ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಸವಲತ್ತು ಸದ್ಬಳಕೆಯಾಗಲಿ: ಗೌತಮ್

Rashmi Kasaragodu
Updated On : 30 Jun 2013, 12:33 pm

ಕ.ಪ್ರ.ವಾರ್ತೆ ಟಿ ಚಿಕ್ಕಮಗಳೂರು ಟಿ  ಜೂ.29
ಸರ್ಕಾರಗಳು, ಸಂಘ-ಸಂಸ್ಥೆಗಳು ಮತ್ತು ದಾನಿಗಳಿಂದ ದೊರೆಯುವ ಸವಲತ್ತುಗಳನ್ನು ವಿದ್ಯಾರ್ಥಿಗಳು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಜೈನ್ ಸಂಘದ ಅಧ್ಯಕ್ಷ ಗೌತಮ್ ಚಂದ್ ಸಿಯಾಲ್ ಸಲಹೆ ಮಾಡಿದ್ದಾರೆ.
ನಗರದ ಭಾರತೀ ವಿದ್ಯಾಸಂಸ್ಥೆಯಲ್ಲಿ ಶನಿವಾರ ನಡೆದ ಸಮಾರಂಭದಲ್ಲಿ ದಾನಿಗಳು ಉಚಿತವಾಗಿ ನೀಡಿದ ಸಮವಸ್ತ್ರ, ನೋಟ್ ಪುಸ್ತಕಗಳನ್ನು ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ವಿತರಿಸಿ ಮಾತನಾಡಿದರು.
ಕೆಲ ದಶಕಗಳ ಹಿಂದೆ ಬಡಮಕ್ಕಳಿಗೆ ಶಿಕ್ಷಣ ಮರೀಚಿಕೆಯಾಗಿತ್ತು. ಸಮವಸ್ತ್ರ, ಪಠ್ಯಪುಸ್ತಕ ಸೇರಿದಂತೆ ಯಾವುದೇ ಸವಲತ್ತುಗಳು ದೊರೆಯುತ್ತಿರಲಿಲ್ಲ. ಬಡಮಕ್ಕಳು ಮೈಲಿಗಟ್ಟಲೇ ನಡೆದು ಶಾಲೆಗೆ ತೆರಳ ಬೇಕಾಗಿತ್ತು. ಬಹಳಷ್ಟು ವಿದ್ಯಾರ್ಥಿಗಳು ಅವರಿವರ ಮನೆಯಲ್ಲಿ ವಾರದೂಟ ಮಾಡಿ ವಿದ್ಯಾರ್ಜನೆ ಮಾಡುತ್ತಿದ್ದರು ಎಂದರು.
ಸದುಪಯೋಗವಾಗಲಿ: ಆದರೆ, ಇತ್ತೀಚಿನ ವರ್ಷಗಳಲ್ಲಿ ಸರ್ಕಾರಗಳು ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡುತ್ತಿವೆ. ವಸತಿ, ಸಮವಸ್ತ್ರ, ಪಠ್ಯಪುಸ್ತಕ, ಸೈಕಲ್ ಸೇರಿದಂತೆ ಹಲವು ಸವಲತ್ತುಗಳ ಜೊತೆಗೆ ಉಚಿತ ಶಿಕ್ಷಣವನ್ನು ನೀಡುತ್ತಿವೆ. ಸಂಘ-ಸಂಸ್ಥೆಗಳು ಮತ್ತು ದಾನಿಗಳೂ ಸಹ ವಿದ್ಯಾರ್ಜನೆಗೆ ಬಹಳಷ್ಟು ಸಹಾಯ ಮಾಡುತ್ತಿದ್ದಾರೆ ಎಂದ ಅವರು, ಅವುಗಳನ್ನು ವಿದ್ಯಾರ್ಥಿಗಳು ಸದುಪಯೋಗಪಡಿಸಿಕೊಂಡು ವಿದ್ಯಾರ್ಜನೆ ಮಾಡಬೇಕು ಎಂದು ಕಿವಿಮಾತು ಹೇಳಿದರು.
ಕಾಫಿ ಬೆಳೆಗಾರ ದಶರತ್ ಮಾತನಾಡಿ, ಮನುಷ್ಯ ವಿದ್ಯಾವಂತನಾದರೆ ಮಾತ್ರ ಆತನಿಗೆ ಸಮಾಜದಲ್ಲಿ ಗೌರವ ಮತ್ತು ಅಂತಸ್ತು ಲಭಿಸುತ್ತವೆ. ಇದನ್ನು ವಿದ್ಯಾರ್ಥಿಗಳು ಅರ್ಥಮಾಡಿಕೊಂಡು ಶ್ರದ್ಧೆಯಿಂದ ವಿದ್ಯಾರ್ಜನೆ ಮಾಡಬೇಕು ಎಂದು ತಿಳಿಸಿದರು.
ದಾನಿಗಳಿಗೆ ಕೃತಜ್ಞತೆ: ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂಸ್ಥೆಯ ಅಧ್ಯಕ್ಷ ಹೆಚ್.ಬಿ. ಜಯರಾಮೇಗೌಡ, ಶಾಲೆಯ ವಿದ್ಯಾರ್ಥಿಗಳಿಗೆ ಸಮವಸ್ತ್ರ, ನೋಟ್ ಪುಸ್ತಕಗಳನ್ನು ಉಚಿತವಾಗಿ ನೀಡಿದ ದಾನಿಗಳಿಗೆ ಕೃತಜ್ಞತೆ ಸಲ್ಲಿಸಿದರು.
ಸಮವಸ್ತ್ರಗಳನ್ನು ಮತ್ತು ನೋಟ್ ಪುಸ್ತಕಗಳನ್ನು ನೀಡಿದ ದಾನಿಗಳಾದ ಎಂ.ಎಸ್. ದಶರತ್, ನಗರಸಭೆ ಸದಸ್ಯ ಕೋಟೆ ಕೃಷ್ಣ, ಗೌತಮ್ ಚಂದ್ ಸಿಯಾಲ್ ಅವರನ್ನು ಸಂಸ್ಥೆ ವತಿಯಿಂದ ಸನ್ಮಾನಿಸಲಾಯಿತು. ಇದೇ ವೇಳೆ ಸಿ.ವಿ. ರಾಮನ್ ವಿಜ್ಞಾನ ಸಂಘ ಮತ್ತು ಆರ್ಯಭಟ ಗಣಿತ ಸಂಘವನ್ನು ಉದ್ಘಾಟಿಸಲಾಯಿತು.
ಸಂಸ್ಥೆಯ ನಿರ್ದೇಶಕಿ ಬಿ.ಡಿ. ರುಕ್ಮಿಣಿ, ಉದ್ಯಮಿ ಸಜ್ಜನ್ ಜೈನ್ ಉಪಸ್ಥಿತರಿದ್ದರು. ಶಿಕ್ಷಕರಾದ ಹೊನ್ನೇಗೌಡ ಕಾರ್ಯಕ್ರಮವನ್ನು ನಿರೂಪಿಸಿದರು. ಮುಖ್ಯ ಶಿಕ್ಷಕ ಎ. ಪುಟ್ಟಪ್ಪ ಸ್ವಾಗತಿಸಿದರು. ಕುಮಾರಸ್ವಾಮಿ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement