ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಸಮಸ್ಯೆ ಸುಳಿಯಲ್ಲಿ ಸರ್ಕಾರಿ ಆಸ್ಪತ್ರೆ

Rashmi Kasaragodu
Updated On : 30 Jun 2013, 12:31 pm


  ನೆಮ್ಮಾರ್ ಅಬೂಬಕರ್
ಕ.ಪ್ರ.ವಾರ್ತೆ, ಶೃಂಗೇರಿ, ಜೂ.29 ಇಲ್ಲಿ ಸುಸಜ್ಜಿತವಾದ ಕಟ್ಟಡ, ಕೊಠಡಿ, ಹಾಸಿಗೆ, ಅಗತ್ಯ ಔಷಧಿ ಸಾಮಗ್ರಿಗಳಿವೆ. ನಿತ್ಯ ನೂರಾರು ರೋಗಿಗಳು ಬರುತ್ತಾರೆ. ಅಪಘಾತ ಪ್ರಕರಣ ದಿನನಿತ್ಯ ದಾಖಲಾಗುತ್ತಲೇ ಇರುತ್ತದೆ. ಆದರೆ ಕಳೆದೊಂದು ವರ್ಷದಿಂದ ವೈದ್ಯ, ಸಿಬ್ಬಂದಿ ಕೊರತೆಯಿದಾಗಿ ಎಲ್ಲ ಸೌಕರ್ಯವಿದ್ದೂ ಇಲ್ಲದಂತಾಗಿದೆ. ಮಾತ್ರವಲ್ಲದೆ ಹಲವು ಸಮಸ್ಯೆಯ ಗೂಡಾಗಿದೆ..
ಇದು ಪಟ್ಟಣದ ತಾಲೂಕು ಸಾರ್ವಜನಿಕ ಆಸ್ಪತ್ರೆಯ ಕಥೆ-ವ್ಯಥೆ. 30 ಹಾಸಿಗೆಗಳಿವೆ. ದಿನದಲ್ಲಿ 200 ಕ್ಕೂ ಅಧಿಕ ಹೊರರೋಗಿಗಳು ಬರುತ್ತಾರೆ. ದಿನದಲ್ಲಿ ನಾಲ್ಕೈದು ಅಪಘಾತ ಪ್ರಕರಣಗಳು ಸೇರಿದಂತೆ ತುರ್ತು ಚಿಕಿತ್ಸಾ ಪ್ರಕರಣಗಳು ಇಲ್ಲಿ ಮಾಮೂಲು.
ಇಬ್ಬರೇ ವೈದರು: ತಾಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ಒಟ್ಟು 11 ವೈದ್ಯರು ಇರಬೇಕು. ಆದರೆ ಇಲ್ಲಿ ದಂತವೈದ್ಯರೊಬ್ಬರು ಸೇರಿದಂತೆ ಒಟ್ಟು ಇಬ್ಬರೇ ವೈದ್ಯರಿದ್ದಾರೆ. ಅವರಲ್ಲಿ ಒಬ್ಬರು ಎರಡು ವರ್ಷದ ದೀರ್ಘ ರಜೆಯಲ್ಲಿದ್ದಾರೆ. ಆದ್ದರಿಂದ ಇರುವುದು ಒಬ್ಬರೇ.
ಒಳರೋಗಿಗಳಿಗೆ, ಹೊರ ರೋಗಿಗಳಿಗೆ ಶುಶ್ರೂಶೆ ಮಾಡುವುದರ ಜೊತೆಗೆ ಅಪಘಾತ ಪ್ರಕರಣ, ಮರಣೋತ್ತರ ಪರೀಕ್ಷೆ, ನೆಮ್ಮಾರು ಸರ್ಕಾರಿ ಆಸ್ಪತ್ರೆಯ ಪ್ರಭಾರಿ ಕಾರ್ಯ, ತಾಲೂಕು ವೈದ್ಯಾಧಿಕಾರಿ ಕಾರ್ಯ ನಿರ್ವಹಿಸಬೇಕಾಗಿದೆ. ಕಳೆದೆರೆಡು ವರ್ಷಗಳ ಹಿಂದೆ 4 ವೈದ್ಯರಿದ್ದರು. ಆದರೀಗ ತಾಲೂಕು ಆಸ್ಪತ್ರೆ ವೈದ್ಯರ ಸಮಸ್ಯೆಯಿಂದ ಸೊರಗುತ್ತಿದೆ.
ಗಂಟೆಗಟ್ಟಲೆ ಕಾಯಬೇಕು: ಇನ್ನು ಚಿಕಿತ್ಸೆಗೆ ಬರುವ ರೋಗಿಗಳು ಗಂಟೆಗಟ್ಟಲೆ ವೈದ್ಯರಿಗಾಗಿ ಕಾಯಬೇಕಿದೆ. ಏಕೆಂದರೆ ಎಲ್ಲಾ ಕಾರ್ಯಗಳನ್ನು ಇರುವ ಒಬ್ಬರೇ  ವೈದ್ಯರೇ ನಿರ್ವಹಿಸಿ ಇವರಿಗೆ ಚಿಕಿತ್ಸೆ ನೀಡಬೇಕು.ರಾತ್ರಿ ವೇಳೆಯಲ್ಲಿ ಸಾಕಷ್ಟು ಪ್ರಕರಣಗಳು ಬರುತ್ತಿರುತ್ತವೆ.ಆದರೆ ಅಗತ್ಯ ಸಿಬ್ಬಂದಿಗಳಿಲ್ಲದ ಕಾರಣ ಪರದಾಟ ಮಾಮೂಲು.
ತಾಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ 12 ಮಂದಿ ಸಿಬ್ಬಂದಿ ಇರಬೇಕು. ಆದರೆ ಇಲ್ಲಿ ಕೇವಲ ಇಬ್ಬರೇ ಸಿಬ್ಬಂದಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ರಾತ್ರಿ ಪಾಳಯದಲ್ಲಿ ತುರ್ತು ಚಿಕಿತ್ಸೆ ಸಂದರ್ಭದಲ್ಲಿ ಪರದಾಟ ಹೇಳತೀರದು. ಇಬ್ಬರು ಔಷಧಿ ವಿತರಕರು ಇರಬೇಕು. ಆದರೆ ಇಲ್ಲಿ ಔಷಧಿ ವಿತರಕರೇ ಇಲ್ಲ. ಅದೂ ಕಳೆದ 5 ವರ್ಷದಿಂದ. ಇನ್ನು ಕಳೆದ ಏಳೆಂಟು ದಿನಗಳಿಂದ ಎಕ್ಸ್ರೇ ಉಪಕರಣ ಕೆಟ್ಟು ಹೋಗಿದೆ. ಆದರೆ ಇದನ್ನು ಸರಿಪಡಿಸಲು ಮನವಿ ಮಾಡಿದರೂ ಇನ್ನೂ ಸರಿಯಾಗಲ್ಲ. ಉಪಯೋಗಕ್ಕೆ ಬಾರದಾಗಿರುವುದರಿಂದ ಇಲ್ಲಿಗೆ ಬರುವ ರೋಗಿಗಳು ಪರದಾಡಬೇಕಾಗಿದೆ.
ಸಿಬ್ಬಂದಿ ಕೊರತೆ: ತಾಲೂಕು ಸಾರ್ವಜನಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯರ, ಸಿಬ್ಬಂದಿ ಕೊರತೆ ಉಂಟಾಗಿರುವುದು ಸರ್ಕಾರ, ಜನಪ್ರತಿನಿಧಿಗಳ ನಿರ್ಲಕ್ಷಕ್ಕೆ ಹಿಡಿದ ಕನ್ನಡಿಯಾಗಿದೆ.
ಒಂದೆಡೆ ಆಸ್ಪತ್ರೆಯಲ್ಲಿನ ಎಲ್ಲಾ ವ್ಯವಹಾರಗಳ ನಿರ್ವಹಣೆ, ಚಿಕಿತ್ಸೆ ನೀಡುತ್ತಿರುವ ವೈದ್ಯರೊಬ್ಬರ ಪರದಾಟ. ಇನ್ನೊಂದೆಡೆ ರೋಗಿಗಳ ಪರದಾಟ. ಈ ಬಗ್ಗೆ ತಾಲೂಕು ವೈದ್ಯಾಧಿಕಾರಿ ಡಾ. ವೆಂಕಟೇಶ್ ಅವರನ್ನು ಸಂಪರ್ಕಿಸಿದಾಗ ಅವರು ಪ್ರತಿಕ್ರಿಯಿಸಿ ಇಲ್ಲಿ  ವೈದ್ಯರು, ಸಿಬ್ಬಂದಿ ಅವಶ್ಯಕತೆ ಇದೆ. ಒಳರೋಗಿ, ಹೊರರೋಗಿಗಳ ಚಿಕಿತ್ಸೆ, ತರ್ತು ಪ್ರಕರಣ, ಅಪಘಾತ ಪ್ರಕರಣ, ನೆಮ್ಮಾರು ಆಸ್ಪತ್ರೆಯಲ್ಲಿ ಪ್ರಭಾರಿಯಾಗಿ ಕಾರ್ಯನಿರ್ವ ಹಣೆ ಸೇರಿದಂತೆ ಇತ್ಯಾದಿ ಕಾರ್ಯ ನಿರ್ವಹಿಸಬೇಕು. ಈ ಬಗ್ಗೆ ಸಂಬಂಧಪಟ್ಟವರ ಗಮನಕ್ಕೆ ತರುತ್ತಿದ್ದೇವೆ.ಇಲ್ಲಿನ ಪರಿಸ್ಥಿತಿ ಗಮನಿಸಿ ವೈದ್ಯರು, ಸಿಬ್ಬಂದಿಯನ್ನು ನೇಮಿಸಬೇಕು ಎನ್ನುತ್ತಾರೆ.
ಕಳೆದ 5 ವರ್ಷದಿಂದ ಈ ಆಸ್ಪತ್ರೆಯಲ್ಲಿ ಔಷಧ ವಿತರಕರ ಹುದ್ದೆ ಖಾಲಿಯಿರುವುದು ನಮ್ಮ ಜನಪ್ರತಿನಿಧಿಗಳ  ಅಸಹಾಯಕತೆಯನ್ನು ಎತ್ತಿ ತೋರಿಸುತ್ತದೆ. ಇನ್ನಾದರೂ ಸಂಬಂಧಿಸಿದ ಅಧಿಕಾರಿಗಳು, ಜನಪ್ರತಿನಿಧಿಗಳು, ಸರ್ಕಾರ ಇತ್ತ ಒಮ್ಮೆ ಕಣ್ತೆರೆದು ನೋಡಿ, ಅಗತ್ಯ ವೈದ್ಯರು, ಸಿಬ್ಬಂದಿಯನ್ನು ಕೂಡಲೇ ನೇಮಿಸಿ,  ಮೂಲ ಸೌಕರ್ಯಗಳನ್ನು ಕಲ್ಪಿಸಿ, ರೋಗಿಗಳ ಪರದಾಟಕ್ಕೆ ಮುಕ್ತಿ ಕಲ್ಪಿಸಲಿ ಎಂಬುದೇ ಸಾರ್ವಜನಿಕರ ಆಶಯ.


ಆಸ್ಪತ್ರೆಯ ಸಮಸ್ಯೆಗಳೇನು?


  ಚಿಕಿತ್ಸೆಗೆ ಬರುವ ರೋಗಿಗಳು ಗಂಟೆಗಟ್ಟಲೆ ವೈದ್ಯರಿಗಾಗಿ ಕಾಯಬೇಕಿದೆ. ಏಕೆಂದರೆ ಎಲ್ಲಾ ಕಾರ್ಯಗಳನ್ನು ಇರುವ ಒಬ್ಬರೇ  ವೈದ್ಯರೇ ನಿರ್ವಹಿಸಿ ಇವರಿಗೆ ಚಿಕಿತ್ಸೆ ನೀಡಬೇಕು
  ತಾಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ 12 ಮಂದಿ ಸಿಬ್ಬಂದಿ ಇರಬೇಕು. ಆದರೆ ಇಲ್ಲಿ ಕೇವಲ ಇಬ್ಬರೇ ಸಿಬ್ಬಂದಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ
  ವೈದ್ಯರ, ಸಿಬ್ಬಂದಿ ಕೊರತೆ ಉಂಟಾಗಿರುವುದು ಸರ್ಕಾರ, ಜನಪ್ರತಿನಿಧಿಗಳ ನಿರ್ಲಕ್ಷಕ್ಕೆ ಹಿಡಿದ ಕನ್ನಡಿ
  ಕಳೆದ ಏಳೆಂಟು ದಿನಗಳಿಂದ ಎಕ್ಸ್ರೇ ಉಪಕರಣ ಕೆಟ್ಟು ಹೋಗಿದೆ. ಆದರೆ ಇದನ್ನು ಸರಿಪಡಿಸಲು ಮನವಿ ಮಾಡಿದರೂ ಸರಿಯಾಗಲ್ಲ

ಬೇಡಿಕೆಗಳೇನು?


  ಅಧಿಕಾರಿಗಳು, ಜನಪ್ರತಿನಿಧಿಗಳು, ಸರ್ಕಾರ ಇತ್ತ ಒಮ್ಮೆ ಕಣ್ತೆರೆದು ನೋಡಿ, ಅಗತ್ಯ ವೈದ್ಯರು, ಸಿಬ್ಬಂದಿಯನ್ನು ಕೂಡಲೇ ನೇಮಿಸಿ,  ಮೂಲ ಸೌಕರ್ಯಗಳನ್ನು ಕಲ್ಪಿಸಿ, ರೋಗಿಗಳ ಪರದಾಟಕ್ಕೆ ಮುಕ್ತಿ ಕಲ್ಪಿಸಲಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement