ಅವಳಿ ಪಟ್ಟಣಗಳಿಗೆ ಶಾಶ್ವತ ಕುಡಿವ ನೀರು
ಕ.ಪ್ರ.ವಾರ್ತೆ ಟಿ ಕಡೂರು ಟಿ ಜೂ.27
ಭದ್ರಾ ನದಿಯಿಂದ ಕಡೂರು, ಬೀರೂರು ಪಟ್ಟಣಗಳ ದಶಕಗಳ ಶಾಶ್ವತ ಕುಡಿಯುವ ನೀರಿನ ಯೋಜನೆಗೆ ಇದ್ದ ಅಡ್ಡಿ ಆತಂಕಗಳು ಇದೀಗ ನಿವಾರಣೆಯಾಗಿ ಕಾಮಗಾರಿ ಆರಂಭವಾಗಿದ್ದು, ಗೌರಿ ಗಣೇಶ ಹಬ್ಬದೊಳಗೆ ಅವಳಿ ಪಟ್ಟಣಗಳ ಜನರಿಗೆ ಶುದ್ಧ ಕುಡಿಯುವ ನೀರು ದೊರೆಯಲಿದೆ ಎಂದು ಶಾಸಕ ವೈ.ಎಸ್.ವಿ. ದತ್ತ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಡೂರು, ಬೀರೂರು ಸೇರಿದಂತೆ ಭದ್ರಾನದಿಯಿಂದ ಮಾರ್ಗ ಮಧ್ಯದ 34 ಹಳ್ಳಿಗಳಿಗೆ ಶುದ್ಧ ಕುಡಿಯುವ ನೀರು ಒದಗಿಸುವ ಯೋಜನೆ ಜಾರಿಗೆ ಹಲವು ಶಾಸಕರು ಮಾಡಿರುವ ಪ್ರಯತ್ನವನ್ನು ಸ್ಮರಿಸುವುದಾಗಿ, ಗೌರಿ ಗಣೇಶ ಹಬ್ಬದ ಹೊತ್ತಿಗೆ ಕಡೂರು, ಬೀರೂರು ಪಟ್ಟಣಗಳ ಜನರು ಭದ್ರಾ ನದಿಯಿಂದ ಶಾಶ್ವತ ಕುಡಿಯುವ ನೀರು ಕುಡಿಯಲಿದ್ದಾರೆ. ಇದರಿಂದ ಹಲವು ದಶಕಗಳ ಬೇಡಿಕೆ ಈಡೇರಿದೆ ಎಂದು ಹರ್ಷ ವ್ಯಕ್ತಪಡಿಸಿದರು.
ಟ್ಯಾಂಕರ್ ಮೂಲಕ ನೀರು: ಕಡೂರು ಹಾಗೂ ಬೀರೂರು ಪಟ್ಟಣಗಳಲ್ಲಿ ಕುಡಿಯುವ ನೀರಿಗೆ ತೀವ್ರ ತೊಂದರೆ ಅನುಭವಿಸುತ್ತಿರುವ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿ, ಎರಡೂ ಪುರಸಭೆಗಳಿಗೆ ತಲಾ 10 ಲಕ್ಷರು. ಮಂಜೂರಾಗಿ ಟ್ಯಾಂಕರ್ ಮೂಲಕ ನೀರು ಪೂರೈಸಲು ಅವಕಾಶವಿದೆ.
ಹೊಸ ಕೊಳವೆಬಾವಿ ಕೊರೆಯಲು 29 ಲಕ್ಷ ರು. ಬಿಡುಗಡೆಯಾಗಿ ರಿಪೇರಿ ಸೇರಿದಂತೆ ಒಟ್ಟು 35 ಲಕ್ಷರು. ಬಿಡುಗಡೆಯಾಗಿದೆ. ಬೀರೂರಿನ ಭಗವತ್ ನಗರದಲ್ಲಿ ರೈಲ್ವೆ ಜಾಗದಲ್ಲಿ ನಿವಾಸಿಗಳಿಗೆ ಓಡಾಡಲು ಇರುವ ತೊಂದರೆ ವಿಚಾರದಲ್ಲಿ ರಾಜಕೀಯ ಮಾಡಲಾಗುತ್ತಿದ್ದು, ತಾವು ಉಪ ವಿಭಾಗಾಧಿಕಾರಿ, ಜಿಲ್ಲಾಧಿಕಾರಿಗಳೊಂದಿಗೆ ಮಾತುಕತೆ ನಡೆಸಿದ್ದು ಸಮಸ್ಯೆ ಬಗೆಹರಿಸಲು ರೈಲ್ವೆ ಇಲಾಖೆ ಅಧಿಕಾರಿಗಳಿಂದ ಅನುಮತಿ ಪಡೆದು ತೆರವು ಮಾಡಿಸಲಾಗಿದೆ ಎಂದರು.
ಗೂಡ್ಸ್ ಶೆಡ್ ನಿರ್ಮಾಣ: ಕಡೂರು, ಬೀರೂರು ರೈಲ್ವೆ ಇಲಾಖೆ ಅವ್ಯವಸ್ಥೆ ಸರಿಪಡಿಸುವಿಕೆ ಸೇರಿದಂತೆ ಅನೇಕ ಸವಲತ್ತು ಕಲ್ಪಿಸುವ ಬಗ್ಗೆ ನಾನು ದೇವೇಗೌಡರನ್ನು ಕರೆಸಿ ಎರಡು ನಿಲ್ದಾಣಗಳ ಪರಿಸ್ಥಿತಿ ವೀಕ್ಷಿಸಿ ಬಳ್ಳೇಕೆರೆಯಲ್ಲಿ ಗೂಡ್ಸ್ ಶೆಡ್ ನಿರ್ಮಾಣ ಮಾಡಬೇಕೆಂದು ರೈಲ್ವೆ ಸಚಿವರಿಗೆ ಪತ್ರ ಬರೆದು ಒತ್ತಾಯಿಸಿದರೂ ಪ್ರಯತ್ನ ಫಲ ನೀಡಲಿಲ್ಲ.
ಇದೀಗ ರಾಜ್ಯದ ಮಲ್ಲಿಕಾರ್ಜುನ ಖರ್ಗೆಯವರು ರೈಲ್ವೆ ಮಂತ್ರಿಯಾಗಿರುವುದು ಅನುಕೂಲವಾಗಿದ್ದು ಈ ಬಗ್ಗೆ ಮೊನ್ನೆಯಷ್ಟೇ ದೇವೇಗೌಡರು ಮಲ್ಲಿಕಾರ್ಜುನ ಖರ್ಗೆಯವರಿಗೆ ಶುಭಾಷಯ ಹೇಳಿ, ಕಡೂರು, ಬೀರೂರು ರೈಲ್ವೆ ನಿಲ್ದಾಣಗಳ ದುಸ್ಥಿತಿ ಮತ್ತು ನಿಲ್ದಾಣಗಳಿಗೆ ಆಗಬೇಕಾಗಿರುವ ಸವಲತ್ತು ಮತ್ತು ಬಳ್ಳೇಕೆರೆಯಲ್ಲಿಯೇ ಗೂಡ್ಸ್ ಶೆಡ್ ನಿರ್ಮಾಣ ಮಾಡಿಸುವಂತೆ ಮಾಡಿದ ಮನವಿಗೆ ಸ್ಪಂದಿಸಿ ಭರವಸೆ ನೀಡಿದ್ದಾರೆ ಎಂದು ತಿಳಿಸಿದರು.
ರೈತರಿಗೆ ತೊಂದರೆ: ತಿಪಟೂರು, ಅರಸೀಕೆರೆ ಮತ್ತು ಬೇರೆ ಬೇರೆ ಕಡೆ ರೈತರು ಕೊಬ್ಬರಿ ಮಾರಾಟ ಮಾಡುವುದನ್ನು ತಪ್ಪಿಸಲು ಕಡೂರಿನಲ್ಲಿಯೇ ಖರೀದಿ ಕೇಂದ್ರ ಮಂಜೂರು ಮಾಡಿಸಿದ್ದು, ಶೀಘ್ರದಲ್ಲಿಯೇ ಪಂಚನಹಳ್ಳಿಯಲ್ಲಿ ಮತ್ತೊಂದು ಕೇಂದ್ರ ಮಂಜೂರು ಮಾಡಿಸಲಾಗುವುದು.
ಕಡೂರಿನ ಕೆಎಸ್ಆರ್ಟಿಸಿ ಬಸ್ ಡಿಪೋ ಪಕ್ಕದಲ್ಲಿ ವಸತಿ ಗೃಹ ನಿರ್ಮಿಸುತ್ತಿರುವುದರಿಂದ ಜಮೀನಿಗಳಿಗೆ ಹೋಗಲು ರೈತರಿಗೆ ತೊಂದರೆಯಾದ್ದರಿಂದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿಯವರಿಗೆ ಮನವರಿಕೆ ಮಾಡಿ 10 ಅಡಿ ರಸ್ತೆ ಬಿಡುವಂತೆ ಇಲಾಖೆಗೆ ಆದೇಶ ನೀಡಿದ್ದರಿಂದ ರೈತರ ಸಂಚಾರಕ್ಕೆ ಅನುಕೂಲವಾಗಲಿದೆ ಎಂದು ದತ್ತ ಹೇಳಿದರು.
ಗೋಷ್ಠಿಯಲ್ಲಿ ಭಂಢಾರಿ ಶ್ರೀನಿವಾಸ್, ಬಿ.ಪಿ.ನಾಗರಾಜ್, ಬಿಸಲೆರೆ ಕೆಂಪರಾಜು, ತಮ್ಮಯ್ಯಪ್ಪ, ಜಿಗಣೇಹಳ್ಳಿ ನೀಲಕಂಠಪ್ಪ, ನರಹರಿ, ತಮ್ಮಯ್ಯ, ಪ್ರದೀಪ್, ಸಿದ್ರಾಮಪ್ಪ, ಕೃಷ್ಣಮೂರ್ತಿ ಇದ್ದರು.