ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಟ್ಯೂಷನ್ ಮಾಫಿಯಾ ನಿಷೇಧಕ್ಕೆ ಆಗ್ರಹಿಸಿ ಪ್ರತಿಭಟನೆ

Rashmi Kasaragodu
Updated On : 28 Jun 2013, 11:32 am

ಕಪ್ರ ವಾರ್ತೆ   ಚಿಕ್ಕಮಗಳೂರು   ಜೂ.27
ಬಡಮಕ್ಕಳ ಭವಿಷ್ಯಕ್ಕೆ ಮಾರಕವಾಗಿರುವ ಮನೆಪಾಠದ ದಂಧೆಯನ್ನು (ಟ್ಯೂಷನ್ ಮಾಫಿಯಾ) ನಿಷೇಧಿಸುವುದರ ಜೊತೆಗೆ ಇಲ್ಲಿನ ಗೌರಿಕಾಲುವೆ ಬಡಾವಣೆಯ ಗುರುಕುಲ ವಿದ್ಯಾಸಂಸ್ಥೆಯ ಹದಗೆಟ್ಟಿರುವ ರಸ್ತೆಯನ್ನು ದುರಸ್ತಿಪಡಿಸುವಂತೆ ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ನಗರದಲ್ಲಿ ಗುರುವಾರ ಪ್ರತಿಭಟನೆ ನಡೆಸಿದರು.
 ಗುರುಕುಲ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳೊಂದಿಗೆ ಆಜಾದ್ ಪಾರ್ಕ್ ವೃತ್ತದಿಂದ ಪ್ರತಿಭಟನಾ ಮೆರವಣಿಗೆ ನಡೆಸಿದ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ನಡೆಸಿ ಮನೆಪಾಠದ ದಂಧೆಯನ್ನು ತಕ್ಷಣ ನಿಷೇಧಿಸುವಂತೆ ಆಗ್ರಹಿಸಿದರು.
ಸುಲಿಗೆ ಮಾಡುತ್ತಿದ್ದಾರೆ: ಈ ಸಂದರ್ಭದಲ್ಲಿ ಮಾತನಾಡಿದ ವೇದಿಕೆಯ ಜಿಲ್ಲಾಧ್ಯಕ್ಷ ತೇಗೂರು ಜಗದೀಶ್, ಉಪನ್ಯಾಸಕರು ಮತ್ತು ಶಿಕ್ಷಕರು ಮನೆಪಾಠದ ದಂಧೆಯನ್ನು ನಡೆಸುವ ಮೂಲಕ ಬಡವಿದ್ಯಾರ್ಥಿಗಳನ್ನು ಸುಲಿಗೆ ಮಾಡುತ್ತಿದ್ದಾರೆ. ಹಣತೆತ್ತು ಟ್ಯೂಷನ್ಗೆ ಹೋಗದ ವಿದ್ಯಾರ್ಥಿಗಳಿಗೆ ಕಡಿಮೆ ಅಂಕ ನೀಡಿ ಅನುತ್ತೀರ್ಣಗೊಳಿಸುತ್ತಿದ್ದಾರೆ ಎಂದು ಆರೋಪಿಸಿದರು.
