ಶಾಸಕ- ಕಾಂಗ್ರೆಸ್ ಸದಸ್ಯರ ನಡುವೆ ವಾಗ್ವಾದ
ಕ.ಪ್ರ.ವಾರ್ತೆ ಟಿ ಚಿಕ್ಕಮಗಳೂರು ಟಿ ಜೂ.27
ನಗರಸಭೆಯ ಅಧಿಕಾರಿಗಳ ಸಭೆಯನ್ನು ನಡೆಸಲು ಶಾಸಕರಿಗೆ ಅಧಿಕಾರ ಇದೆಯಾ ಅಥವಾ ಇಲ್ಲವೇ.
- ಈ ಪ್ರಶ್ನೆಯ ಉತ್ತರಕ್ಕಾಗಿ ಶಾಸಕ ಸಿ.ಟಿ. ರವಿ ಮತ್ತು ಕಾಂಗ್ರೆಸ್ ನಗರಸಭಾ ಸದಸ್ಯರ ನಡುವೆ ನಗರಸಭಾ ಸಭಾಂಗಣದಲ್ಲಿ ಗುರುವಾರ ವಾಗ್ವಾದ, ಧರಣಿ, ಪೊಲೀಸರ ಮಧ್ಯ ಪ್ರವೇಶ ನಡೆಯಿತು.
ಶಾಸಕ ಸಿ.ಟಿ. ರವಿ ಅವರು ನಗರಸಭೆಯಲ್ಲಿ ಮಧ್ಯಾಹ್ನ ಅಧಿಕಾರಿಗಳ ಸಭೆಯನ್ನು ನಡೆಸುತ್ತಿದ್ದರು. ಅದೇ ವೇಳೆಗೆ ನಗರಸಭೆಯ ಕಾಂಗ್ರೆಸ್ ಸದಸ್ಯರು ಎಚ್.ಎಸ್. ಪುಟ್ಟಸ್ವಾಮಿ ನೇತೃತ್ವದಲ್ಲಿ ಸಭೆಯ ಮಧ್ಯ ಪ್ರವೇಶ ಮಾಡಿದರು.
ನಡೆದದ್ದೇನು? ಆಗ ಪುಟ್ಟಸ್ವಾಮಿ ಅವರು ಶಾಸಕರನ್ನು ಉದ್ದೇಶಿಸಿ, ಶಾಸಕರೇ ನೀವು ಅಧಿಕಾರಿಗಳ ಸಭೆಯನ್ನು ಕರೆಯುವ ಮೂಲಕ ನಗರಸಭಾ ಆಡಳಿತದಲ್ಲಿ ಹಸ್ತಾಕ್ಷೇಪ ಮಾಡುತ್ತಿದ್ದೀರಾ ಎಂದು ಹೇಳಿದರು. ಅದಕ್ಕೆ ಶಾಸಕ ಸಿ.ಟಿ. ರವಿ ಪ್ರತಿಕ್ರಿಯಿಸಿ, ನಾನು ನಡೆಸುತ್ತಿರುವ ಸಭೆಗೆ ನೀವು ಅಡ್ಡಿಪಡಿಸುತ್ತಿರುವುದು ತಪ್ಪು. ನಗರಸಭೆಯಲ್ಲಿ ಆಡಳಿತ ಮಂಡಳಿಯೇ ಅಸ್ತಿತ್ವಕ್ಕೆ ಬಂದಿಲ್ಲ, ಎನ್ನುತ್ತಿದ್ದಂತೆ ಹಾಗಾದರೆ ನೀವು ಕೂಡ ನಗರಸಭೆಯ ಸದಸ್ಯರು ಇದ್ದಂತೆ ಅದುದರಿಂದ ನಿಮಗೆ ಸಭೆ ನಡೆಸಲು ಅಧಿಕಾರ ಇಲ್ಲ ಎಂದು ಪುಟ್ಟಸ್ವಾಮಿ ಹೇಳಿದರು.
ಸಂವಿಧಾನದಲ್ಲಿ ನೀಡಿರುವ ಅಧಿಕಾರದ ಪ್ರಕಾರ ಸಭೆಯನ್ನು ಕರೆದಿದ್ದೇನೆ ಎಂದು ಶಾಸಕರು ಹೇಳಿದಾಗ, ಸಭೆ ಕರೆಯುವ ಅಧಿಕಾರ ನಿಮಗೆ ಇಲ್ಲ ಎಂದು ಪುಟ್ಟಸ್ವಾಮಿ ಪುನರುಚ್ಚರಿಸಿದರು. ನನಗೆ ಸಭೆ ಕರೆಯಲು ಅಧಿಕಾರ ಇಲ್ಲ ಎಂದು ಸಿಎಂಗೆ ತಿಳಿಸಿ ಎಂದು ಹೇಳಿದ ಶಾಸಕರು, ಕಾನೂನು ತಿಳಿದುಕೊಂಡು ಮಾತನಾಡಿ, ನಾನು ಕರೆದಿರುವ ಸಭೆ ಇದು, ತಡೆಯುವುದು ಏಕೆಂದು ಪ್ರಶ್ನಿಸಿದರು.
ನಾನು ನಗರದ ಪ್ರತಿನಿಧಿ, ಸಣ್ಣ ಬುದ್ಧಿ ಪ್ರದರ್ಶನ ಮಾಡುವುದು ಬೇಡ, ಬೇಕಿದ್ದರೆ ನಗರಸಭೆಯಲ್ಲಿ ಹಕ್ಕುಚ್ಯುತಿ ಮಂಡಿಸಿ ಎಂದು ಕಾಂಗ್ರೆಸ್ ಸದಸ್ಯರನ್ನು ತರಾಟೆ ತೆಗೆದುಕೊಂಡ ಶಾಸಕರು, ಹೊರಗೆ ಹೋಗಿ, ಇಲ್ಲವೆ ಸಭೆಯಲ್ಲಿ ಕುಳಿತುಕೊಳ್ಳಿ ಎಂದರು.
ಅಧಿಕೃತ ಸದಸ್ಯರಲ್ಲ: ನಗರದಲ್ಲಿ ಮಳೆಯಿಂದಾಗಿ ಕೆಲವು ರಸ್ತೆಗಳು ಕೆಸರಿನಿಂದ ಕೂಡಿವೆ. ಸಾಂಕ್ರಾಮಿಕ ರೋಗದ ಬೀತಿ ಎದುರಾಗಿದೆ. ನಗರದ ಕಾಳಜಿಯಿಂದಾಗಿ ಸಭೆ ಕರೆಯಲಾಗಿದೆ ಎಂದು ಶಾಸಕರು ಹೇಳುತ್ತಿದ್ದಂತೆ, ಶಾಸಕರು ನಗರಸಭೆಯ ಅಧಿಕಾರಿಗಳ ಸಭೆಯನ್ನು ಕರೆಯಲು ಕಾಯ್ದೆಯಲ್ಲಿ ಅವಕಾಶ ಇದೀಯಾ ಎಂದು ಪುಟ್ಟಸ್ವಾಮಿ ಮರು ಪ್ರಶ್ನೆ ಮಾಡಿದಾಗ, ಇದಕ್ಕೆ ಉತ್ತರಿಸಿದ ಶಾಸಕರು, ಅವಕಾಶ ಇದೆ ಎಂದು ಹೇಳುವ ಜತೆಗೆ ನೀವು ಅಧಿಕೃತ ಸದಸ್ಯರೆ ಅಲ್ಲ. ಹೊರಗೆ ಹೋಗಿ ಎಂದು ಶಾಸಕರು ಗುಡುಗಿದರು.
ಆಗ ನಗರಸಭಾ ಸದಸ್ಯರು, ನಗರಸಭೆಯ ಪ್ರಭಾರಿ ಪೌರಾಯುಕ್ತ ಪುರುಷೋತ್ತಮ್ ಅವರತ್ತ ತಿರುಗಿ, ಶಾಸಕರು, ಅಧಿಕಾರಿಗಳ ಸಭೆಯನ್ನು ನಡೆಸಲು ಅವಕಾಶ ಇದೆಯಾ, ಇದ್ದರೆ ಲಿಖಿತವಾಗಿ ಮಾಹಿತಿ ಕೊಡಿ ಎಂದು ಕಾಂಗ್ರೆಸ್ ನಗರಸಭಾ ಸದಸ್ಯರು ಆಗ್ರಹಿಸಿದರು.
ಕಾಂಗ್ರೆಸ್ ಸದಸ್ಯರ ಧರಣಿ: ಅವಕಾಶ ಇದೆ ಎಂದು ಪೌರಾಯುಕ್ತರು ಹೇಳಿದರು. ಆಗ ಶಾಸಕರು ಸಭೆಯನ್ನು ಮುಂದುವರೆಸಲು ಯತ್ನಿಸಿದಾಗ ಸದಸ್ಯರು ಸ್ಥಳದಲ್ಲೇ ಧರಣಿ ಕುಳಿತರು. ಪೊಲೀಸರನ್ನು ಕರೆದು ಇವರನ್ನು ಹೊರಗೆ ಕಳುಹಿಸಿ ಎಂದು ಶಾಸಕರು ಹೇಳಿದ ಕೇವಲ ಸಮಯದಲ್ಲಿ ಪೊಲೀಸರು ಮಧ್ಯ ಪ್ರವೇಶ ಮಾಡಿ, ಪ್ರತಿಭಟನಾ ನಿರತರನ್ನು ಹೊರಗೆ ಕರೆದುಕೊಂಡು ಬಂದರು. ಆಗ ಪ್ರತಿಭಟನೆಗೆ ಬೆಂಬಲ ಸೂಚಿಸಿ ಕಾಂಗ್ರೆಸ್ ಪಕ್ಷದ ಮುಖಂಡರು ನಗರಸಭೆಯ ಆಡಳಿತ ಕಚೇರಿಯ ಮುಂಭಾಗದಲ್ಲಿ ಧರಣಿ ನಡೆಸಿದರು.
ಇದೇ ವೇಳೆಗೆ ಕಾಂಗ್ರೆಸ್ನ ನಗರಸಭಾ ಸದಸ್ಯರು ಪೌರಾಯುಕ್ತರಿಗೆ ಲಿಖಿತವಾಗಿ ಪತ್ರವನ್ನು ಬರೆದು ಶಾಸಕರು, ಅಧಿಕಾರಿಗಳ ಸಭೆಯನ್ನು ನಡೆಸಲು ಅವಕಾಶ ಇದೆಯಾ, ಇಲ್ಲವೇ ಎಂಬುದರ ಬಗ್ಗೆ ಉತ್ತರ ನೀಡಬೇಕೆಂದು ಆಗ್ರಹಿಸಿದರು.
ವಿಧಾನಸಭಾಧ್ಯಕ್ಷರಿಗೆ ದೂರು: ನಗರಸಭೆಯ ಪ್ರಗತಿ ಪರಿಶೀಲನಾ ಸಭೆ ನಡೆಸಲು ಶಾಸಕರಿಗೆ ಅಧಿಕಾರ ಇದೆ ಎಂದು ಶಾಸಕ ರವಿ ಹೇಳಿದ್ದಾರೆ.
ನಗರದ ವ್ಯಾಪ್ತಿಯಲ್ಲಿ ಈವರೆಗೆ 9 ಜನ ಡೆಂಘೀಯಿಂದ ಆಸ್ಪತ್ರೆಗೆ ಸೇರಿದ್ದಾರೆ. ರಸ್ತೆಗಳು ಕೆಸರಾಗಿವೆ. ಕೆಲವೆಡೆ ಕುಡಿಯುವ ನೀರಿನ ಸಮಸ್ಯೆ ಇದೆ. ಇದರ ಬಗ್ಗೆ ಜನರು ಪ್ರಶ್ನೆ ಮಾಡುತ್ತಿದ್ದಾರೆ. ಮಳೆಗಾಲದ ಈ ಸಂದರ್ಭದಲ್ಲಿ ಜನರ ಅವಶ್ಯಕತೆಗೆ ಗಮನಹರಿಸುವುದು ನಮ್ಮ ಕರ್ತವ್ಯ, ಅದುದರಿಂದ ಸಭೆಯನ್ನು ಕರೆಯಲಾಗಿದೆ ಎಂದು ಸುದ್ದಿಗಾರರೊಂದಿಗೆ ಮಾತನಾಡುವಾಗ ತಿಳಿಸಿದರು.
ನಗರಸಭೆಯ ಆಯುಕ್ತರ ಹುದ್ದೆ ಖಾಲಿ ಇದೆ. ನಗರಸಭೆ ಚುನಾವಣೆ ನಡೆದು ಮೂರುವರೆ ತಿಂಗಳು ಕಳೆದರೂ ಹೊಸ ಆಡಳಿತ ಮಂಡಳಿ ಅಸ್ತಿತ್ವಕ್ಕೆ ಬಂದಿಲ್ಲ. ಈ ಸಂದರ್ಭದಲ್ಲಿ ಜನರ ಸಮಸ್ಯೆಗಳಿಗೆ ಸ್ಪಂದಿಸುವುದು ನನ್ನ ಕರ್ತವ್ಯ. ಕಾಂಗ್ರೆಸ್ನ ನಗರಸಭಾ ಸದಸ್ಯರು ತಪ್ಪು ತಿಳಿವಳಿಕೆಯಿಂದಾಗಿ ಸಭೆಗೆ ಅಡ್ಡಿಪಡಿಸಿದ್ದಾರೆ. ಜನಪ್ರತಿನಿಧಿಗಳ ಮೇಲೆ ದಬ್ಬಾಳಿಕೆ ನಡೆಸುವ ಇವರು, ಜನರ ಮೇಲೆ ಇನ್ಯಾವ ರೀತಿಯಲ್ಲಿ ದಬ್ಬಾಳಿಕೆ ನಡೆಸಬಹುದು ಎಂದು ಪ್ರಶ್ನಿಸಿದರು.
ಇದೊಂದು ಅಧಿಕೃತ ಸಭೆ. ಸಭೆಗೆ ಅಡ್ಡಿಪಡಿಸಿದವರ ವಿರುದ್ಧ ಪೌರಾಯುಕ್ತರು ಪೊಲೀಸರಿಗೆ ದೂರು ಸಲ್ಲಿಸಬೇಕು. ಅವರ ಗೊಡ್ಡು ಬೆದರಿಕೆಗೆ ಭಯಪಡಬಾರದು. ಕರ್ತವ್ಯಕ್ಕೆ ಅಡ್ಡಿಪಡಿಸಿದ ಕಾಂಗ್ರೆಸ್ನ ನಗರಸಭಾ ಸದಸ್ಯರ ವಿರುದ್ಧ ವಿಧಾನಸಭಾಧ್ಯಕ್ಷರಿಗೆ ದೂರು ಸಲ್ಲಿಸಲಾಗುವುದು ಎಂದು ಹೇಳಿದರು.