ಅರಣ್ಯದೊಂದಿಗೆ ಆದಿವಾಸಿಗಳು ಅವಿನಾಭಾವ ಸಂಬಂಧ: ಜ್ಯೋತಿ
ಬಾಳೆಹೊನ್ನೂರು: ಅರಣ್ಯದೊಂದಿಗೆ ಆದಿವಾಸಿಗಳು ಅವಿನಾಭಾವ ಸಂಬಂಧ ಹೊಂದಿದ್ದು, ಪರಿಸರ ಉಳಿಸಿ ಬೆಳೆಸಿಕೊಂಡು ಹೋಗುವಲ್ಲಿ ಬುಡಕಟ್ಟು ಜನರ ಪಾತ್ರ ಪ್ರಮುಖವಾಗಿದೆ ಎಂದು ರಾಷ್ಟ್ರೀಯ ಆದಿವಾಸಿ ಆಂದೋಲನದ ಸದಸ್ಯೆ ಎಚ್.ಎನ್. ಜ್ಯೋತಿ ಹೇಳಿದ್ದಾರೆ.
ಸಮೀಪದ ಜಯಪುರ-ಮಕ್ಕಿಕೊಪ್ಪ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಇತ್ತೀಚೆಗೆ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಕೊಪ್ಪ ತಾಲೂಕು ಬುಡಕಟ್ಟು ಕೃಷಿಕರ ಸಂಘ ಆಯೋಜಿಸಿದ್ದ ಗಿಡ ನೆಡುವ ಕಾರ್ಯಕ್ರಮದಲ್ಲಿ ನೆಲ್ಲಿ ಗಿಡಕ್ಕೆ ಪೂಜೆ ಸಲ್ಲಿಸಿ ನೆಡುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಮಕ್ಕಳಿಗೆ ಗಿಡ ನೆಡುವ ಮಹತ್ವ ಕುರಿತು ಸೂಕ್ತ ತಿಳುವಳಿಕೆ ನೀಡುವ ಮೂಲಕ ಕಾಳಜಿ ಹೆಚ್ಚಿಸುವ ಕೆಲಸ ಆಗಬೇಕಿದ್ದು, ಅಲ್ಲದೇ ಎಲ್ಲಾ ಕಾರ್ಯಕ್ರಮಗಳಲ್ಲೂ ಗಿಡ ನೆಡುವ ಮೂಲಕ ಪರಿಸರ ಜಾಗೃತಿ ಮೂಡಿಸುವುದು ಅಗತ್ಯವಾಗಿದೆ. ಇದರಿಂದ ನಮ್ಮ ಸುತ್ತಮುತ್ತ ಸಾಕಷ್ಟು ಗಿಡ ಮರಗಳು ಬೆಳೆದು ಪರಿಸರ ಸಂರಕ್ಷಣೆ ಆಗಲಿದೆ ಎಂದು ಹೇಳಿದರು.
ಕೇಂದ್ರ ಸಂಪನ್ಮೂಲ ವ್ಯಕ್ತಿ ಅಶೋಕ್ ಮಾತನಾಡಿ, ಆದಿವಾಸಿಗಳು ಪರಿಸರದ ಬಗ್ಗೆ ಕಾಳಜಿ ಹೊಂದಿರುವುದು ಸ್ವಾಗತಾರ್ಹ. ಈ ರೀತಿಯ ಕಾರ್ಯಕ್ರಮಗಳಿಂದ ಮಕ್ಕಳು ಮತ್ತು ಪೋಷಕರಲ್ಲಿ ಪರಿಸರದ ಬಗ್ಗೆ ಕಾಳಜಿ ಮೂಡಿಸಲು ಅನುಕೂಲವಾಗಲಿದೆ ಎಂದರು.
ಕೊಪ್ಪ ತಾಪಂ ಸದಸ್ಯ ಪಳನಿ, ಅರಣ್ಯ ಇಲಾಖೆಯ ಶಿವರುದ್ರಪ್ಪ, ಶಿಕ್ಷಕಿ ರೂಪ, ತಾಲ್ಲೂಕು ಬುಡಕಟ್ಟು ಕೃಷಿಕರ ಸಂಘದ ಅಧ್ಯಕ್ಷ ಮಂಜುನಾಥ್, ಕೃಷ್ಣಪ್ಪ, ಗೀತಾ, ಸುಂದರ, ಸ್ವಸ್ತಿ, ಶೇಖರ ಮೇಸ್ತ್ರಿ, ಗ್ರಾಪಂ ಸದಸ್ಯ ಈಶಪ್ಪ, ಪದ್ಮಾವತಿ, ರಮೇಶ್, ಶೇಖರ್ ಇದ್ದರು.
ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ತೆಂಗು, ನೆಲ್ಲಿ, ಹಲಸು ಸೇರಿದಂತೆ ಪರಿಸರಕ್ಕೆ ಪೂರಕವಾದ ವಿವಿಧ ಸಸ್ಯಗಳನ್ನು ವಿತರಿಸಲಾಯಿತು.