'ಕಾನೂನು ಉಲ್ಲಂಘಿಸಿದರೆ ಶಿಕ್ಷೆ ಖಚಿತ'
ಚಿಕ್ಕಮಗಳೂರು: ಕಾನೂನಿಗೆ ವಿರುದ್ಧದ ಕೆಲಸ ಮಾಡಿದರೆ ಅವನಿಗೆ ಶಿಕ್ಷೆ ವಿಧಿಸಲಾಗುತ್ತದೆ. ಆದ್ದರಿಂದ ಎಲ್ಲರಿಗೂ ಕಾನೂನಿನ ಜ್ಞಾನ ಅವಶ್ಯಕವಾಗಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಬಸವರಾಜ್ ಎ. ಪಾಟೀಲ್ ಹೇಳಿದ್ದಾರೆ.
ಐ.ಡಿ.ಎಸ್.ಜಿ. ಸರ್ಕಾರಿ ಕಾಲೇಜು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ವಕೀಲರ ಸಂಘ ತಾಲೂಕಿನ ಅಲ್ಲಂಪುರ ಗ್ರಾಮದಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ಕಾನೂನು ಅರಿವು- ನೆರವು ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ದೇಶಪ್ರೇಮ ತಾಯಿ ಪ್ರೇಮದಂತೆ: ಜ್ಞಾನ ಹಂಚಿಕೊಂಡು ಹೋದಾಗ ಮಾತ್ರ ಅದರ ಜ್ಞಾನ ಹೆಚ್ಚುತ್ತದೆ. ಹಕ್ಕನ್ನು ಸರಿಯಾಗಿ ನಿರ್ವಹಿಸುವ ಕರ್ತವ್ಯವನ್ನು ಮಾಡಬೇಕು. ದೇಶಪ್ರೇಮ ಎನ್ನುವುದು ತಾಯಿ ಪ್ರೇಮದಂತೆ ಪವಿತ್ರವಾದುದು, ದೇಶಕ್ಕೆ ಎನಾದರೂ ತೊಂದರೆ ಬಂದರೆ ಅದನ್ನು ನಿಭಾಯಿಸುವ ಭಾವನೆ ಬೆಳೆಸಿಕೊಳ್ಳಬೇಕು ಸಂವಿಧಾನದಲ್ಲಿ ಕಾನೂನಿನ ಪಾತ್ರ ಮಹತ್ವವಾಗಿದೆ ಎಂದರು.
ವಕೀಲ ಹೆಚ್.ಸಿ. ನಟರಾಜ್ ಮಾತನಾಡಿ, ಸಕಾಲ ಅಧಿನಿಯಮ, ಮಹಿಳೆ ಮತ್ತು ಮಕ್ಕಳ ಸಂರಕ್ಷಣೆ ಕುರಿತು ಉಪನ್ಯಾಸ ನೀಡಿ, ನಿಗಧಿತ ಅವಧಿಯೊಳಗೆ ನ್ಯಾಯ ದೊರಕುವಂತೆ ಮಾಡಲು ಸಕಾಲ ಜಾರಿಗೆ ಬಂದಿದೆ.
ಸರ್ಕಾರಿ ಕಚೇರಿ ಮುನ್ಸಿಪಲ್ ಸಂಸ್ಥೆಗಳು ಸಕಾಲದ ಮೂಲಕ ಕೆಲಸವನ್ನು ಮಾಡಿಕೊಡುತ್ತವೆ.
ಕಾನೂನಿನ ಮುಖಾಂತರ ಬಾಲ ಕಾರ್ಮಿಕರನ್ನು ಮಕ್ಕಳ ಕಲ್ಯಾಣ ಸಮಿತಿಗೆ ಒಪ್ಪಿಸುವುದು ಕೌಟುಂಬಿಕ ದೌರ್ಜನ್ಯ ತಡೆ ಕಾಯ್ದೆ ಜೀವನಾಂಶ ಕಾಯ್ದೆಗಳ ಮೂಲಕ ಮಹಿಳೆಯರಿಗೆ ಸಂರಕ್ಷಣೆ ನೀಡುವುದು, ಜನರಲ್ಲಿ ಕಾನೂನು ಅರಿವು ಮೂಡಿಸುವುದು ಅತಿ ಮುಖ್ಯ ಎಂದು ಅವರು ಹೇಳಿದರು.
ವಕೀಲರ ಸಂಘದ ಖಜಾಂಚಿ ಪಿ. ಪರಮೇಶ್ ಅಧ್ಯಕ್ಷತೆ ವಹಿಸಿದ್ದರು. ಡಾ. ಕೆ.ಎಂ. ಜಗದೀಶ್ ರಾಷ್ಟ್ರೀಯ ಭಾವೈಕ್ಯತೆ ಕುರಿತು ಉಪನ್ಯಾಸ ನೀಡಿದರು. ಕಾರ್ಯಕ್ರಮದಲ್ಲಿ ಬಿ.ಹೆಚ್. ನರೇಂದ್ರ ಪೈ, ಸಂಪತ್ ಕುಮಾರ್ ಹಾಗೂ ವಿ.ಎನ್. ಸುಧಾಮ ಉಪಸ್ಥಿತರಿದ್ದರು.