ತಕ್ಷಣ ನಿಷೇಧಿಸಿ: ಈ ಬೆಳವಣಿಗೆಯಿಂದಾಗಿ ಬಡ ವಿದ್ಯಾರ್ಥಿಗಳು ಮತ್ತು ಪೋಷಕರು ತತ್ತರಿಸುತ್ತಿದ್ದಾರೆ ಎಂದ ಅವರು, ಈ ಹಿನ್ನೆಲೆಯಲ್ಲಿ ಟ್ಯೂಷನ್ ಮಾಫಿಯಾವನ್ನು ತಕ್ಷಣ ನಿಷೇಧಿಸಿ ಪತ್ರಿಕಾ ಪ್ರಕಟಣೆ ಹೊರಡಿಸಬೇಕು, ಬೇಲೂರು ರಸ್ತೆಯ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಮನೆಪಾಠಕ್ಕೆ ಹೋಗದ 66 ವಿದ್ಯಾರ್ಥಿಗಳಿಗೆ ಕಡಿಮೆ ಅಂಕ ನೀಡಿ ಅನುತ್ತೀರ್ಣಗೊಳಿಸಿರುವ ಉಪನ್ಯಾಸಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ನಗರದ ಗೌರಿಕಾಲುವೆ ಬಡಾವಣೆಯಲ್ಲಿರುವ ಗುರುಕುಲ ವಿದ್ಯಾಸಂಸ್ಥೆಯ ರಸ್ತೆ ಸಂಪೂರ್ಣ ಹದಗೆಟ್ಟಿದ್ದು  ಮಳೆಯಿಂದಾಗಿ ಕೆಸರಿನ ಕೂಪವಾಗಿದೆ. ಸಾರ್ವಜನಿಕರು ಮತ್ತು ಶಾಲಾ ಮಕ್ಕಳು ಓಡಾಡಲಾರದಂತಹ ಸ್ಥಿತಿ ನಿರ್ಮಾಣವಾಗಿದೆ ಎಂದು ದೂರಿದರು.
ದ್ವೇಷದ ರಾಜಕಾರಣ: ರಸ್ತೆಯನ್ನು ದುರಸ್ತಿಪಡಿಸುವಂತೆ ಹಲವಾರು ಬಾರೀ ನಗರಸಭೆಗೆ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಆ ಭಾಗದ ಜನ ತಮಗೆ ಮತ ನೀಡಿಲ್ಲ ಎಂಬ ಕಾರಣಕ್ಕಾಗಿ ನಗರಸಭೆ ಸದಸ್ಯರು ರಸ್ತೆಯನ್ನು ದುರಸ್ತಿಪಡಿಸದೇ ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
 ಮನೆಪಾಠದ ದಂಧೆಯನ್ನು ತಕ್ಷಣ ನಿಷೇಧಿಸಿ ಪತ್ರಿಕಾ ಪ್ರಕಟಣೆಯನ್ನು ನೀಡಬೇಕು. ಗುರುಕುಲ ವಿದ್ಯಾಸಂಸ್ಥೆಯ ರಸ್ತೆಯನ್ನು ದುರಸ್ತಿಪಡಿಸಬೇಕು ಎಂದು ಆಗ್ರಹಿಸಿ ಇಂದಿನ ಪ್ರತಿಭಟನೆ ಸಾಂಕೇತಿಕವಾಗಿದ್ದು ಬೇಡಿಕೆ ಈಡೇರದಿದ್ದಲ್ಲಿ  ಅನಿರ್ಧಿಷ್ಟ ಧರಣಿ ಹಮ್ಮಿಕೊಳ್ಳುವ ಎಚ್ಚರಿಕೆ ನೀಡಿದರು.
 ಜಿಲ್ಲಾಧಿಕಾರಿ ಕಚೇರಿ ಸಹಾಯಕ ಶ್ರೀನಿವಾಸ್ ಅವರಿಗೆ ಮನವಿ ಸಲ್ಲಿಸಲಾಯಿತು. ವೇದಿಕೆಯ ಜಿಲ್ಲಾ ಉಪಾಧ್ಯಕ್ಷ ಕೆಂಪನಹಳ್ಳಿ ಅಶೋಕ್, ಕಾರ್ಯದರ್ಶಿ ಪಂಚಾಕ್ಷರಿ, ಸಂಘಟನಾ ಕಾರ್ಯದರ್ಶಿ ಕೋಟೆ ಮಲ್ಲೇಶ್, ತಾಲೂಕು ಪ್ರಧಾನ ಕಾರ್ಯದರ್ಶಿ ಸಿದ್ದೇಗೌಡ, ನಗರ ಉಪಾಧ್ಯಕ್ಷ ಇರ್ಷಾದ್ ಅಹ್ಮದ್ ಇದ್ದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement