ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಸಂತ್ರಸ್ತರ ನೆರವಿಗೆ ಧಾವಿಸಲು ಮನವಿ

Rashmi Kasaragodu
Updated On : 30 Jun 2013, 12:33 pm

ಚಿಕ್ಕಮಗಳೂರು: ಪ್ರವಾಹದಿಂದ ತತ್ತರಿಸಿರುವ ಉತ್ತರಾಖಂಡ ರಾಜ್ಯದ ಜನತೆಗೆ ಸಹಾಯಹಸ್ತ ಚಾಚಲು ಸಾರ್ವಜನಿಕರು ಮುಂದಾಗಬೇಕು ಎಂದು ಶಾಸಕ ಸಿ.ಟಿ. ರವಿ ಹೇಳಿದ್ದಾರೆ.
ಉತ್ತರಾಖಂಡ್ ರಾಜ್ಯದಲ್ಲಿ ಸಂಭವಿಸಿದ ಪ್ರಕೃತಿ ವಿಕೋಪದಲ್ಲಿ ಮೃತಪಟ್ಟವರ ಆತ್ಮಕ್ಕೆ ಶಾಂತಿ ಕೋರುವ ನಿಟ್ಟಿನಲ್ಲಿ ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ ನಗರದ ವಿಜಯಪುರ ಬಡಾವಣೆಯ ಶ್ರೀ ವೀರಾಂಜನೇಯ ಸ್ವಾಮಿ ದೇವಾಲಯದ ಸಭಾಂಗಣದಲ್ಲಿ ಗುರುವಾರ ಏರ್ಪಡಿಸಿದ್ದ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಮಾತನಾಡಿದರು.
 ಸಂಕಷ್ಟದಲ್ಲಿ ಯಾತ್ರಿಗಳು: ಉತ್ತರಾಖಂಡ್ ರಾಜ್ಯಕ್ಕೆ ಮಳೆ ಹೊಸದೇನಲ್ಲ. ಈ ಹಿಂದೆಯೂ ಸಾಕಷ್ಟು ಬಾರಿ, ಭಾರಿ ಪ್ರಮಾಣದ ಮಳೆ ಸುರಿದಿದೆ. ಆದರೆ, ಅವೈಜ್ಞಾನಿಕವಾಗಿ ಆ ಭಾಗದಲ್ಲಿ ಕಟ್ಟಿರುವ ಜಲಾಶಯ ಒಡೆದ ಪರಿಣಾಮ ಈ ಬಾರಿ ಪ್ರವಾಹದ ಸ್ಥಿತಿ ಎದುರಾಗಿದ್ದು, ಪವಿತ್ರ ಯಾತ್ರೆಗೆ ತೆರಳಿದವರು ಸಂಕಷ್ಟಕ್ಕೆ ಸಿಲುಕುವಂತಾಯಿತು ಎಂದರು.
ಪ್ರವಾಹದಿಂದಾಗಿ ಯಾತ್ರೆಗೆ ತೆರಳಿದ ಬಹಳಷ್ಟು ಜನ ಮೃತಪಟ್ಟಿದ್ದಾರೆ. ಸಹಸ್ರಾರು ಮಂದಿ ಕಣ್ಮರೆಯಾಗಿದ್ದು, ಉಳಿದಿರುವ ಸಂತ್ರಸ್ತರು ಅನ್ನಾಹಾರಗಳಿಲ್ಲದೇ ಪರದಾಡುತ್ತಿದ್ದಾರೆ ಎಂದ ಅವರು, ಈ ಸಂದರ್ಭದಲ್ಲಿ ಸಾರ್ವಜನಿಕರು ಮಾನವೀಯತೆ ಮೆರೆಯುವ ಅಗತ್ಯವಿದೆ. ಸಂಕಷ್ಟಕ್ಕೊಳಗಾದವರಿಗೆ ಸಹಾಯ ಹಸ್ತ ಚಾಚುವ ಮೂಲಕ ಅವರ ಕಣ್ಣೀರನ್ನು ಒರೆಸಲು ಮುಂದಾಗಬೇಕಾಗಿದೆ ಎಂದು ತಿಳಿಸಿದರು.
ನೆರವಿಗೆ ದಾವಿಸಿ: ಬೇರುಗಂಡಿ ಮಠದ ಶ್ರೀ ರೇಣುಕ ಮಹಂತ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ನೆರೆಸಂತ್ರಸ್ತರಿಗೆ ತಮ್ಮ ಕೈಲಾದ ಸಹಾಯ ಮಾಡುವ ಮೂಲಕ ಅವರ ನೆರವಿಗೆ ದಾವಿಸುವಂತೆ ಸಾರ್ವಜನಿಕರಿಗೆ ಸಲಹೆ ಮಾಡಿದರು.
ಪ್ರವಾಹದ ವೇಳೆ ಮೃತಪಟ್ಟವರ ಆತ್ಮಕ್ಕೆ ಶಾಂತಿ ಕೋರಿ ದೇವಾಲಯದಲ್ಲಿ ವಿಶೇಷ ಪೂಜೆ, ಪ್ರಾರ್ಥನೆ ಮತ್ತು ಒಂದು ನಿಮಿಷ ಮೌನಾಚರಣೆ ಮಾಡಲಾಯಿತು. ಯೋಗಬಂಧುಗಳಿಂದ ಭಗವದ್ಗೀತೆ ಪಠಣ, ನಾಮ ಸಂಕೀರ್ತನೆ, ಭಜನೆ ನಡೆಯಿತು.
ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿಯ ಅಧ್ಯಕ್ಷ ಬಿ. ವರದರಾಜು ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಜಿ. ರಮೇಶ್ ಕಾರ್ಯಕ್ರಮವನ್ನು ನಿರೂಪಿಸಿದರು. ಮಮತಾ ಸ್ವಾಗತಿಸಿದರು. ಗೀತಾ ಪ್ರಕಾಶ್ ವಂದಿಸಿದರು.  

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement