ಆಧುನಿಕ ಜೀವನಶೈಲಿಯಿಂದ ಮಾನಸಿಕ ಒತ್ತಡ
ಕ.ಪ್ರ.ವಾರ್ತೆ, ಚಿಕ್ಕಮಗಳೂರು, ಜೂ.29
ಪ್ರಸ್ತುತ ಸಮಾಜದಲ್ಲಿ ಆಧುನಿಕ ಜೀವನಶೈಲಿಗೆ ಮಾನವ ಹೊಂದಿಕೊಳ್ಳುತ್ತಿರುವುದರಿಂದ ಮಾನಸಿಕ ಒತ್ತಡಕ್ಕೆ ಒಳಗಾಗುತ್ತಿರುವುದು ಸಾಮಾನ್ಯವಾಗಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರಾದ ಬಸವರಾಜ್ ಎ. ಪಾಟೀಲ್ ಹೇಳಿದ್ದಾರೆ.
ಜಿಲ್ಲಾ ನ್ಯಾಯಾಲಯದ ಪೂರಕ ಕಟ್ಟಡದ ಮೇಲ್ಭಾಗದ ಸಭಾಂಗಣದಲ್ಲಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಜೇಸಿಐ, ಸಿಡಿಸಿಎಸ್, ಆರೋಗ್ಯ ಇಲಾಖೆ ಹಾಗೂ ವಕೀಲರ ಸಂಘದ ಆಶ್ರಯದಲ್ಲಿ ಶನಿವಾರ ನಡೆದ ಆರೋಗ್ಯ ತಪಾಸಣಾ ಶಿಬಿರ ಹಾಗೂ ಕಾನೂನು ಅರಿವು-ನೆರವು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಅಧಿಕ ಒತ್ತಡ: ಸರ್ಕಾರಿ ನೌಕರರು ತಮ್ಮ ಉದ್ಯೋಗ ಕ್ಷೇತ್ರದಲ್ಲಿ ಹೆಚ್ಚಿನ ಮಾನಸಿಕ ಒತ್ತಡ ಅನುಭವಿಸುತ್ತಿರುವುದರಿಂದ ಇತ್ತೀಚೆಗೆ ಆರೋಗ್ಯ ಸಮಸ್ಯೆಗಳಿಗೆ ಒಳಗಾಗುತ್ತಿದ್ದಾರೆ. ಸಿಬ್ಬಂದಿ ಕೊರತೆಯಿಂದಾಗಿ ಪ್ರಸ್ತುತ ಕರ್ತವ್ಯದ ಒತ್ತಡ ಅಧಿಕವಾಗುತ್ತಿರುವುದರಿಂದ ಆರೋಗ್ಯ ಏರುಪೇರಾಗಲು ಕಾರಣವಾಗುತ್ತಿದೆ ಎಂದು ಹೇಳಿದರು.
ಆರೋಗ್ಯದ ನಿಷ್ಕಾಳಜಿ, ಆಹಾರ ಪದ್ಧತಿ ಹಾಗೂ ಮನಸ್ಸಿನ ಕೆಟ್ಟ ಆಲೋಚನೆಗಳು ಕೂಡ ಆರೋಗ್ಯವನ್ನು ಹದಗೆಡಿಸುತ್ತಿವೆ. ಆದರೆ, ಎಷ್ಟೇ ದುಡಿದು ಸಂಪಾದಿಸಿದರೂ, ಆರೋಗ್ಯವಿದ್ದಾಗ ಮಾತ್ರ ಆ ಹಣವನ್ನು ಬಳಸಿಕೊಳ್ಳಲು ಸಾಧ್ಯ. ಇಲ್ಲದಿದ್ದಲ್ಲಿ ಆ ಹಣ ನಿಷ್ಪ್ರಯೋಜಕ. ಆರೋಗ್ಯ ಉತ್ತಮವಾಗಿದ್ದಲ್ಲಿ ಮಾತ್ರ ಜೀವನದಲ್ಲಿ ಸಾರ್ಥಕವೆನಿಸಲಿದೆ ಎಂದು ತಿಳಿಸಿದರು.
