ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಹೆಬ್ಬೆ ತಿರುವು ಯೋಜನೆ ಜಾರಿಗೆ ಒತ್ತಾಯ

Lingaraj Badiger
Updated On : 1 Jul 2013, 11:32 am

ಕ.ಪ್ರ.ವಾರ್ತೆ, ಕಡೂರು,  ಜೂ.30
ಮಂಜೂರಾತಿ ಹಂತದಲ್ಲಿರುವ ಹೆಬ್ಬೆ ತಿರುವು ಯೋಜನೆ ಜಾರಿಗೆ ಸರ್ಕಾರವನ್ನು ಒತ್ತಾಯಿಸಲು ಎಲ್ಲ ರೈತರು ಹಾಗೂ ರಾಜಕೀಯ ಮುಖಂಡರು ಕೈ ಜೋಡಿಸಬೇಕು ಎಂದು ಕಡೂರು ಅಡಕೆ ಬೆಳೆಗಾರರ ಸಂಘ ಮನವಿ ಮಾಡಿತು.
ಪಟ್ಟಣದ ಶ್ರೀನಿವಾಸ ಕಲ್ಯಾಣ ಮಂಟಪದಲ್ಲಿ ಕಡೂರು ಅಡಕೆ ಬೆಳೆಗಾರ ಸಂಘದ ಅಧ್ಯಕ್ಷ ಕೆ.ಆರ್. ಶಿವಶಂಕರಪ್ಪನವರ ಅಧ್ಯಕ್ಷತೆಯಲ್ಲಿ ನಡೆದ ಸರ್ವ ಸದಸ್ಯರ ವಾರ್ಷಿಕ ಸಭೆಯಲ್ಲಿ ಸಂಘದ ಪ್ರಮುಖ ಉದ್ದೇಶಗಳು ಹಾಗೂ ಮುಂದಿನ ಹೋರಾಟದ ಕುರಿತು ಸಮಾಲೋಚನೆ ನಡೆಸಿತು.
ಸಂಘದ ನಿರ್ದೇಶಕರಾದ ಕೆ.ಎಚ್. ಲಕ್ಕಣ್ಣ, ಕೆ.ಜಿ.ಶ್ರೀನಿವಾಸಮೂರ್ತಿ ಮತ್ತು ಕೆ.ಎಚ್. ಶಂಕರ್ ಮಾತನಾಡಿ,ಬರಗಾಲದಿಂದ ರೈತರ ಜಮೀನು ತೋಟಗಳು ಹಾಳಾಗಿರುವ ಹಿನ್ನೆಲೆಯಲ್ಲಿ ಹೆಬ್ಬೆ ಯೋಜನೆ ಜಾರಿಗೆ ಸಂಬಂಧಿಸಿದಂತೆ ಚರ್ಚಿಸುವ ಮೂಲಕ ಕಡ್ಡಾಯವಾಗಿ ರೈತರು ಸಭೆಗೆ ಹಾಜರಾಗುವಂತೆ ಸೂಚಿಸಿದರು.
ಸಭೆಗೆ ಹಾಜರಾಗಿ ಚರ್ಚೆ ನಡೆಸುವುದರಿಂದ ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದಾಗ, ಕಾರ್ಯದರ್ಶಿ ಟಿ. ಮಂಜುನಾಥ್ ಮತ್ತು ಅಧ್ಯಕ್ಷರು ಈ ಬಗ್ಗೆ ಕ್ರಮ ಕೈಗೊಂಡು ಮುಂದಿನ ಸಭೆಗಳನ್ನು ಪತ್ರ ಬರೆಯುವ ಮುಖೇನ ಕರೆಯೋಣ ಎಂದರು.  
ಒತ್ತಡ ತನ್ನಿ: ಈ ನಡುವೆ ಅರೇಕಲ್ ಪ್ರಕಾಶ್ ಮಾತನಾಡಿ, ಹೆಬ್ಬೆ ಯೋಜನೆ ಜಾರಿ ಕುರಿತ ಸಾಧಕ- ಬಾಧಕಗಳ ಬಗ್ಗೆ ಅಂದಿನಿಂದಲೂ ನಡೆಯುತ್ತಿರುವ ಪ್ರಯತ್ನಕ್ಕೆ ಫಲಸಿಕ್ಕಿದ್ದು, ಶೀಘ್ರವೇ ಯೋಜನೆ ಜಾರಿಗೆ ತಾಲೂಕಿನ ರೈತರು ಸಮಗ್ರವಾಗಿ ಕೈ ಜೋಡಿಸಿ ಸರ್ಕಾರದ ಮೇಲೆ ಒತ್ತಡ ತರಬೇಕು ಎಂದು ಹೇಳಿದರು.
ನಿರ್ದೇಶಕ ಎ.ಆರ್. ಶ್ರೀನಿವಾಸಯ್ಯ ಮಾತನಾಡಿ, ಸಂಘಕ್ಕೆ ಶಾಶ್ವತ ಕಟ್ಟಡ ಇಲ್ಲದಿರುವುದರಿಂದ ಕಟ್ಟಡ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಬೇಕು ಎಂದಾಗ ಅಧ್ಯಕ್ಷರು ಮತು ಸಭೆಯು ಕಟ್ಟಡ ನಿರ್ಮಾಣಕ್ಕೆ ಒಪ್ಪಿಗೆ ನೀಡಿತು.  
ಅಧ್ಯಕ್ಷತೆ ವಹಿಸಿದ್ದ ಕೆ.ಆರ್. ಶಿವಶಂಕರಪ್ಪ ಮಾತನಾಡಿ, ಹೆಬ್ಬೆ ಯೋಜನೆ ಮಂಜೂರಾತಿ ಹಂತಕ್ಕೆ ಬಂದು ನಿಂತ ನಂತರ ಮೂರು ಬಾರಿ ಮುಖ್ಯಮಂತ್ರಿಗಳೊಂದಿಗೆ ಸಭೆ ನಡೆಸಲಾಗಿದೆ. ಇದೀಗ ಕೇವಲ ಕೇಂದ್ರ ಪರಿಸರ ಇಲಾಖೆ ಅನುಮತಿ ಮಾತ್ರ ಬೇಕಿದ್ದು, ಕ್ಷೇತ್ರದ ಶಾಸಕರೊಂದಿಗೆ ಕೈ ಜೋಡಿಸಿ ಸರ್ಕಾರದಿಂದ ಯೋಜನೆ ಜಾರಿಗೊಳಿಸಲು ಕೈ ಜೋಡಿಸೋಣ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಶಾಸಕ ವೈಎಸ್‌ವಿ ದತ್ತ ಅವರನ್ನು ಜು.8ರಂದು ಅಡಕೆ ಬೆಳೆಗಾರರ ಸಂಘದಿಂದ ಅಭಿನಂದಿಸಿ ಮತ್ತು ಅವರು ಹಾಗೂ ವಿವಿಧ ಮುಖಂಡರೊಂದಿಗೆ ಸರ್ಕಾರದಿಂದ ಯೋಜನೆ ಜಾರಿ ಮಾಡಿಸಲು ಒಟ್ಟಾಗಿ ಒತ್ತಾಯಿಸಲು ಹೋಗಲು ತೀರ್ಮಾನಿಸಲಾಯಿತು.
ಸಭೆಯಲ್ಲಿ ಸಂಘದ ಕಾರ್ಯದರ್ಶಿ ಎಚ್.ಎಂ. ಚನ್ನೇಗೌಡ, ನಿರ್ದೇಶಕರಾದ ಕೆ.ಎಚ್. ಲಕ್ಕಣ್ಣ, ಕೆ.ಜಿ. ಶ್ರೀನಿವಾಸಮೂರ್ತಿ, ಕೆ.ಎಸ್. ಸೋಮಪ್ರಸಾದ್, ಎಚ್.ವಿ. ಗಿರೀಶ್, ಕೆ.ಎನ್. ಜಯಣ್ಣ, ಜಿ.ಪರಮೇಶ್ವರಪ್ಪ, ಮಂಜುನಾಥ್, ಮುರಳೀಧರ್, ಅಜ್ಜಯ್ಯ, ಟಿ. ಹನುಮಂತಪ್ಪ, ವಿ. ತಿಮ್ಮಯ್ಯ, ಕೆ.ಆರ್. ಹನುಮಂತಪ್ಪ ಮತ್ತಿತರರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement