ಪತ್ನಿಗೆ ಕೊಲೆಗೆ ಸುಪಾರಿ: ಪತಿ ಸೇರಿ 4 ಬಂಧನ
ಕ.ಪ್ರ.ವಾರ್ತೆ, ಚಿಕ್ಕಮಗಳೂರು, ಜೂ.28
ಮೂಡಿಗೆರೆ ತಾಲೂಕಿನ ಚಾರ್ಮಾಡಿ ಘಾಟ್ ರಸ್ತೆಯಲ್ಲಿ ಜೂ. 21 ರಂದು ಮಹಿಳೆಯ ಶವ ಪತ್ತೆಯಾಗಿದ್ದ ಪ್ರಕರಣವನ್ನು ಭೇದಿಸಿರುವ ಪೊಲೀಸರು, ಈಕೆಯ ಕೊಲೆಗೆ ಸುಪಾರಿ ನೀಡಿದ್ದ ಪತಿ ಸೇರಿದಂತೆ ನಾಲ್ವರನ್ನು ಬಂಧಿಸಿದ್ದಾರೆ.
ಬಂಧಿತ ಆರೋಪಿಗಳು ಭದ್ರಾವತಿ ತಾಲೂಕಿನ ಮಂಗೋಟಿ ಗ್ರಾಮದ ರಂಗೇಶಿ, ಶಿವಮೊಗ್ಗ ಸಮೀಪದ ಚಿಕ್ಕಲ್ನ ನಿವಾಸಿಗಳಾದ ಹಾಲೇಶ್, ಗಿರೀಶ್ ಹಾಗೂ ಸತೀಶ್.
ಹೆಂಡತಿಯ ಶೀಲವನ್ನು ಶಂಕಿಸಿ ಆಕೆಯನ್ನು ಕೊಲೆ ಮಾಡಿಸಲು ಪತಿ ರಂಗೇಶಿ, ತನ್ನ ಸ್ನೇಹಿತರಿಗೆ 30 ಸಾವಿರ ರುಪಾಯಿ ಕೊಟ್ಟಿದ್ದು, ಕೊಲೆಯ ಮುನ್ನ 8 ಸಾವಿರ ರುಪಾಯಿಯನ್ನು ಅಡ್ವಾನ್ಸ್ ನೀಡಿದ್ದು, ಸಾಂದರ್ಭಿಕ ಸಾಕ್ಷಿ ಮತ್ತು ತಾಂತ್ರಿಕ ಸಾಕ್ಷ್ಯಾಧಾರಗಳಿಂದ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಜಿಲ್ಲಾ ರಕ್ಷಣಾಧಿಕಾರಿ ಎನ್. ಶಶಿಕುಮಾರ್ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಘಟನೆಯ ವಿವರ: ಮೂಡಿಗೆರೆ ತಾಲೂಕಿನ ಚಾರ್ಮಾಡಿ ಘಾಟ್ ರಸ್ತೆಯಲ್ಲಿ ಜೂ. 21 ರಂದು ಮಹಿಳೆಯ ಶವ ಪತ್ತೆಯಾಗಿದ್ದು, ಮೃತಪಟ್ಟ ಮಹಿಳೆ ಭದ್ರಾವತಿ ತಾಲೂಕಿನ ಮಂಗೋಟಿ ಗ್ರಾಮದ ಮಮತಾ ಎಂಬುದು ತಿಳಿದು ಬಂದಿದ್ದು, ಈ ಪ್ರಕರಣದ ಪತ್ತೆಯಾಗಿ ಹೆಚ್ಚುವರಿ ಜಿಲ್ಲಾ ರಕ್ಷಣಾಧಿಕಾರಿ ಮಿತ್ರಾ ಹೆರಾಜೆ ಅವರ ನೇತೃತ್ವದಲ್ಲಿ ಅಧಿಕಾರಿಗಳ ತಂಡವನ್ನು ರಚನೆ ಮಾಡಲಾಗಿತ್ತು.
ಪ್ರಕರಣದ ತನಿಖೆಯ ವೇಳೆಯಲ್ಲಿ ಮೃತ ಮಹಿಳೆಯ ಪತಿ ರಂಗೇಶಿ ಮೇಲೆ ಅನುಮಾನ ಬಂದಿದ್ದರಿಂದ ಆತನನ್ನು ವಿಚಾರಣೆಗೆ ಒಳಪಡಿಸಿದಾಗ ಮತ್ತು ದೊರೆತ ಸಾಂದರ್ಭಿಕ ಸಾಕ್ಷಿ ಹಾಗೂ ತಾಂತ್ರಿಕ ಸಾಕ್ಷ್ಯಾಧಾರಗಳ ಆಧಾರದ ಮೇಲೆ ಈ ಪ್ರಕರಣವನ್ನು ಬೇಧಿಸಲಾಗಿದೆ ಎಂದು ಜಿಲ್ಲಾ ರಕ್ಷಣಾಧಿಕಾರಿಗಳು ಹೇಳಿದರು.
ರಂಗೇಶಿ ಮತ್ತು ಮಮತಾ ಪ್ರೀತಿಸಿ ವಿವಾಹವಾಗಿದ್ದರು. ಅವರಿಗೆ ಹುಟ್ಟಿದ ಮಗುವೊಂದು ಬಾಲ್ಯದಲ್ಲೇ ಮೃತಪಟ್ಟಿತ್ತು. ಆರಂಭದಲ್ಲಿ ಅನ್ಯೂನ್ಯವಾಗಿದ ಈ ದಂಪತಿಗಳ ನಡುವೆ ಆಗಾಗ ಚಿಕ್ಕಪುಟ್ಟ ಜಗಳಗಳು ನಡೆದಿದ್ದು, ಗ್ರಾಮದ ಮುಖಂಡರು ಹಲವು ಬಾರಿ ಮಧ್ಯಸ್ಥಿಕೆ ವಹಿಸಿ ರಾಜಿ ಮಾಡಿದ್ದರು. ಮೃತಳ ಗಂಡ ತನ್ನ ಹೆಂಡತಿಯ ಶೀಲದ ಮೇಲೆ ಸಂಶಯ ಬಂದು ಆಕೆಯನ್ನು ಮುಗಿಸಲು ಚಿಕ್ಕಲ್ನ ಗಿರೀಶ್, ಹಾಲೇಶ್ ಮತ್ತು ಸತೀಶ್ ಅವರನ್ನು ಬಳಸಿಕೊಂಡಿದ್ದಾನೆ.
ರಂಗೇಶಿ ಮೈಮೇಲೆ ದೇವರು ಬರುತ್ತಿದ್ದರಿಂದ ಈ ಮೂರು ಆರೋಪಿಗಳು ಆತನಿಗೆ ಸ್ನೇಹಿತರಾಗಿದ್ದು, ಅವರನ್ನು ಈ ಕೊಲೆ ಮಾಡಲು ರಂಗೇಶಿ ಬಳಸಿಕೊಂಡಿದ್ದಾನೆ. ಕೊಲೆ ಮಾಡಲು 30 ಸಾವಿರ ಕೊಡುವುದಾಗಿ ಹೇಳಿ, ಪ್ರಥಮದಲ್ಲಿ 8 ಸಾವಿರ ರುಪಾಯಿ ಮುಂಗಡವಾಗಿ ನೀಡಿದ್ದ. ತಾನು ಬಹಳ ಸಾಲ ಮಾಡಿದ್ದು, ಸಾಲಗಾರರಿಂದ ತಪ್ಪಿಸಿಕೊಳ್ಳಲು ಮಂಗೋಟಿ ಗ್ರಾಮವನ್ನು ಬಿಟ್ಟು ಮಂಗಳೂರಿಗೆ ಹೋಗಿ ನೆಲೆಸೋಣ ಎಂದು ಪತ್ನಿಗೆ ರಂಗೇಶಿ ಹೇಳಿದ್ದಾನೆ. ಇದಕ್ಕೆ ಮಮತಾ ಆರಂಭದಲ್ಲಿ ಒಪ್ಪಿರುವುದಿಲ್ಲ. ಬಳಿಕ ಆಕೆಯ ಮನವೊಲಿಸಿದ್ದು, ಇಬ್ಬರು ಒಟ್ಟಿಗೆ ಊರಿನಿಂದ ಹೋದರೆ ಗ್ರಾಮಸ್ಥರಿಗೆ ಅನುಮಾನ ಬರಬಹುದು. ಅದುದರಿಂದ ಸ್ನೇಹಿತರೊಂದಿಗೆ ಮೊದಲು ಮಂಗಳೂರಿಗೆ ಹೊರಡು ನಂತರದಲ್ಲಿ ತಾನು ಬರುವುದಾಗಿ ಹೇಳಿ ಕಳುಹಿಸಿದ್ದಾನೆ.
ಆಗ, ಗಿರೀಶ್ ಅವರ ಪರಿಚಯಸ್ಥರ ಮನೆಯಲ್ಲಿ ಮಮತಾ ಅವರನ್ನು ಎರಡು ದಿನ ಇರಿಸಿ ಬಳಿಕ ಹಾಲೇಶ್, ಗಿರೀಶ್ ಹಾಗೂ ಸತೀಶ್ ಅವರು ಶಿವಮೊಗ್ಗದಿಂದ ಟಾಟಾ ಇಂಡಿಕಾ ಕಾರಿನಲ್ಲಿ ಮಮತಾ ಅವರನ್ನು ಕರೆದುಕೊಂಡು ಚಾರ್ಮಾಡಿ ಘಾಟ್ ಮೂಲಕ ಮಂಗಳೂರಿಗೆ ಕರೆದುಕೊಂಡು ಹೋಗುವಾಗ ಚಾರ್ಮಾಡಿ ಘಾಟ್ ರಸ್ತೆಯಲ್ಲಿರುವ ಮಲಯ ಮಾರುತ ಬಳಿ ಆಕೆಯ ತಲೆಗೆ ಬಿಯರ್ ಬಾಟಲಿಯಿಂದ ಹೊಡೆಯಲಾಗಿದೆ.
ಬಳಿಕ ಆಕೆಯ ಕೈಯಲ್ಲಿದ್ದ ವ್ಯಾನೈಟಿ ಬ್ಯಾಗಿನಿಂದ ಕುತ್ತಿಗೆ ಬಿಗಿದು ಕೊಲೆ ಮಾಡಿ ಮೃತ ದೇಹವನ್ನು ಸೇತುವೆಯಿಂದ ಕೆಳಗೆ ಹಾಕಿ, ಅದೇ ಮಾರ್ಗವಾಗಿ ಧರ್ಮಸ್ಥಳ, ಕುಕ್ಕೆ ಸುಬ್ರಹ್ಮಣ್ಯಕ್ಕೆ ಹೋಗಿ ಸಕಲೇಶಪುರ ಮಾರ್ಗವಾಗಿ ಹಾಸನಕ್ಕೆ ಬಂದು, ಅಲ್ಲಿಂದ ಶಿವಮೊಗ್ಗಕ್ಕೆ ಆರೋಪಿಗಳು ತೆರಳಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ರಂಗೇಶಿ, ಹಾಲೇಶ್, ಗಿರೀಶ್ ಹಾಗೂ ಸತೀಶ್ ಎಂಬವರನ್ನು ಬಂಧಿಸಿ, ಬಣಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ ಎಂದು ಹೇಳಿದರು.
ಅಂದು ಪತಿ ಹೇಳಿದ್ದೇನು?
ಜೂ. 21 ರ ರಾತ್ರಿ ಸುಮಾರು 9.30ಕ್ಕೆ ರಂಗೇಶಿ, ಮೃತ ಮಮತಾಳ ತಾಯಿ ಹಾಗೂ ಸಂಬಂಧಿಕರು ಜಿಲ್ಲಾ ಸಾರ್ವಜನಿಕ ಆಸ್ಪತ್ರೆಗೆ ಬಂದು ಮೃತ ದೇಹವನ್ನು ಕಂಡು ಅತ್ತರು.
ಇದೇ ವೇಳೆಗೆ ರಂಗೇಶಿ ಪೊಲೀಸರ ಎದುರು, ಹೇಳಿದ್ದು- ನನ್ನ ಆರೋಗ್ಯ ಸರಿ ಇಲ್ಲ. ಶಿವಮೊಗ್ಗದ ಖಾಸಗಿ ಆಸ್ಪತ್ರೆಯಲ್ಲಿ ಒಳ ರೋಗಿಯಾಗಿ ಚಿಕಿತ್ಸೆ ಪಡೆದು ಎರಡು ದಿನಗಳ ಹಿಂದೆಯಷ್ಟೇ ಮನೆಗೆ ಬಂದಿದ್ದೆ. ಅಪ್ಪ- ಅಮ್ಮ, ನಾನು ಮತ್ತು ಹೆಂಡತಿ ಮಮತಾ ಒಂದೇ ಮನೆಯಲ್ಲಿ ವಾಸವಾಗಿದ್ದು, ರಾತ್ರಿ ಊಟ ಮಾಡಿ ಮಲಗಿದ್ದೆವು. ಬೆಳಿಗ್ಗೆ ನಾನು ತಡವಾಗಿ ಎದ್ದು ನೋಡಿದಾಗ ಪತ್ನಿ ಮನೆಯಲ್ಲಿರಲಿಲ್ಲ. ಎಲ್ಲಾ ಕಡೆ ಹುಡುಕಿದರೂ ಸಿಗಲಿಲ್ಲ. ನನ್ನ ಹೆಂಡತಿಯನ್ನು ಕೊಲೆ ಮಾಡಿದವರನ್ನು ಪತ್ತೆ ಹಚ್ಚಿ ಅವರಿಗೆ ಶಿಕ್ಷೆ ನೀಡಬೇಕು ಎಂದು ಎರಡು ಕೈಯಲ್ಲಿ ನಮಸ್ಕಾರ ಮಾಡಿದ್ದ. ಅಂದು ಆತ ಆಡಿದ್ದ ನಾಟಕ ಎಂಬುದು ಪೊಲೀಸರ ತನಿಖೆಯಿಂದ ಬಹಿರಂಗಗೊಂಡಿದೆ.