಣದಿಂದ ಹೆಣ್ಣು ಮಕ್ಕಳ ಪೋಷಕರನ್ನು ಭಯಬೀತಗೊಳಿಸಿದೆ. ಕೂಡಲೇ ಮುಖ್ಯಮಂತ್ರಿಗಳು ತಪ್ಪಿತಸ್ಥ ಅತ್ಯಾಚಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕು ಹಾಗೂ ನೊಂದ ವಿದ್ಯಾರ್ಥಿನಿಗೆ ಸೂಕ್ತ ಪರಿಹಾರ ಕಲ್ಪಿಸಬೇಕೆಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ವೇದಿಕೆಯ ಸದಸ್ಯರುಗಳಾದ ಮಧು, ರಾಜ, ಸುನೀಲ್, ಸರ್ದಾರ್, ಸಂಜು ಆನಂದ್, ರಿಯಾಜ್, ಸುರೇಶ್ ಹಾಜರಿದ್ದರು.
ಅತ್ಯಾಚಾರ ಖಂಡಿಸಿ ಪ್ರತಿಭಟನೆ
ನರಸಿಂಹರಾಜಪುರ: ಮಣಿಪಾಲಿನಲ್ಲಿ ವೈದ್ಯಕೀಯ ವಿದ್ಯಾರ್ಥಿನಿ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಖಂಡಿಸಿ ಪಟ್ಟಣದ ರಾಜೀವ್ ನಗರದ ನಿವಾಸಿಗಳು ಬುಧವಾರ ಪ್ರತಿಭಟನಾ ಮೆರವಣಿಗೆ ನಡೆಸಿದರು.
ಈ ಸಂದರ್ಭದಲ್ಲಿ ರಾಜೀವ್ ನಗರ ಕ್ಷೇಮಾಭಿವೃದ್ಧಿ ಸಮಿತಿ ಅಧ್ಯಕ್ಷೆ ಜುಬೇದ ಮಾತನಾಡಿ, ಮಹಿಳೆಯರ ಮೇಲೆ ನಡೆಯುತ್ತಿರುವ ಅತ್ಯಾಚಾರವನ್ನು ಖಂಡಿಸುತ್ತೇವೆ. ಸರ್ಕಾರವು ಅತ್ಯಾಚಾರಿಗಳನ್ನು ಕೂಡಲೇ ಬಂಧಿಸಿಬೇಕು. ಅತ್ಯಾಚಾರದಂತಹ ಪ್ರಕರಣಗಳು ಹೆಚ್ಚಾಗುತ್ತಿದೆ. ಸರ್ಕಾರವು ಮಹಿಳೆಯರ ರಕ್ಷಣೆಗೆ ಮುಂದಾಗಬೇಕು ಎಂದು ಅವರು ಒತ್ತಾಯಿಸಿದರು. ಈ ಸಂದರ್ಭದಲ್ಲಿ ಪಟ್ಟಣ ಪಂಚಾಯ್ತಿ ಸದಸ್ಯೆ ಲಿಲ್ಲಿ, ಸ್ವಸಹಾಯ ಸಂಘದ ಮಂಜುಳಾ, ನಾಗರತ್ನ, ಮೀನಾ ಮುಂತಾದವರಿದ್ದರು.
'ಸೊಳ್ಳೆ ನಿಯಂತ್ರಿಸಿ'
ತರೀಕೆರೆ: ಸಮೀಪದ ಸುಣ್ಣದಹಳ್ಳಿ ಗ್ರಾಪಂ ವ್ಯಾಪ್ತಿಯ ಕೆಂಚಾಪುರ ಗೇಟ್ ಪ್ರದೇಶದಲ್ಲಿ ಸೊಳ್ಳೆಗಳ ಕಾಟ ಮಿತಿಮೀರಿದ್ದು ರೋಗ ಹರಡಲು ಕಾರಣವಾಗುತ್ತಿದೆ ಎಂದು ಸಾರ್ವಜನಿಕರು ದೂರಿದ್ದಾರೆ.
ಕೆಂಚಾಪುರ ಗೇಟ್ ಪ್ರದೇಶದಲ್ಲಿ ಚರಂಡಿ ಹಾಗೂ ಸಾರ್ವಜನಿಕ ಪ್ರದೇಶಗಳಲ್ಲಿ ಹೆಚ್ಚು ಪಾರ್ಥೇನಿಯಂ ಕಳೆ ಹೆಚ್ಚಾಗಿದೆ. ನೀರು ಸರಾಗವಾಗಿ ಹರಿಯದೆ ಕಸಕಡ್ಡಿ ತುಂಬಿಕೊಂಡು ಸೊಳ್ಳೆಗಳು ಹೆಚ್ಚಾಗುತ್ತಿವೆ. ಡೆಂಘಿ, ಮಲೇರಿಯಾ ರಡಲು ಕಾರಣವಾಗುವುದರಿಂದ ಸಂಬಂಧಿಸಿದವರು ಈ ಬಗ್ಗೆ ಕ್ರಮ ಕೈಗೊಂಡು ಈ ಪ್ರದೇಶಗಳಲ್ಲಿ ಸ್ವಚ್ಛತೆ ಮತ್ತು ನೈರ್ಮಲ್ಯವನ್ನು ಕಾಪಾಡಬೇಕೆಂದು ಸಾರ್ವಜನಿಕರು ತಿಳಿಸಿದ್ದಾರೆ.

