ಹಕ್ಕು ಪ್ರತಿಪಾದಿಸಿ ಅನುದಾನ ಪಡೆಯುವೆ: ಜೀವರಾಜ್
ಕ.ಪ್ರ.ವಾರ್ತೆ, ನ.ರಾ.ಪುರ, ಜೂ.30
ಶೃಂಗೇರಿ ಕ್ಷೇತ್ರಕ್ಕೆ ಈ ಹಿಂದೆ ರಸ್ತೆಗೆ ಬಂದ ಅನುದಾನವನ್ನು ತಡೆ ಹಿಡಿಯಿರಿ ಎಂದು ಕಾಂಗ್ರೆಸ್ ವಿಧಾನ ಪರಿಷತ್ ಸದಸ್ಯರೊಬ್ಬರು ಸರ್ಕಾರಕ್ಕೆ ಪತ್ರ ಬರೆದಿದ್ದು, ಜುಲೈ 12ರಿಂದ ನಡೆಯುವ ವಿಧಾನ ಸಭೆ ಅಧಿವೇಶನದಲ್ಲಿ ನನ್ನ ಹಕ್ಕು ಪ್ರತಿಪಾದನೆ ಮಾಡಿ ಅನುದಾನ ಪಡೆದೇ ಪಡೆಯುತ್ತೇನೆ ಎಂದು ಶಾಸಕ ಡಿ.ಎನ್. ಜೀವರಾಜ್ ತಿಳಿಸಿದರು.
ಅವರು ಭಾನುವಾರ ಕುದುರೆಗುಂಡಿ ಅಶ್ವಗುಂಡೇಶ್ವರ ಸಮುದಾಯ ಭವನದಲ್ಲಿ ಬಿಜೆಪಿ ತಲಮಕ್ಕಿ, ಕುದುರೆಗುಂಡಿ ಬೂತ್ ಕಮಿಟಿ ಆಶ್ರಯದಲ್ಲಿ ನೀಡಿದ ಅಭಿನಂದನೆ ಸ್ವೀಕರಿಸಿ ಮಾತನಾಡಿದರು.
ಬೀದಿಗಿಳಿದು ಹೋರಾಟ: ಬಿಜೆಪಿ ಸರ್ಕಾರ ಇದ್ದಾಗ ನಾನು ಶೃಂಗೇರಿ ಕ್ಷೇತ್ರಕ್ಕೆ ತಂದ ಯೋಜನೆ ತಡೆ ಹಿಡಿಯುವ ಪ್ರಯತ್ನವನ್ನು ಕಾಂಗ್ರೆಸ್ನವರು ಮಾಡುತ್ತಿದ್ದು, ಇದೇ ರೀತಿ ಮುಂದುವರಿದರೆ ನಾನು ಹಾಗೂ ನಮ್ಮ ಪಕ್ಷದ ಕಾರ್ಯಕರ್ತರು ಬೀದಿಗಿಳಿದು ಹೋರಾಟ ಮುಂದುವರಿಸುತ್ತೇವೆ ಎಂದು ಕಾಂಗ್ರೆಸ್ಪಕ್ಷದವರಿಗೆ ಎಚ್ಚರಿಕೆ ನೀಡಿದರು.
ರೈತ ವಿರೋಧಿ ಸರ್ಕಾರ: ಸಿದ್ದರಾಮಯ್ಯ ಅಧಿಕಾರಕ್ಕೆ ಬರುತ್ತಿದ್ದಂತೆ ಆತುರದ ಹಲವು ನಿರ್ಧಾರ ತೆಗೆದುಕೊಂಡು ಕಾಂಗ್ರೆಸ್ ರೈತ ವಿರೋಧಿ ಎಂದು ಸಾಬೀತು ಮಾಡಿದೆ. ಸಿದ್ದರಾಮಯ್ಯ ಅವರು ಹೋರಾಟದ ಮೂಲಕ ರಾಜಕೀಯ ಮಾಡಿದವರು. ಅವರು ಒಳ್ಳೆಯ ಆಡಳಿತ ನೀಡುತ್ತಾರೆ ಎಂದು ಭಾವಿಸಿದ್ದೆ. ಅಧಿಕಾರ ಸ್ವೀಕರಿಸಿದ ಕೂಡಲೇ ಅಗ್ಗದ ಸಾರಾಯಿ ಚಿಂತನೆ ಮಾಡಿದರು ಎಂದು ವಿಷಾದ ವ್ಯಕ್ತಪಡಿಸಿದರು.
ವಿಧಾನ ಸಭೆಯಲ್ಲಿ ಗುಟ್ಕಾ ನಿಷೇಧದ ಬಗ್ಗೆ ನಾನೊಬ್ಬನೇ ಧ್ವನಿ ಎತ್ತಿ ನನ್ನ ಕರ್ತವ್ಯ ನಿರ್ವಹಿಸಿದ್ದೇನೆ. ಒತ್ತುವರಿ ತೆರವು ಬಗ್ಗೆ ಕೋರ್ಟಿನ ಆದೇಶ ಎಂದು ಸರ್ಕಾರ ಹೇಳುತ್ತಿದೆ. ಬಿಜೆಪಿ ಸರ್ಕಾರ ಅಧಿಕಾರದಲ್ಲಿ ಇದ್ದಾಗ ರೈತರ ಬೇಲಿ ಕೀಳಲು ಬಿಟ್ಟಿರಲಿಲ್ಲ. ಮುಂದಿನ ದಿನಗಳಲ್ಲಿ ಶೃಂಗೇರಿ ಕ್ಷೇತ್ರದಲ್ಲಿ ರೈತರ ಬೇಲಿ ಕೀಳಲು ಬಿಡುವುದಿಲ್ಲ ಎಂದರು.
ಬಿಜೆಪಿ ಮುಖಂಡ ಕಡೇಗದ್ದೆ ಚಕ್ರಪಾಣಿ ಅಭಿನಂದನಾ ಭಾಷಣ ಮಾಡಿದರು. ಕುದುರೆಗುಂಡಿ ಬಿಜೆಪಿ ಬೂತ್ ಕಮಿಟಿ ಅಧ್ಯಕ್ಷ ಕೃಷ್ಣ ಅಧ್ಯಕ್ಷತೆ ವಹಿಸಿದ್ದರು. ಕುದುರೆಗುಂಡಿ ಕಾಫಿ ಬೆಳೆಗಾರ ಜಯರಾಜ್ ಕಾರ್ಯಕ್ರಮ ಉದ್ಘಾಟಿಸಿದರು.ಅನ್ನಪೂರ್ಣ ರಮೇಶ್, ತಾಪಂ ಸದಸ್ಯ ಪೂರ್ಣಚಂದ್ರ, ತಲಮಕ್ಕಿ ಬೂತ್ ಕಮಿಟಿ ಅಧ್ಯಕ್ಷ ಸುರೇಶ್, ಕೆಸಕೊಡಿಗೆ ಕೃಷ್ಣಮೂರ್ತಿ, ಖಾಂಡ್ಯ ಶಿವರಾಜ್, ಕಡೇಗದ್ದೆ ಗಣೇಶ್, ಕೊಪ್ಪ ಪಟ್ಟಣ ಪಂಚಾಯ್ತಿ ಸದಸ್ಯೆ ವಾಣಿಸತೀಶ್, ಗಣೇಶ್ ಇದ್ದರು.