ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ನಿತ್ಯ ಅವಲೋಕನದೊಂದಿಗೆ ಮುನ್ನಡೆಯಿರಿ

Lingaraj Badiger
Updated On : 4 Mar 2013, 11:09 am

ಕ.ಪ್ರ ವಾರ್ತೆ, ಚಿಕ್ಕಮಗಳೂರು, ಮಾ.3
ಹಿಂದಿನ ದಿನಗಳ ಅವಲೋಕನ ಮುಂದಿನ ಬೆಳವಣಿಗೆಗೆ ದಾರಿ ಎಂದು ಹೊರನಾಡು ಶ್ರೀಕ್ಷೇತ್ರದ ಧರ್ಮಕರ್ತ ಡಾ.ಜಿ. ಭೀಮೇಶ್ವರ ಜೋಷಿ ಹೇಳಿದ್ದಾರೆ.
ನಾಗರಿಕ ಅಭಿನಂದನಾ ಸಮಿತಿ ಹಾಗೂ ಉದ್ಭವ ಪ್ರಕಾಶನ ಶನಿವಾರ ಸಂಜೆ ನಗರದ ಕುವೆಂಪು ಕಲಾಮಂದಿರದಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ತುಮಕೂರು ವಿಶ್ವವಿದ್ಯಾನಿಲಯದ ಗೌರವ ಡಾಕ್ಟರೇಟ್ ಪದವಿ  ಪುರಸ್ಕೃತರಾದ ಹಿನ್ನೆಲೆಯಲ್ಲಿ ನೀಡಿದ ಅಭಿವಂದನೆ ಸ್ವೀಕರಿಸಿ ಮಾತನಾಡಿದರು.
ತನ್ನನ್ನು ತಾನು ಅರಿಯುವ ಪ್ರಯತ್ನ ಮಾಡಿದರೆ ಬದುಕು ಸಾರ್ಥಕವಾಗುತ್ತದೆ. ಅವಲೋಕನ ಪ್ರಕ್ರಿಯೆಗೆ ಅಭಿನಂದನಾ ಸಮಾರಂಭ ಪ್ರೇರಕ. ನಿತ್ಯ ಅವಲೋಕನದೊಂದಿಗೆ ಮುನ್ನಡೆಯುವ ಅಭ್ಯಾಸ ಮಾಡಿಕೊಂಡರೆ  ಸ್ವಯಂ ನಿಯಂತ್ರಣವೂ ಸಿದ್ಧಿಸುತ್ತದೆ. ಪರಿಪೂರ್ಣತೆಯತ್ತಲೂ ಸಾಗಬಹುದು. ಸಮಾಜದಲ್ಲಿ ಕೆಡುಕು ಕಡಿಮೆಯಾಗಿ ರಾಗ, ದ್ವೇಷದಿಂದ ಮುಕ್ತರಾಗುವ ಸಂಸ್ಕಾರ ಲಭ್ಯವಾಗುತ್ತದೆ ಎಂದರು.
ಅಭಿನಂದನಾ ಭಾಷಣ ಮಾಡಿದ ಶಿಕ್ಷಣ ತಜ್ಞ ಪ್ರೊ.ಕೆ.ಈ. ರಾಧಾಕೃಷ್ಣ, ಮಾನಸಿಕ ನೆಮ್ಮದಿ ತಾಣವಾದ ದೇವಾಲಯಗಳು ಸಮಾಜವಿಜ್ಞಾನದ  ವೇದಿಕೆಯೂ ಹೌದು. ತಾಂತ್ರಿಕತೆ, ನಿರ್ವಹಣಾಶಾಸ್ತ್ರ ಇಂದು ಧರ್ಮದ ಭಾಗವಾಗುತ್ತಿದೆ. ಮತ್ತೊಮ್ಮೆ ಧರ್ಮದ ