ಕೆಜೆಪಿ ಅಭ್ಯರ್ಥಿಗಳಿಗೆ ಪಟ್ಟಣಗಳ ಸಮಸ್ಯೆ ಅರಿವಿದೆ: ರಂಜನ್
ಮೂಡಿಗೆರೆ: ಕೆಜೆಪಿ ಪಕ್ಷದಿಂದ ಚುನಾವಣೆಯಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳಿಗೆ ವಿವಿಧ ನಗರ ಮತ್ತು ಪಟ್ಟಣಗಳ ಜ್ವಲಂತ ಸಮಸ್ಯೆಗಳ ಬಗ್ಗೆ ಅರಿವಿದೆ. ಹೀಗಾಗಿಯೇ ಮತದಾರರು ಕೆಜೆಪಿ ಕಡೆಗೆ ಒಲವಿಟ್ಟಿದ್ದಾರೆ. ಈಗಾಗಲೇ ಪಕ್ಷದ ಪ್ರಣಾಳಿಕೆ ಬಿಡುಗಡೆಗೊಳಿಸಲಾಗಿದೆ. ಪಟ್ಟಣದ ಸ್ವಚ್ಛತೆ, ಉತ್ತಮ ಆಸ್ಪತ್ರೆ, ಚರಂಡಿ, ಫುಟ್‌ಪಾತ್, ಪಾರ್ಕಿಂಗ್ ವ್ಯವಸ್ಥೆ, ಪ್ರತಿದಿನ ಅಗತ್ಯಕ್ಕೆ ತಕ್ಕಂತೆ ಶುದ್ಧ ಕುಡಿವ ನೀರು ಪೂರೈಕೆ, ಪ್ರತಿ ರಸ್ತೆಗಳ ಬೀದಿದೀಪ, ನಿವೇಶನರಹಿತರಿಗೆ ನಿವೇಶನ ಹಂಚಿಕೆ ಸೇರಿದಂತೆ ಹಲವು ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಕೆಜೆಪಿ ಜಿಲ್ಲಾ ಯುವ ಘಟಕದ ಅಧ್ಯಕ್ಷ ರಂಜನ್ ಅಜಿತ್‌ಕುಮಾರ್ ತಿಳಿಸಿದರು. ರವಿವಾರ ಮೂಡಿಗೆರೆಯಲ್ಲಿ ಪಕ್ಷದ ಅಭ್ಯರ್ಥಿ ಎಂ.ಕೆ. ರೂಪಾ ಪರ ಮನೆ, ಮನೆಗಳಿಗೆ ತೆರಳಿ ಮತ ಯಾಚಿಸಿದ ಸಮಯದಲ್ಲಿ ಸುದ್ಧಿಗಾರರೊಂದಿಗೆ ಮಾತನಾಡಿದರು.
ಮತದಾರರಿಗಿದೆ ಸಮಯಪ್ರಜ್ಞೆ: ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿರುವ ಕೆಜೆಪಿಗೆ ತಳಪಾಯವಿಲ್ಲ ಎಂದಿರುವ ಮೋಟಮ್ಮ, ಕಳಚಿಕೊಳ್ಳುತ್ತಿರುವ ಕಾಂಗ್ರೆಸ್ ಬುನಾದಿಯನ್ನು ಭದ್ರಪಡಿಸಿದ ಬಳಿಕ ಕೆಜೆಪಿ ವಿರುದ್ಧ ಮಾತನಾಡಲಿ. ಮತದಾರರ ಮುಖ ನೋಡಿ ಮತ ಕೇಳುವ ಶಕ್ತಿ ಮತ್ತು ಚೈತನ್ಯ ಕಳೆದುಕೊಂಡಿರುವ ಕಾಂಗ್ರೆಸ್ಸಿಗರಿಂದ ಯಾವುದೇ ಕ್ಷೇತ್ರಗಳ ಅಭಿವೃದ್ಧಿ ಸಾಧ್ಯವಿಲ್ಲ ಎಂಬ ಸಮಯಪ್ರಜ್ಞೆ ಮತದಾರರಿಗಿದೆ ಎಂದು ಟೀಕಿಸಿದರು. ಕಾಂಗ್ರೆಸ್, ಬಿಜೆಪಿ, ಜೆಡಿಎಸ್‌ನವರಿಗೆ ಸ್ಥಳೀಯ ಸಂಸ್ಥೆಗಳ ಕೆಲಸ ಕಾರ್ಯವ್ಯಾಪ್ತಿ ತಿಳಿದಂತಿಲ್ಲ. ಅವರು ಕೈಲಾಗದ ಕೆಲಸಗಳನ್ನು ಮಾಡುವ ಪೊಳ್ಳು ಭರವಸೆ, ಆಮಿಷಗಳನ್ನು ಒಡ್ಡುತ್ತಿದ್ದಾರೆ ಎಂದು ಆರೋಪಿಸಿದರು.
ಅಭ್ಯರ್ಥಿ ಎಂ.ಕೆ. ರೂಪಾ, ವಿಶಾಲಾ, ಕೊಟ್ಟಿಗೆಹಾರ ಆದರ್ಶ, ಎಸ್ಸಿ, ಎಸ್ಟಿ ವಿಭಾಗದ ಅಧ್ಯಕ್ಷ ಆಲ್ದೂರು ಮಂಜಯ್ಯ ಉಪಸ್ಥಿತರಿದ್ದರು.