ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

'ಅಡಕೆ ರೈತರ ಸಾಲ ಮನ್ನಾ ಮಾಡಲಿ'

Rashmi Kasaragodu
Updated On : 2 Mar 2013, 10:54 am

ಕಪ್ರ ವಾರ್ತೆ ನರಸಿಂಹರಾಜಪುರ ಮಾ.1
ಅಡಿಕೆ ಹಳದಿ ಎಲೆರೋಗದ ಬಗ್ಗೆ ಡಾ. ಗೋರಕ್ ಸಿಂಗ್ ವರದಿಯಲ್ಲಿರುವ 10 ಪ್ರಸ್ತಾಪದಲ್ಲಿ 9 ಪ್ರಸ್ತಾಪವನ್ನು ಕೇಂದ್ರ ಸರ್ಕಾರ ಈಗಾಗಲೇ ಜಾರಿಗೆ ತಂದಿದೆ. 1 ಪ್ರಸ್ತಾಪ ಮಾತ್ರ ಬಾಕಿ ಉಳಿದಿದೆ ಎಂದು ಉಡುಪಿ- ಚಿಕ್ಕಮಗಳೂರು ಲೋಕಸಭಾ ಸದಸ್ಯ ಜಯಪ್ರಕಾಶ ಹೆಗ್ಡೆ ತಿಳಿಸಿದರು.
ಅವರು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ರೈತರ ಸಾಲಮನ್ನಾ ಪ್ರಸ್ತಾಪ ಮಾತ್ರ ಬಾಕಿ ಉಳಿದಿದೆ. ತೋಟಗಾರಿಕೆ ಇಲಾಖೆ ರಾಜ್ಯ ಸರ್ಕಾರದ ವ್ಯಾಪ್ತಿಗೆ ಬರುತ್ತದೆ. ಅಡಿಕೆ ಹಳದಿ ಎಲೆ ರೋಗಪೀಡಿತ ರೈತರ ಸಾಲ ಮನ್ನಾವನ್ನು ರಾಜ್ಯ ಸರ್ಕಾರ ಮಾಡಬಹುದಿತ್ತು. ರಾಜ್ಯ ಸರ್ಕಾರ ತನ್ನ ಬಜೆಟ್ನಲ್ಲಿ ಯಾಕೆ ಪ್ರಸ್ತಾಪ ಮಾಡಲಿಲ್ಲ ಎಂದು ಪ್ರಶ್ನಿಸಿದರು.
ಪೂರಕ ವಾತಾವರಣ: ಸ್ಥಳೀಯ ಸಂಸ್ಥೆಗಳ ಚುನಾವಣೆ ಕಾಂಗ್ರೆಸ್ಗೆ ಪೂರಕವಾಗಿದೆ. ಚುನಾವಣೆಗೆ ಸಮರ್ಥ ಅಭ್ಯರ್ಥಿಗಳನ್ನು ನಿಲ್ಲಿಸಿದ್ದೇವೆ. ಕೇಂದ್ರ ಸರ್ಕಾರದ ಜನಪರ ಕಾರ್ಯಕ್ರಮಗಳನ್ನು ಈ ಚುನಾವಣೆಯಲ್ಲಿ ಮತದಾರರಿಗೆ  ಹೇಳಿದ್ದೇವೆ. ಕೇಂದ್ರ ಸರ್ಕಾರದ ಸಾಧನೆಗಳು ಹಾಗೂ ರಾಜ್ಯ ಸರ್ಕಾರದ ವೈಫಲ್ಯಗಳು ಕಾಂಗ್ರೆಸ್ ಪಕ್ಷಕ್ಕೆ ಮತ ತಂದು ಕೊಡಲಿದೆ ಅವರು ತಿಳಿಸಿದರು.
