ಮುಂದುವರಿದ ಮರಳು ದಂಧೆ ನಿಯಂತ್ರಣ
ಕ.ಪ್ರ.ವಾರ್ತೆ, ಮೂಡಿಗೆರೆ, ಜೂ.26
ತಾಲೂಕಿನಲ್ಲಿ ಕಳೆದ 6 ದಿನಗಳಿಂದ ಜಿಲ್ಲಾಧಿಕಾರಿಗಳ ಆದೇಶದಂತೆ ತಹಸೀಲ್ದಾರ್ ನೇತೃತ್ವದಲ್ಲಿ ಲೋಕೋಪಯೋಗಿ, ಪೊಲೀಸ್ ಇಲಾಖೆಗಳ ಜಂಟಿ ಕಾರ್ಯಾಚರಣೆಯಲ್ಲಿ ಅಕ್ರಮ ಮರಳು ದಸ್ತಾನುಗಳ ಮೇಲೆ ನಡೆಸುತ್ತಿರುವ ದಾಳಿಯಿಂದಾಗಿ ಲಕ್ಷಾಂತರ ಮೌಲ್ಯದ ಅಕ್ರಮ ಮರಳು ಪತ್ತೆ ಹಚ್ಚಿ ವಶಕ್ಕೆ ತೆಗೆದುಕೊಳ್ಳಲಾಗಿದೆ.
ಬುಧವಾರವೂ ಕಾರ್ಯಾಚರಣೆ ಮುಂದುವರೆಸಿದ್ದು, ತಾಲೂಕಿನ ಹಂಡಗುಳಿ ಮತ್ತು ಅಣಜೂರ್ ಗ್ರಾಮದಲ್ಲಿ ಟ್ರ್ಯಾಕ್ಟರ್ ಹಾಗೂ ಟಿಪ್ಪರ್ ಬಳಸಿ ಅಕ್ರಮವಾಗಿ ಸಂಗ್ರಹಿಸಿದ್ದ, ಮರಳುಗಳನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ.
ಗೋಣಿಬೀಡು ಠಾಣಾ ವ್ಯಾಪ್ತಿಯಲ್ಲೇ ಕಾರ್ಯಾಚರಣೆ ಮುಂದುವರೆದಿದ್ದು, ಕಳೆದೆರಡು ದಿನಗಳಿಂದ 220ಕ್ಕೂ ಹೆಚ್ಚು ಟ್ರ್ಯಾಕ್ಟರ್ ಮರಳುಗಳನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ಇದರ ಮೌಲ್ಯ ಸುಮಾರು ರು. 70 ಲಕ್ಷಕ್ಕೂ ಅಧಿಕ ಮೌಲ್ಯದ್ದಾಗಿದೆ.
ಮರಳು ನಾಪತ್ತೆ: ತಾಲೂಕಿನ ಅಣಜೂರ್ ಗ್ರಾಮದಲ್ಲಿ ಅಕ್ರಮವಾಗಿ ದಾಸ್ತಾನು ಮಾಡಲಾಗಿದ್ದ, ಮರಳಿನ ಘಟಕದ ಮೇಲೆ ಶನಿವಾರ ತಹಸೀಲ್ದಾರ್ ನೇತೃತ್ವದ ತಂಡ ದಾಳಿ ನಡೆಸಿದಾಗ 250 ಲೋಡ್ಗೂ ಹೆಚ್ಚು ಮರಳು ಪತ್ತೆಯಾಗಿದೆ.
ಅದನ್ನು ವಶಕ್ಕೆ ತೆಗೆದುಕೊಳ್ಳುವಂತೆ ಲೋಕೋಪಯೋಗಿ ಇಲಾಖೆ ವಶಕ್ಕೆ ವಹಿಸಿಕೊಟ್ಟಿದ್ದರು. ಬುಧವಾರ ಅಧಿಕಾರಿಗಳು ಮರಳನ್ನು ತುಂಬಿಕೊಂಡು ಬರಲು ಹೋದಾಗ 100 ಲೋಡ್ಗೂ ಅಧಿಕ ಮರಳು ಕಾಣೆಯಾಗಿದ್ದು ಕಂಡು ಬಂದಿದೆ.
ಬುಧವಾರದ ಕಾರ್ಯಾಚರಣೆಯಲ್ಲಿ ಲೋಕೋಪಯೋಗಿ ಇಲಾಖೆ ಅಧಿಕಾರಿ ನಾರಾಯಣ ಮಲ್ಯ, ವೃತ್ತ ನಿರೀಕ್ಷಕ ರಮೇಶ್, ಗೋಣಿಬೀಡು ಠಾಣಾಧಿಕಾರಿ ರೇವಣ್ಣ, ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿ ಮಹೇಶ್ ಮತ್ತು ಕೋದಂಡರಾಮ ಉಪಸ್ಥಿತರಿದ್ದರು.
ಪರಶೀಲನೆ: ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ತಹಸೀಲ್ದಾರ್ ರುದ್ರಪ್ಪಾಜಿ ರಾವ್ ಅವರನ್ನು ಮರಳು ಕಾಣೆಯಾಗಿರುವ ಬಗ್ಗೆ ಸುದ್ದಿಗಾರರು ಪ್ರಶ್ನಿಸಿದಾಗ. ನಾವು ಅಕ್ರಮ ಮರಳನ್ನು ಪರಿಶೀಲನೆ ನಡೆಸಿ, ಲೋಕೋಪಯೋಗಿ ಇಲಾಖೆಗೆ ಒಪ್ಪಿಸಿದ್ದೆವು. ಆದರೇ ಅಲ್ಲಿನ ಅಧಿಕಾರಿಗಳ ನಿರ್ಲಕ್ಷದಿಂದ ಮರಳು ಕಾಣೆಯಾಗಿದೆ.
ಇದರ ಬಗ್ಗೆ ಜಿಲ್ಲಾಧಿಕಾರಿಗಳ ಗಮನಕ್ಕೆ ತರುವುದಾಗಿ ತಿಳಿಸಿದರು.
ತಾಲೂಕಿನ ಹಲವಡೆ ಅಕ್ರಮ ಮರಳುಗಳನ್ನು ಹಿಡಿದು. ಟ್ರಾಕ್ಟರ್ಗಳ ಮೂಲಕ ಸಾಗಿಸಲಾಗುತ್ತಿದ್ದರೆ. ಕೆಲವು ಟ್ರ್ಯಾಕ್ಟರ್ಗಳು 1 ಲೋಡ್ ಪ್ರವಾಸಿ ಮಂದಿರಕ್ಕೆ ಮತ್ತೊಂದು ಲೋಡ್ ಅಕ್ರಮವಾಗಿ ಮಾರಾಟ ಮಾಡುತ್ತಿದ್ದು.
ಅಧಿಕಾರಿಗಳ ಬೆಂಗಾವಲಿನಲ್ಲೇ ಪ್ರವಾಸಿ ಮಂದಿರಕ್ಕೆಂದು ತಂದಂತಹ ಮರಳನ್ನು ಜೆಎಂ ರಸ್ತೆಯ ಮುಖಾಂತರ ಬೇರಡೆ ರಾಜರೋಷವಾಗಿ ಮರಳನ್ನು ಸಾಗಿಸುತ್ತಾ ಹಣ ಮಾಡುತ್ತಿದ್ದಾರೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ. ಪರವಾನಗಿ ಕೊಡುವುದು ಮತ್ತು ಅಕ್ರಮ ಮರಳುಗಳನ್ನು ಹಿಡಿಯುವುದಷ್ಟೇ ನಮ್ಮ ಇಲಾಖೆ ಕೆಲಸ. ಆದರೆ ಮರಳು ಕಾಣೆಯಾಗದ ಹಾಗೆ ರಕ್ಷಣೆ ಕೊಡುವುದು ಕಂದಾಯ ಮತ್ತು ಪೊಲೀಸ್ ಇಲಾಖೆ ಕೆಲಸವಾಗಿದೆ.ಹೀಗಿರುವಾಗ ತಹಸೀಲ್ದಾರರು ಲೋಕೋಪಯೋಗಿ ಇಲಾಖೆಯ್ತತೆ ಬೆರಳು ಮಾಡುವುದು ಸರಿಯಲ್ಲಾ ಎಂದು ಲೋಕೋಪಯೋಗಿ ಇಲಾಖೆ ಅಧಿಕಾರಿ ನಾರಾಯಣ ಮಲ್ಯ ಪತ್ರಿಕೆಗೆ ತಿಳಿಸಿದ್ದಾರೆ.