ಈ ಚುನಾವಣೆ ವಿಧಾನಸಭೆ ಚುನಾವಣೆಗೆ ಬುನಾದಿ: ರಂಜನ್
ಮೂಡಿಗೆರೆ: ಪಟ್ಟಣ ಪಂಚಾಯಿತಿ ಚುನಾವಣೆ ಮುಂದಿನ ವಿಧಾನ ಸಭಾ ಚುನಾವಣೆಗೆ ಬುನಾದಿಯಾಗಲಿದೆ ಎಂದು ಕೆಜೆಪಿ ಜಿಲ್ಲಾ ಯುವ ಘಟಕದ ಅಧ್ಯಕ್ಷ ರಂಜನ್ ಅಜಿತ್ಕುಮಾರ್ ಹೇಳಿದರು.
ಪಟ್ಟಣದ ವಿವಿಧ ವಾರ್ಡ್ಗಳಲ್ಲಿ ಮತಯಾಚನೆ ನಡೆಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ವರೆಗೆ ಪಟ್ಟಣ ಪಂಚಾಯಿತಿಯಲ್ಲಿ ಆಡಳಿತ ನಡೆಸಿದ ಪಕ್ಷಗಳಿಂದ ಪಟ್ಟಣದ ಅಭಿವೃದ್ಧಿ ಸಾಧ್ಯವಾಗಿಲ್ಲ. ಆದ್ದರಿಂದ ಈ ಸಲದ ಚುನಾವಣೆಯಲ್ಲಿ ಅವರಿಗೆ ತಕ್ಕ ಶಾಸ್ತಿ ಮಾಡಲು ಮತದಾರರು ತುದಿಗಾಲಿನ ಮೇಲೆ ನಿಂತಿದ್ದಾರೆ ಎಂದು ಅಭಿಪ್ರಾಯಪಟ್ಟರು.
ಚುನಾವಣೆಯಲ್ಲಿ ಕೆಜೆಪಿಗೆ ಕಾಂಗ್ರೆಸ್ ಪೈಪೋಟಿ ಒಡ್ಡಲಿದೆ. ಬಿಜೆಪಿ ಮತ್ತು ಜೆಡಿಎಸ್ ಮುಖಭಂಗ ತಡೆದುಕೊಳ್ಳಲು ಸಜ್ಜಾಗಬೇಕಿದೆ. ಬಿಜೆಪಿಯಿಂದ ಸದೃಡ ಆಡಳಿತದ ಕನಸು ಹೊತ್ತು ಹಿಂದಿನ ಅನೇಕ ಚುನಾವಣೆಗಳಲ್ಲಿ ಮತದಾರರು ಆ ಪಕ್ಷವನ್ನು ಗೆಲ್ಲಿಸಿದ್ದಕ್ಕೆ ಶಪಿಸಿಕೊಳ್ಳುವಂತಾಗಿದೆ. ಮಾಜಿ ಸಿಎಂ ಯಡಿಯೂರಪ್ಪರ ಅಭಿವೃದ್ಧಿಪರ ನಿಲುವು ಪಟ್ಟಣ ಪಂಚಾಯಿತಿಗೆ ವರವಾಗಿ ಪರಿಣಮಿಸಲಿದೆ ಎಂದು ಹೇಳಿದರು.