ಉದ್ಘಾಟನೆಗೆ ಸೋನಿಯಾ: ಕೆಲವು ವರ್ಷಗಳ ಹಿಂದೆ ನಡೆದ ಚಿಕ್ಕಮಗಳೂರು ಲೋಕಸಭಾ ಉಪ ಚುನಾವಣೆಯಲ್ಲಿ ಇಂದಿರಾ ಗಾಂಧಿ ಸ್ಫರ್ಧೆ ಮಾಡಿದಾಗ ಕಡೂರು- ಚಿಕ್ಕಮಗಳೂರು ರೈಲು ಮಾರ್ಗ ಮಾಡುವ ಬಗ್ಗೆ ಭರವಸೆ  ನೀಡಿದ್ದರು. ಈಗ ಆ ರೈಲು ಮಾರ್ಗ ಮುಗಿಯುವ ಹಂತ ತಲುಪಿದೆ. ಇದರ ಉದ್ಘಾಟನೆಗೆ ಸೋನಿಯಾ ಗಾಂಧಿ  ಬರಲಿದ್ದಾರೆ. ಚಿಕ್ಕಮಗಳೂರು- ಬೇಲೂರು- ಸಕಲೇಶಪುರ ರೈಲು ಮಾರ್ಗ ಮಂಜುರಾಗಿದೆ. ಶೀಘ್ರ ಕಾಮಗಾರಿ ಪ್ರಾರಂಭವಾಗುವುದು. ಅಜ್ಜಂಪುರ- ಶಿವನಿ ಜೋಡಿ ಮಾರ್ಗದ ಪ್ರಸ್ತಾವನೆ ಸಲ್ಲಿಸಲಾಗಿದೆ. ರೇಲ್ವೆ ಬಜೆಟ್ನಲ್ಲಿ  ಚಿಕ್ಕಮಗಳೂರು ಜಿಲ್ಲೆಗೆ ಹೆಚ್ಚು ಅನುಕೂಲವಾಗಿದೆ.
ಚಿಕ್ಕಮಗಳೂರು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂ.ಎಲ್. ಮೂರ್ತಿ ಮಾತನಾಡಿ, ಜಿಲ್ಲಾ ಉಸ್ತುವಾರಿ ಸಚಿವರು ತಮ್ಮ ಅಧಿಕಾರ ದುರಪಯೋಗ ಮಾಡಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು.
ನರಸಿಂಹರಾಜಪುರದಲ್ಲಿ ಕೆಲವು ಮತಗಟ್ಟೆಯಲ್ಲಿ ಮತದಾರರ ಪಟ್ಟಿಯಲ್ಲಿ ಹೊಸದಾಗಿ ಮತದಾರರು ಸೇರಿದ್ದಾರೆ ಎಂಬ ದೂರುಗಳು ಬಂದಿದೆ. ಅಧಿಕಾರಿಗಳು ಕಾನೂನು ಉಲ್ಲಂಘನೆ ಮಾಡಿದರೆ ನ್ಯಾಯಾಲಯದ ಮೆಟ್ಟಲು ಏರಬೇಕಾಗುತ್ತದೆ ಎಂದು ಎಚ್ಚರಿಸಿದರು.   
ಪತ್ರಿಕಾಗೋಷ್ಠಿಯಲ್ಲಿ ಮಾಜಿ ಜಿಲ್ಲಾ ಪಂಚಾಯ್ತಿ ಮಾಜಿ ಅಧ್ಯಕ್ಷ ಟಿ.ಡಿ. ರಾಜೇಗೌಡ, ತಾಲೂಕು ಕಾಂಗ್ರೆಸ್ ಅಧ್ಯಕ್ಷ ಡಾ.ಕೆ.ಪಿ. ಅಂಶುಮಂತ್, ಜಿಲ್ಲಾ ಕಾಂಗ್ರೆಸ್ ಮುಖಂಡ ಮಹೇಶ್ ಮತ್ತಿತರರು ಉಪಸ್ಥಿತರಿದ್ದರು. ನಂತರ ಜಯಪ್ರಕಾಶ ಹೆಗ್ಡೆ ಹಾಗೂ ಇತರೆ ಕಾಂಗ್ರೆಸ್ ಮುಖಂಡರು, ವಿಶ್ವ ಹಿಂದೂ ಪರಿಷತ್ ಮುಖಂಡ ವಿಠಲರಾವ್ ಮನೆಗೆ ತೆರಳಿ ಆರೋಗ್ಯ ವಿಚಾರಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement