ಅಕ್ರಮ ಮರಳು ಸಾಗಾಟಕ್ಕೆ ಕಡಿವಾಣ
ಮೂಡಿಗೆರೆ: ಹೇಮಾವತಿ ನದಿಯ ಆಸುಪಾಸಿನಲ್ಲಿ ನಡೆಯುತ್ತಿರುವ ಅಕ್ರಮ ಮರಳು ಸಾಗಾಟ, ಸಂಗ್ರಹ ಪ್ರಕರಣಗಳನ್ನು ಗಂಭಿರವಾಗಿ ಪರಿಗಣಿಸಿ ತನಿಖೆಗೆ ಆದೇಶಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವ ಸಹಿತ ಮುಖ್ಯಮಂತ್ರಿಗಳ ಗಮನ ಸೆಳೆಯಲಾಗುವುದು ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಬಿ.ಎನ್. ಚಂದ್ರಪ್ಪ ತಿಳಿಸಿದ್ದಾರೆ. ಈ ಕುರಿತು ಹೇಳಿಕೆ ನೀಡಿ, ಅಕ್ರಮ ಮರಳು ಗಣಿಗಾರಿಕೆ ವಿರುದ್ಧ ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ ಕಾನೂನು ಕ್ರಮ ಜರುಗಿಸಲು ಬದ್ಧವಾಗಿದೆ. ಸದ್ಯ ಗಣಿಗಾರಿಕೆ, ಸಾಗಾಣಿಕೆ ಮತ್ತು ಸಂಗ್ರಹಿಸಲು ಯಾವುದೇ ಅನುಮತಿಯಿಲ್ಲ ಎಂದು ಹೇಳಿದ್ದಾರೆ. ರಾತ್ರೋರಾತ್ರಿ ಮರಳು ನಾಪತ್ತೆಯಾಗುತ್ತಿರುವ ಆರೋಪಗಳಿದ್ದು, ಮರಳು ದಂಧೆಕೋರರನ್ನು ಮಟ್ಟ ಹಾಕುವ ಪ್ರಯತ್ನ ನಡೆಯಲಿದೆ ಎಂದಿದ್ದಾರೆ.