ಕಾಯಂ ವೈದ್ಯರಿಲ್ಲದೆ ಸೊರಗುತ್ತಿರುವ ನೆಮ್ಮಾರು ಸರ್ಕಾರಿ ಆಸ್ಪತ್ರೆ
ಶೃಂಗೇರಿ: ಇಲ್ಲಿ ಔಷಧಿ ಸಾಮಗ್ರಿಗಳು ಸೇರಿದಂತೆ ಎಲ್ಲ ಮೂಲ ಸೌಕರ್ಯಗಳಿವೆ. ಆದರೆ ಕಾಯಂ ವೈದ್ಯರಿಲ್ಲದೆ ಹಲವು ವರ್ಷಗಳೇ ಕಳೆದಿವೆ. ಈ ಬಗ್ಗೆ ಸಾಕಷ್ಟು ಬಾರಿ ಮನವಿ ನೀಡಿ ಪ್ರತಿಭಟನೆ ನಡೆಸಿದ್ದರೂ ಪ್ರಯೋಜನವಾಗಿಲ್ಲ.
 ಇದು ನೆಮ್ಮಾರು ಸರ್ಕಾರಿ ಆಸ್ಪತ್ರೆಯ ಕಥೆ. ವೈದ್ಯರು ನೇಮಕಗೊಂಡು ಇಲ್ಲಿಗೆ ಬಂದು ಕರ್ತವ್ಯಕ್ಕೆ ಹಾಜರಾಗುವ ಮೊದಲೇ ವರ್ಗಾವಣೆಗೊಳ್ಳುತ್ತಾರೆ. ಆರೋಗ್ಯ ಸಹಾಯಕಿಯರು ಔಷಧಿ, ಮಾತ್ರೆ ನೀಡುವ ಕೆಲಸ ನಿರ್ವಹಿಸುತ್ತಾರೆ. ಈ ಬಗ್ಗೆ ಗ್ರಾಮ ಸಭೆ, ಜ ನಸ್ಪಂದನ ಸಭೆಗಳಲ್ಲಿ ಸಾಕಷ್ಟು ಬಾರಿ ಗಮನಕ್ಕೆ ತರಲಾಗಿದೆ. ಈ ಆಸ್ಪತ್ರೆಗೆ ಹೊಂದಿಕೊಂಡಂತೆ ನಿರ್ಮಿಸಿರುವ ವೈದ್ಯರ ವಸತಿ ಗೃಹ ಪಾಳು ಬಿದ್ದ ಬಂಗಲೆಯಾಗಿದೆ.
 ಸುತ್ತಮುತ್ತಲ ಸುಮಾರು 75 ಕ್ಕೂ ಹೆಚ್ಚಿನ ಹಳ್ಳಿಗಳನ್ನೊಳಗೊಂಡಿರುವ 3,000 ಕ್ಕೂ ಅಧಿಕ ಜನಸಂಖ್ಯೆ ಹೊಂದಿರುವ ಪ್ರದೇಶಕ್ಕೆ ಈ ಆಸ್ಪತ್ರೆ ಕೇಂದ್ರ ಬಿಂದುವಾಗಿದೆ.
  ಬಹುತೇಕ ಪ್ರದೇಶಗಳು ನಕ್ಸಲ್ ಪ್ರಭಾವಿತ ಪ್ರದೇಶಗಳಾಗಿವೆ. ಸುಮಾರು 20 ಕಿಲೋಮೀಟರ್ ದೂರದ ಕುಗ್ರಾಮಗಳಿಂದ ಜನರು ಈ ಆಸ್ಪತ್ರೆಗೆ ಬರುತ್ತಾರೆ.
   ದುರ್ಗಮ ಹಾದಿಯಲ್ಲಿ ಆಸ್ಪತ್ರೆಗೆ ಬಂದರೆ ವೈದ್ಯರಿಲ್ಲದೆ ವಾಪಸ್ಸಾಗುತ್ತಾರೆ. ಹರೂರು, ಮಲ್ನಾಡ್ ಸುತ್ತಮುತ್ತಲ ಹಳ್ಳಿಗಳು ಸಂಪೂರ್ಣ ನಕ್ಸಲ್ ಪೀಡಿತ ಸೂಕ್ಷ್ಮ ಪ್ರದೇಶಗಳಾಗಿವೆ.ನಕ್ಸಲ್‌ಪ್ಯಾಕೇಜ್ ಇದ್ದರೂ ಈ ಭಾಗದಲ್ಲಿ ಕಾಯಂ ವೈದ್ಯರ ಸೇವೆಗೆ ಸರ್ಕಾರ ಆದ್ಯತೆ ನೀಡದಿರುವುದು ನಿಜಕ್ಕೂ  ಆಶ್ಚರ್ಯವೇ ಸರಿ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement