ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಜನಸ್ನೇಹಿ ಆಡಳಿತ: ಬಿಜೆಪಿ ಸಂಕಲ್ಪ

Mainashree
Updated On : 3 Mar 2013, 12:14 pm

ಕನ್ನಡಪ್ರಭವಾರ್ತೆ, ಚಿಕ್ಕಮಗಳೂರು, ಮಾ. 2
ಜನಸ್ನೇಹಿ ಒಳ್ಳೆಯ ಆಡಳಿತ ನೀಡುವುದು ಬಿಜೆಪಿಯ ಸಂಕಲ್ಪ ಎಂದು ಉನ್ನತ ಶಿಕ್ಷಣ ಸಚಿವ ಸಿ.ಟಿ. ರವಿ ಮತದಾರರಿಗೆ ಭರವಸೆ ನೀಡಿದ್ದಾರೆ.
ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಶನಿವಾರ ಚಿಕ್ಕಮಗಳೂರು ನಗರಸಭಾ ಚುನಾವಣಾ  ಪ್ರಣಾಳಿಕೆಯನ್ನು ಬಿಡುಗಡೆ ಮಾಡಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವರು, ಚಿಕ್ಕಮಗಳೂರು ನಗರ, ರಾಜ್ಯದ ಒಂದು ಅತ್ಯುತ್ತಮ ನಗರವನ್ನಾಗಿಸುವ ಕನಸನ್ನು ಹೊಂದಿದ್ದೇವೆ. ಅದನ್ನು ನನಸಾಗಿಸಲು ಬೆಂಬಲ, ಸಹಕಾರ, ಮಾರ್ಗದರ್ಶನ ನೀಡಬೇಕು ಎಂದು ಮತದಾರರಿಗೆ ಮನವಿ ಮಾಡಿದರು.
10ಕ್ಕೂ ಹೆಚ್ಚು ಪಾರ್ಕ್ ಅಭಿವೃದ್ಧಿ: ಚಿಕ್ಕಮಗಳೂರು ನಗರದ ಅಭಿವೃದ್ಧಿಗೆ ರಾಜ್ಯ ಸರ್ಕಾರ ಈವರೆಗೆ 202 ಕೋಟಿ ಬಿಡುಗಡೆ ಮಾಡಿದೆ. ಇದರಲ್ಲಿ ಹಲವು ಅಭಿವೃದ್ಧಿ ಕೆಲಸಗಳನ್ನು ಕೈಗೆತ್ತಿಕೊಳ್ಳಲಾಗಿದೆ. ರಸ್ತೆ ಅಭಿವೃದ್ಧಿ, ಒಳಚರಂಡಿ ನಿರ್ಮಾಣ ಸೇರಿದಂತೆ ಹಲವು ಕಾರ್ಯಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ. ನಗರದಲ್ಲಿ 147 ಉದ್ಯಾನವನಗಳನ್ನು ಗುರುತಿಸಲಾಗಿದ್ದು, ಇವುಗಳಲ್ಲಿ ನಗರಸಭೆಯಿಂದ 24 ಹಾಗೂ ನಗರಾಭಿವೃದ್ಧಿ ಪ್ರಾಧಿಕಾರದಿಂದ 10ಕ್ಕೂ ಹೆಚ್ಚು ಪಾರ್ಕ್‌ಗಳನ್ನು ಅಭಿವೃದ್ಧಿ ಪಡಿಸಿ ಸುಂದರಗೊಳಿಸಲಾಗಿದೆ. ಇನ್ನುಳಿದ ಉದ್ಯಾನವನಗಳನ್ನು ಮುಂದಿನ ದಿನಗಳಲ್ಲಿ ಅಭಿವೃದ್ಧಿ ಪಡಿಸಲಾಗುವುದು ಎಂದು ಹೇಳಿದರು.
ಯಗಚಿ ನದಿಯಿಂದ ನಗರಕ್ಕೆ ನೀರು: ನಗರದ ಎಲ್ಲಾ 35 ವಾರ್ಡ್‌ಗಳಲ್ಲೂ ದಿನದ 24 ಗಂಟೆ ಸತತವಾಗಿ ಕುಡಿಯುವ ನೀರೋದಗಿಸುವ ಆಲೋಚನೆಯನ್ನು ಹೊಂದಲಾಗಿದ್ದು, ಈ ಯೋಜನೆ ಕಾರ್ಯಗತಗೊಳಿಸಲು ರೂಪುರೇಷೆ ಸಿದ್ದಪಡಿಸಿ ಸರ್ಕಾರಕ್ಕೆ ನೀಡಲಾಗಿದೆ. ಸುಮಾರು 67 ಕೋಟಿ ವೆಚ್ಚದಲ್ಲಿ ಏಶಿಯಾ ಅಭಿವೃದ್ಧಿ ಮಂಡಳಿ ನೆರವಿನಿಂದ ಯಗಚಿ ನದಿಯಿಂದ ಹೆಚ್ಚು ನೀರನ್ನು ನಗರಕ್ಕೆ ಹರಿಸಲು ಪ್ರತ್ಯೇಕ ಪೈಪ್ ಅಳವಡಿಸಲು ಆಯೋಚಿಸಲಾಗಿದೆ ಎಂದರು.
1600 ಜನರಿಗೆ ನಿವೇಶನ: ನಗರದಲ್ಲಿರುವ ಸುಮಾರು 7 ಸಾವಿರಕ್ಕೂ ಹೆಚ್ಚು ಮನೆಗಳು ಕಂದಾಯ ಪಾವತಿಯಿಂದ ಹೊರಗುಳಿದಿದ್ದವು. ಅವುಗಳನ್ನು ಕಂದಾಯ ಪಾವತಿ ವ್ಯಾಪ್ತಿಗೆ ಸೇರಿಸಲಾಗಿದೆ. ಅದರಿಂದ ನಗರಸಭೆಯ ಆದಾಯ ಹೆಚ್ಚಳವಾಗಿದೆ. ನಗರದಲ್ಲಿ ಸುಮಾರು 6 ಸಾವಿರ ನಿವೇಶನ ರಹಿತರು ಇದ್ದು, ಇವರಲ್ಲಿ 1600 ಜನರಿಗೆ ನಿವೇಶನ ನೀಡಲಾಗಿದೆ. ಮುಂದಿನ ದಿನಗಳಲ್ಲಿ ಎಲ್ಲಾ ಬಡವರಿಗೆ ಸ್ವಂತ ಸೂರು ನೀಡಲಾಗುವುದು ಎಂದು ಹೇಳಿದರು.
ಬೆಂಗಳೂರು ಮಾದರಿಯಲ್ಲಿ ಕೊಳಚೆ ಪ್ರದೇಶಗಳಲ್ಲಿ ವಸತಿ ಸಮುಚ್ಚಯ ನಿರ್ಮಿಸುವ ಗುರಿಯನ್ನು ಹೊಂದಲಾಗಿದೆ. ಕೊಳಚೆ ನಿರ್ಮೂಲನಾ ಮಂಡಳಿಯ ನೆರವಿನೊಂದಿಗೆ ಸುಸಜ್ಜಿತ ಕಟ್ಟಡ ನಿರ್ಮಾಣ ಮಾಡಲಾಗುವುದು ಎಂದು ಸಚಿವರು, ಅಭಿವೃದ್ಧಿ ಸಾಧನೆ ಮತ್ತು ಮುಂದಿನ ಸಾಧನೆಯ ಗುರಿಯೊಂದಿಗೆ ಮತಯಾಚನೆ ಮಾಡಲಾಗುವುದು ಎಂದು ತಿಳಿಸಿದರು.
ಬೆಲೆ ಏರಿಕೆ ನಿಯಂತ್ರಣ ಮಾಡುವಲ್ಲಿ ಕೇಂದ್ರದ ಕಾಂಗ್ರೆಸ್ ಸರ್ಕಾರ ವಿಫಲವಾಗಿದೆ. ಮಧ್ಯಮ  ವರ್ಗದವರಿಗೆ ಜೀವನ ನಡೆಸುವುದೇ ಕಷ್ಟವಾಗಿದೆ.  ನಿರುದ್ಯೋಗದ ಪ್ರಮಾಣವೂ ಹೆಚ್ಚಳವಾಗಿದೆ. ಈ ವೈಫಲ್ಯತೆಯನ್ನು ಜನರ ಮುಂದಿಡುವ ಕೆಲಸ ಬಿಜೆಪಿ ಪ್ರಚಾರದ ವೇಳೆಯಲ್ಲಿ ಮಾಡುತ್ತದೆ ಎಂದು ಹೇಳಿದರು.
ಬಿಜೆಪಿ ಅಧಿಕಾರಕ್ಕೆ: ಈ ಬಾರಿ ನಗರಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ಆಡಳಿತದಲ್ಲಿ ಅನುಭವ ಇರುವವರು, ಹೊಸಬರು ಇದ್ದಾರೆ. ಟಿಕೆಟ್ ನೀಡುವಲ್ಲಿ ಸಾಮಾಜಿಕ ನ್ಯಾಯವನ್ನು ಕಾಪಾಡಿಕೊಂಡು ಬಂದಿದ್ದೇವೆ. ಚಿಕ್ಕಮಗಳೂರು ನಗರಸಭೆಯಲ್ಲಿ 22ಕ್ಕೂ ಹೆಚ್ಚು ಸ್ಥಾನಗಳಲ್ಲಿ ಜಯಗಳಿಸಿ, ಬಿಜೆಪಿ ಸ್ವಂತ ಬಲದ ಮೇಲೆ ಒಳ್ಳೆಯ ಆಡಳಿತ ನೀಡಲಿದೆ ಎಂದ ಸಚಿವರು, ಸೋಲು ಖಾತ್ರಿಯಾಗಿದ್ದರಿಂದ ಕಾಂಗ್ರೆಸ್ ಹಾಗೂ ಇತರೆ ಪಕ್ಷಗಳು ಆರೋಪ ಮಾಡುತ್ತಿವೆ ಎಂದರು.
ಕೆಜೆಪಿಯಲ್ಲಿದ್ದವರು ನಮ್ಮ ದಾಯಾದಿಗಳು. ಅವರು ಸ್ಪರ್ಧೆ ಮಾಡುವ ಕಡೆಗಳಲ್ಲಿ ಬಿಜೆಪಿಯ ಕೆಲವು ಮತಗಳು ಪಡೆಯಬಹುದು. ಇದರಿಂದ ಮತಗಳ ಅಂತರ ಕಡಿಮೆಯಾಗಬಹುದು. ಗೆಲವಿಗೆ ಏನೂ ಸಮಸ್ಯೆ ಇಲ್ಲ ಎಂದು ಹೇಳಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement