ಸಮರ್ಪಕ ಅನುದಾನ ಬಳಕೆ ಅಗತ್ಯ: ಸಂಸದ ಹೆಗ್ಡೆ
ಚಿಕ್ಕಮಗಳೂರು: ಕೇಂದ್ರ ಸರ್ಕಾರದಿಂದ ಬಿಡುಗಡೆಯಾಗುತ್ತಿರುವ ಅನುದಾನದಿಂದ ಗ್ರಾಮಗಳಲ್ಲಿ ಅಭಿವೃದ್ಧಿ ಕೆಲಸಗಳಾಗುತ್ತಿವೆ. ಪಕ್ಷದ ಕಾರ್ಯಕರ್ತರು ಹೆಚ್ಚಿನ ಉತ್ಸಾಹದಿಂದ ಗ್ರಾಮೀಣ ಭಾಗದಲ್ಲಿ ಕೆಲಸ ಮಾಡುವಂತೆ ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸಂಸದ ಜಯಪ್ರಕಾಶ್ ಹೆಗ್ಡೆ ಹೇಳಿದ್ದಾರೆ.
ತಾಲೂಕಿನ ಮಾಗಡಿ ಹ್ಯಾಂಡ್ ಪೋಸ್ಟ್, ಹರಿಹರದಳ್ಳಿ, ಅಂಬಳೆ ಗ್ರಾಮಗಳಿಗೆ ತೆರಳಿ ಸಾರ್ವಜನಿಕರ ಕುಂದುಕೊರತೆಗಳನ್ನು ವಿಚಾರಿಸಿ ಮಾತನಾಡಿದ ಅವರು, ನನಗೆ ಬರುವ 5 ಕೋಟಿ ಸಂಸದರ ಅನುದಾನದಲ್ಲಿ 2 ಜಿಲ್ಲೆಗಳಿಗೆ ಸಮಾನವಾಗಿ ಹಂಚಿಕೆ ಮಾಡಲಾಗುತ್ತಿದೆ. ಕೇಂದ್ರ ಸರ್ಕಾರದ ಅನುದಾನ ಇಲ್ಲದಿದ್ದರೆ ರಾಜ್ಯ ಸರ್ಕಾರಗಳು ಅಧಿಕಾರ ನಡೆಸುವುದು ಕಷ್ಟವಾಗುತ್ತಿತ್ತು ಎಂದರು.
ವಿಧಾನಪರಿಷತ್ ಸದಸ್ಯೆ ಗಾಯಿತ್ರಿ ಶಾಂತೇಗೌಡ ಮಾತನಾಡಿ, ಈ ಭಾಗದಲ್ಲಿ ಕುಡಿಯುವ ನೀರು ಕಲುಷಿತಗೊಂಡು ಫ್ಲೋರೆಡ್ ಮಿಶ್ರಿತವಾಗಿದೆ. ತಕ್ಷಣವೇ ಶುದ್ಧಗಂಗಾ ಘಟಕ ಮಂಜೂರು ಮಾಡಬೇಕು. ಪಶು ಆಸ್ಪತ್ರೆ, ಎ.ಆರ್. ಕೃಷ್ಣಶಾಸ್ತ್ರಿ ಸ್ಮಾರಕ ಭವನಗಳ ಕಾಮಗಾರಿಗಳನ್ನು ಅತೀ ಶೀಘ್ರದಲ್ಲಿಯೇ ಪ್ರಾರಂಭಿಸುವಂತೆ ಮನವಿ ಮಾಡಿದರು.
ಅಂಬಳೆ, ಹರಿಹರದಳ್ಳಿ, ಮಾಗಡಿ ಗ್ರಾಮಸ್ಥರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.