ತಪಾಸಣೆ ಉತ್ತಮ: ಬೆಂಗಳೂರಿಗರಿಗೆ ಮಧುಮೇಹ ಹಾಗೂ ರಕ್ತದೊತ್ತಡದ ಬಗ್ಗೆ ಅರಿವೇ ಇರುವುದಿಲ್ಲ. ಇತರ ಆರೋಗ್ಯ ಸಮಸ್ಯೆಗೆ ಒಳಗಾಗಿ ತಪಾಸಣೆ ಮಾಡಿಕೊಂಡಾಗಲಷ್ಟೆ ಈ ರೋಗಗಳಿರುವುದು ಅವರ ಗಮನಕ್ಕೆ ಬರುವಂತಾಗಿದೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬರೂ ತಿಂಗಳಿಗೊಮ್ಮೆ ಆರೋಗ್ಯ ತಪಾಸಣೆಗೆ ಒಳಗಾಗುವುದು ಅಗತ್ಯ ಎಂದ ಅವರು, ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ನಿರ್ದೇಶನದ ಹಿನ್ನೆಲೆಯಲ್ಲಿ ಇದೀಗ ಜಿಲ್ಲಾಮಟ್ಟದಲ್ಲಿ ಆರೋಗ್ಯ ತಪಾಸಣಾ ಶಿಬಿರವನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದರು.
ಮಾನಸಿಕ ಒತ್ತಡ ಮತ್ತು ಮಧುಮೇಹದ ಕುರಿತು ಉಪನ್ಯಾಸ ನೀಡಿದ ನಗರದ ಅರಳಗುಪ್ಪೆ ಮಲ್ಲೇಗೌಡ ಜಿಲ್ಲಾ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಶಿವದತ್ತ, ಇಂದು ನಗರ ಹಾಗೂ ಗ್ರಾಮೀಣ ಪ್ರದೇಶದವರು ಹಣ ಸಂಪಾದನೆಯ ಬೆನ್ನು ಹತ್ತಿ ಹೋಗುತ್ತಿರುವುದನ್ನಷ್ಟೆ ಗುರಿಯಾಗಿಸಿಕೊಳ್ಳುವ ಭರದಲ್ಲಿ ಆರೋಗ್ಯವನ್ನು ನಿರ್ಲಕ್ಷಿಸುತ್ತಿದ್ದಾರೆ. ಕೊನೆಗೆ ಆರೋಗ್ಯ ಸಂಪೂರ್ಣವಾಗಿ ಕೆಟ್ಟು, ವೈದ್ಯರ ಮೊರೆ ಹೋಗುವುದು ಕಂಡು ಬರುತ್ತಿದೆ. ಪ್ರತಿಯೊಬ್ಬರೂ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ ಕಾಲಕಾಲಕ್ಕೆ ತಪಾಸಣೆ ಮಾಡಿಕೊಳ್ಳುವುದರ ಜೊತೆಗೆ ಕಾಯಿಲೆ ಆರಂಭದಲ್ಲೇ ಚಿಕಿತ್ಸೆ ಪಡೆಯುವುದು ಉತ್ತಮ ಎಂದು ತಿಳಿಸಿದರು.
ಜೇಸಿಐ ಅಧ್ಯಕ್ಷ ಪಿ.ಎಂ. ಸುಧಾಕರ್ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಹೆಚ್ಚುವರಿ ನ್ಯಾಯಾಧೀಶರಾದ ಮಂಜುನಾಥ ನಾಯಕ್, ವಕೀಲರ ಸಂಘದ ಅಧ್ಯಕ್ಷ ಕೆ.ಎಂ. ಅಬ್ದುಲ್ ಜಬ್ಬಾರ್, ಜೇಸಿಐ ಕಾರ್ಯಕ್ರಮ ನಿರ್ದೇಶಕ ಚೇತನ್ ಕುಮಾರ್, ಜೇಸಿಐ ವಲಯದ 14ರ ನಿರ್ದೇಶಕ ಸಿ.ಆರ್. ವೇಣುಗೋಪಾಲ್ ಭಾಗವಹಿಸಿದ್ದರು. ಹೆಚ್ಚುವರಿ ನ್ಯಾ. ಮಂಜುನಾಥ್ ನಾಯಕ್ ಸ್ವಾಗತಿಸಿದರು, ನ್ಯಾಯಾಂಗ ಇಲಾಖೆ ಉದ್ಯೋಗಿ ಸುರೇಶ್ ಕಾರ್ಯಕ್ರಮ ನಿರೂಪಿಸಿದರು, ಜೆಸಿಐ ಉಪಾಧ್ಯಕ್ಷ ಉದಯಕುಮಾರ್ ವಂದಿಸಿದರು.