ಬೆಲೆ ಏರಿಕೆಗೆ ಬಿಜೆಪಿ, ಸಿಪಿಐ ಖಂಡನೆ
ಶೃಂಗೇರಿ: ಕೇಂದ್ರ ಸರ್ಕಾರ ಮತ್ತೆ ಪೆಟ್ರೋಲ್ ಬೆಲೆ ಏರಿಕೆ ಮಾಡಿರುವ ಕ್ರಮವನ್ನು ದಸಂಸ, ಬಿಜೆಪಿ ನಗರ ಮೋರ್ಚ, ಸಿಪಿಐ ತೀವ್ರವಾಗಿ ಖಂಡಿಸಿದೆ.
ದಸಸಂ ಜಿಲ್ಲಾ ಸಹಸಂಚಾಲಕ ಕರಡಯ್ಯ ಈ ಬಗ್ಗೆ ತಮ್ಮ ಹೇಳಿಕೆಯಲ್ಲಿ ಕೆಲ ದಿನಗಳ ಹಿಂದೆಯಷ್ಟೇ ಪೆಟ್ರೋಲ್ ದರ ಏರಿಸಿ, ಇದೀಗ ಮತ್ತೆ ದಿಢೀರ್ ಆಗಿ ಏರಿಸಿರುವುದು ಗ್ರಾಹಕರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಪದೇ ಪದೇ ಬೆಲೆ ಏರಿಕೆ ಮಾಡುತ್ತಿರುವುದು ಖಂಡನೀಯ ಎಂದರು.
ಬಿಜೆಪಿ ಖಂಡನೆ: ಬಿಜೆಪಿ ನಗರ ಮೋರ್ಚಾ ಅಧ್ಯಕ್ಷ ಮುರುಳಿಧರ ಪೈ, ಕೇಂದ್ರ ಸರ್ಕಾರದ ಬೆಲೆ ಏರಿಕೆ ನೀತಿ ಖಂಡನೀಯವಾಗಿದೆ. ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಜನ ಸಾಮಾನ್ಯರ ಬದುಕು ದುಸ್ತರವಾಗಿದೆ.ಯುಪಿಎ ಜನವಿರೋಧಿ ನೀತಿ ಅನುಸರಿಸುತ್ತಿದೆ. ಒಮ್ಮೆ ಪೆಟ್ರೋಲ್ ಬೆಲೆ, ಇನ್ನೊಮ್ಮೆ ಡಿಸೆಲ್ ಬೆಲೆ ಹೀಗೆ ಪದೇ ಪದೇ ಏರಿಕೆ ಮಾಡುತ್ತಿದೆ. ತಿಂಗಳಲ್ಲಿ ಎರಡನೇ ಬಾರಿಗೆ ಮತ್ತೆ ಪೆಟ್ರೋಲ್ ಬೆಲೆ ಏರಿಕೆ ಮಾಡಿರುವುದು ಗ್ರಾಹಕರಿಗೆ ಮಾಡಿರುವ ವಂಚನೆಯಾಗಿದೆ ಎಂದು ಆರೋಪಿಸಿದರು.
ಸಿಪಿಐ: ಸಿಪಿಐ ಮುಖಂಡ ಕೆಳವಳ್ಳಿ ಕಳಸಪ್ಪ ಕೇಂದ್ರದ ಯುಪಿಎ ಸರ್ಕಾರ ಪದೇ ಪದೇ ಅಗತ್ಯ ವಸ್ತುಗಳ ಬೆಲೆಯೇರಿಕೆ ಮಾಡುತ್ತಾ ಜನಸಾಮಾನ್ಯರ ಬದುಕಿನೊಂದಿಗೆ ಚೆಲ್ಲಾಟವಾಡುತ್ತಿದೆ. ಈ ಬೆಲೆ ಏರಿಕೆ ಕ್ರಮ ಜನಸಾಮಾನ್ಯರ ಗಾಯದ ಮೇಲೆ ಬರೆ ಎಳೆದಂತಾಗಿದೆ. ಬೆಲೆ ಏರಿಕೆ ಕ್ರಮ ಹಿಂತೆಗೆದುಕೊಳ್ಳಬೇಕು ಎಂದು ಹೇಳಿಕೆಯಲ್ಲಿ ಒತ್ತಾಯಿಸಿದ್ದಾರೆ.