ಪ್ರಚಾರದಿಂದ ಸಮಸ್ಯೆ ಪರಿಹಾರ ಸಾಧ್ಯವಿಲ್ಲ
ಕ.ಪ್ರ.ವಾರ್ತೆ, ಬೀರೂರು, ಜೂ.30
ಕೇವಲ ಪ್ರಚಾರದಿಂದ ಜನರ ಸಮಸ್ಯೆ ಪರಿಹರಿಸಲು ಸಾಧ್ಯವಿಲ್ಲ. ಆದರೆ, ಶಾಸಕನಾಗಿ ನನ್ನ ಕರ್ತವ್ಯ ಮಾಡಬೇಕೆಂಬ ಅಭಿಲಾಷೆಯೇ ಹೊರತು ಪ್ರಚಾರ ಗಿಟ್ಟಿಸಿಕೊಳ್ಳುವ ವ್ಯಕ್ತಿ ನಾನಲ್ಲ ಎಂದು ಶಾಸಕ ವೈ.ಎಸ್.ವಿ. ದತ್ತ ಹೇಳಿದರು.
ಅವರು ಬೀರೂರು ಶೈಕ್ಷಣಿಕ ವಲಯದ ಖಾಸಗಿ ಶಾಲೆಗಳಿಗೆ ಸರ್ಕಾರದಿಂದ ಮಂಜೂರಾಗಿರುವ ಬಿಸಿಯೂಟ ಯೋಜನೆಯ ದಾಸೋಹ ಕೊಠಡಿಗೆ ಪಟ್ಟಣದ ಎಸ್.ಜೆ.ಎಂ. ಖಾಸಗಿ ಅನುದಾನಿತ ಪ್ರೌಢಶಾಲೆಯಲ್ಲಿ ಸಾಂಕೇತಿಕವಾಗಿ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು. ಮಕ್ಕಳ ಬೌದ್ಧಿಕ, ದೈಹಿಕ ಬೆಳವಣಿಗೆ ಜೊತೆ ಕ್ರೀಯಾಶೀಲ ಮನಸ್ಸಿನ ಬೆಳವಣಿಗೆ ಆಗಬೇಕು. ಆ ನಿಟ್ಟಿನಲ್ಲಿ ಶಿಕ್ಷಕರ ಪಾತ್ರ ಹೆಚ್ಚಿದೆ. ನನ್ನನ್ನು ಒಬ್ಬ ರಾಜಕಾರಣಿಯಾಗಿ ಗುರುತಿಸಿಕೊಳ್ಳುವುದಕ್ಕಿಂತ ಉತ್ತಮ ಮೇಷ್ಟ್ರು ಎಂದು ಕರೆಸಿಕೊಂಡಾಗ ಹೆಚ್ಚು ಸಂತೋಷವಾಗುತ್ತದೆ ಎಂದರು.
ಶಿಕ್ಷಕನೆಂದು ಗುರುತಿಸಿ: ತಮ್ಮ ಹತ್ತಿರ ಪಾಠ ಹೇಳಿಸಿಕೊಂಡವರು ಜಿಲ್ಲಾಧಿಕಾರಿಯಿಂದ ಹಿಡಿದು ಅತ್ಯುನ್ನತ ಹುದ್ದೆಗಳಲ್ಲಿ ಇರುವುದು ನನಗೆ ಹಮ್ಮೆಯ ಸಂಗತಿ. 16 ವರ್ಷದಿಂದ 50ನೇ ವರ್ಷದವರಿಗೆ ಪಾಠ ಹೇಳಿಕೊಟ್ಟ ಸಂತೃಪ್ತಿ ತಮಗೆ ಇದೆ. ಗಣಿತದ ಪಾಠ ಹೇಳಿಕೊಡುವುದೆಂದರೆ ತಮಗೆ ಬಲು ಪ್ರಿಯ ಎನ್ನುವುದನ್ನು ನೆನಪಿಸಿಕೊಂಡು ಶಾಸಕನಾಗಿ ಜನರು ಗುರುತಿಸಿ ಆಯ್ಕೆ ಮಾಡಿರುವುದು ನನ್ನ ಸೌಭಾಗ್ಯ ಎಂದರು.
ಅಧ್ಯಕ್ಷತೆ ವಹಿಸಿದ್ದ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಪತ್ರೆ ಕೆ. ಸದಾಶಿವನ್ ಮಾತನಾಡಿ, ಸರಳ ಸಜ್ಜನಿಕೆಯ ರಾಜಕಾರಣಿ ದತ್ತ ಅವರಿಂದ ಕ್ಷೇತ್ರವು ಉತ್ತಮ ರೀತಿಯಲ್ಲಿ ಪ್ರಗತಿ ಹೊಂದಲಿದೆ ಎಂಬ ಆಶಯ ವ್ಯಕ್ತಪಡಿಸಿದ ಅವರು, ಮಕ್ಕಳಿಗೆ ದತ್ತರವರು ಶಿಕ್ಷಕ ವೃತ್ತಿಯ ಅನುಭವ ಹಂಚಿಕೊಂಡಿದ್ದಕ್ಕೆ ಸಂತಸ ವ್ಯಕ್ತಪಡಿಸಿದರು.
ಇದೇ ಸಂದರ್ಭದಲ್ಲಿ ಜಿ.ಪ. ಸದಸ್ಯ ಬಿ.ಪಿ. ನಾಗರಾಜ್, ಶಿಕ್ಷಣಾಧಿಕಾರಿ ಜಯಣ್ಣ, ಎಸ್.ಜೆ.ಎಂ.ಶಿಕ್ಷಣ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಬಿ.ಬಿ. ಮಲ್ಲಿಕಾರ್ಜುನ್, ತಾಲೂಕು ದೈಹಿಕ ಶಿಕ್ಷಣಾಧಿಕಾರಿ ಜಯಪ್ಪ, ಪ್ರಾಚಾರ್ಯರಾದ ತಾರಾ ರಮೇಶ್, ಪುರಸಭಾ ಸದಸ್ಯೆ ವಸಂತಮ್ಮ, ಜೆಡಿಎಸ್ ಮುಖಂಡ ಭಂಡಾರಿ ಶ್ರೀನಿವಾಸ್, ಅಕ್ಷರ ದಾಸೋಹ ನಿರ್ದೇಶಕ ರಾಮು, ನಿವೃತ್ತ ಮುಖ್ಯೋಪಾಧ್ಯಾಯ ಸಿ.ಕೆ. ಬಸವರಾಜಪ್ಪ ಸ್ವಾಗತಿಸಿದರು. ಸಿ.ಸಿ.ಕುಮಾರ್ ವಂದಿಸಿದರು.