ಜಿಲ್ಲೆಯಲ್ಲಿ 1,04,280 ಎಕರೆ ಒತ್ತುವರಿ
ಕ.ಪ್ರ.ವಾರ್ತೆ, ಚಿಕ್ಕಮಗಳೂರು, ಜೂ.30
ಜಿಲ್ಲೆಯಲ್ಲಿ ಸರ್ಕಾರಿ ಭೂಮಿ ಒತ್ತುವರಿಯಾಗಿದ್ದು ಎಷ್ಟು ಗೊತ್ತೆ...,
ಬರೋಬರಿ 1,04,280 ಎಕರೆ.
- ಇದು, ನಿಖರವಾದ ವಿಸ್ತೀರ್ಣವಲ್ಲ. ಕಣ್ಣಳತೆಯಲ್ಲಿ ಅಂದಾಜು ಮಾಡಿರುವ ವಿಸ್ತೀರ್ಣ. ನಿಖರವಾಗಿ ಜಮೀನು ಗುರುತು ಮಾಡಲು ಕಂದಾಯ ಇಲಾಖೆಯಲ್ಲಿ ಸರ್ವೇಯರ್ಗಳಿಲ್ಲ, ಇದನ್ನು ಸ್ವತಹ ಜಿಲ್ಲಾಡಳಿತವೇ ಒಪ್ಪಿಕೊಂಡಿದೆ.
ಜಿಲ್ಲೆಯಲ್ಲಿ ಒಟ್ಟು 4,83,400 ಎಕರೆ ಸರ್ಕಾರಿ ಜಮೀನು ಇದ್ದು, ಈ ಪೈಕಿ 1,04,280 ಎಕರೆ ಭೂಮಿ ಒತ್ತುವರಿಯಾಗಿದೆ. ಇದರಲ್ಲಿ ಕಂದಾಯ ಮತ್ತು ಗೋಮಾಳ ಭೂಮಿ ಸೇರ್ಪಡೆಗೊಂಡಿದೆ. ರಾಜ್ಯ ಸರ್ಕಾರದ ಆದೇಶದ ಪ್ರಕಾರ ಕಳೆದ ಮೇ ತಿಂಗಳವರೆಗೆ 86 ಎಕರೆ, 36 ಗುಂಟೆ ಒತ್ತುವರಿ ಭೂಮಿಯನ್ನು ತೆರವುಗೊಳಿಸಲಾಗಿದೆ.
ಕಡೂರು- 79979-25 ಎಕರೆ: ಜಿಲ್ಲಾಡಳಿತದಲ್ಲಿ ಲಭ್ಯವಿರುವ ಮಾಹಿತಿಯ ಪ್ರಕಾರ, ಚಿಕ್ಕಮಗಳೂರು ತಾಲೂಕಿನಲ್ಲಿ 62572-01 ಎಕರೆ, ಮೂಡಿಗೆರೆ- 17334-38 ಎಕರೆ, ಕಡೂರು- 79979-25 ಎಕರೆ, ತರೀಕೆರೆ- 54036-27 ಎಕರೆ, ಕೊಪ್ಪ- 51160-10 ಎಕರೆ, ಎನ್.ಆರ್.ಪುರ- 40446-07, ಶೃಂಗೇರಿ ತಾಲೂಕಿನಲ್ಲಿ 88870-17 ಎಕರೆ ಸರ್ಕಾರಿ ಜಮೀನು ಇದ್ದು, ಈ ಪೈಕಿ ಚಿಕ್ಕಮಗಳೂರು ತಾಲೂಕಿನಲ್ಲಿ 22800-39 ಎಕರೆ, ಮೂಡಿಗೆರೆ- 7342-03 ಎಕರೆ, ಕಡೂರು- 37734-06 ಎಕರೆ, ತರೀಕೆರೆ- 14819-12 ಎಕರೆ, ಕೊಪ್ಪ- 11968-11, ಎನ್.ಆರ್.ಪುರ- 6645-12 ಎಕರೆ, ಶೃಂಗೇರಿ ತಾಲೂಕಿನಲ್ಲಿ 3070-31 ಎಕರೆ ಸರ್ಕಾರಿ ಭೂಮಿ ಒತ್ತುವರಿಯಾಗಿದೆ.
ಈ ಪೈಕಿ ಮೇ ಅಂತ್ಯದವರೆಗೆ ಚಿಕ್ಕಮಗಳೂರು ತಾಲೂಕಿನಲ್ಲಿ 36-39 ಎಕರೆ, ಮೂಡಿಗೆರೆ- 6-13 ಎಕರೆ, ತರೀಕೆರೆ- 37-13, ಎನ್.ಆರ್.ಪುರ- 4-10 ಎಕರೆ, ಶೃಂಗೇರಿ ತಾಲೂಕಿನಲ್ಲಿ 2-01 ಎಕರೆ ಭೂಮಿಯನ್ನು ತೆರವುಗೊಳಿಸಲಾಗಿದೆ. ಕಡೂರು ಹಾಗೂ ಕೊಪ್ಪ ತಾಲೂಕುಗಳಲ್ಲಿ ಈವರೆಗೆ ಯಾವುದೇ ಒತ್ತುವರಿ ಭೂಮಿಯನ್ನು ತೆರವುಗೊಳಿಸಿಲ್ಲ.
ಸರ್ಕಾರಿ ಭೂಮಿ ಒತ್ತುವರಿಯಾಗಿರುವುದನ್ನು ಪ್ರತ್ಯೇಕಿಸಿದರೆ ಕಡೂರು ತಾಲೂಕಿನಲ್ಲಿ ಅತಿ ಹೆಚ್ಚು ಭೂಮಿ ಒತ್ತುವರಿಯಾಗಿದೆ. ಎರಡನೇ ಸ್ಥಾನದಲ್ಲಿ ಚಿಕ್ಕಮಗಳೂರು ತಾಲೂಕು, ಮೂರನೇ ಸ್ಥಾನದಲ್ಲಿ ತರೀಕೆರೆ ತಾಲೂಕಿದೆ.
ಅರಣ್ಯ ಒತ್ತುವರಿ ತೆರವು: ಸದ್ಯದ ಪರಿಸ್ಥಿತಿಯಲ್ಲಿ ಕಂದಾಯ ಭೂಮಿಯ ತೆರವಿಗೆ ಆಡಳಿತ ಯಂತ್ರ ಮುಂದಾಗುತ್ತಿಲ್ಲ. ಕಾರಣ, ತೆರವಿಗೂ ಮುನ್ನ ಸರ್ಕಾರಿ ಭೂಮಿಯ ಸರ್ವೆ ಮಾಡಬೇಕು. ಆದರೆ, ಸರ್ವೇಯರ್ಗಳ ಕೊರತೆ ಇರುವುದರಿಂದ ಈ ಕೆಲಸಕ್ಕೆ ಅಧಿಕಾರಿಗಳು ಮುಂದಾಗುತ್ತಿಲ್ಲ. ಅದುದರಿಂದ ಕಂದಾಯ ಭೂಮಿ ಒತ್ತುವರಿ ಮಾಡಿಕೊಂಡಿರುವವರು ಸದ್ಯ ನಿರಾಳರಾಗಿದ್ದಾರೆ. ಆದರೆ, ಅರಣ್ಯ ಭೂಮಿಯನ್ನು ಒತ್ತುವರಿ ಮಾಡಿಕೊಂಡರು ಆತಂಕದಲ್ಲಿದ್ದಾರೆ.
ಡಾ. ಬಾಲಸುಬ್ರಹ್ಮಣ್ಯ ಸಮಿತಿ ನೀಡಿರುವ ವರದಿಯಲ್ಲಿ ಹೇಳಿರುವ ಪ್ರಕಾರ ಚಿಕ್ಕಮಗಳೂರು ಜಿಲ್ಲೆಯಲ್ಲಿ ಸುಮಾರು 55 ಸಾವಿರ ಎಕರೆ ಅರಣ್ಯ ಪ್ರದೇಶ ಒತ್ತುವರಿಯಾಗಿದೆ.
ಹೈಕೋರ್ಟ್ ಆದೇಶ: ಹೈಕೋರ್ಟ್ನ ಆದೇಶದ ಪ್ರಕಾರ ಜಿಲ್ಲೆಯ ಅರಣ್ಯ ಒತ್ತುವರಿ ಭೂಮಿ ತೆರವಿಗೆ ಅರಣ್ಯ ಇಲಾಖೆ ಮುಂದಾಗಿದ್ದು, ಪ್ರಥಮ ಹಂತದಲ್ಲಿ ಸರ್ಕಾರದ ಸೂಚನೆಯ ಪ್ರಕಾರ 10 ಎಕರೆ ಮೇಲ್ಪಟ್ಟ ಒತ್ತುವರಿ ಅರಣ್ಯ ಭೂಮಿಯನ್ನು ಅರಣ್ಯ ಇಲಾಖೆಯವರು ತೆರವುಗೊಳಿಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ 10 ಎಕರೆಗಿಂತ ಕಡಿಮೆ ಅರಣ್ಯ ಭೂಮಿಯನ್ನು ಒತ್ತುವರಿ ಮಾಡಿಕೊಂಡವರನ್ನು ತೆರವುಗೊಳಿಸಬೇಕಾಗುತ್ತದೆ. ಅದರಿಂದ ಬದುಕಿಗಾಗಿ ಅರಣ್ಯ ಭೂಮಿಯನ್ನು ಒತ್ತುವರಿ ಮಾಡಿಕೊಂಡರು ಆತಂಕದಲ್ಲಿದ್ದಾರೆ.
ಸದ್ಯ ಅರಣ್ಯ ಒತ್ತುವರಿ ಭೂಮಿ ತೆರವು ಕಾರ್ಯಾಚರಣೆಯನ್ನು ರಾಜ್ಯ ಸರ್ಕಾರದ ಸೂಚನೆಯ ಪ್ರಕಾರ ಕೈಬಿಡಲಾಗಿದೆ. ಆದರೆ, ನ್ಯಾಯಾಲಯದ ಆದೇಶ ಪಾಲನೆ ಮಾಡಲೇಬೇಕಾದ ಅನಿವಾರ್ಯತೆಯಲ್ಲಿ ಅರಣ್ಯ ಇಲಾಖೆಯವರು ಇರುವುದರಿಂದ ಮುಂದೊಂದು ದಿನ ಅರಣ್ಯ ಒತ್ತುವರಿ ಭೂಮಿಯನ್ನು ತೆರವುಗೊಳಿಸಬೇಕಾಗುತ್ತದೆ. ಈ ಆತಂಕ ಜನರ ನಿದ್ದೆಗೆಡಿಸಿದೆ.
---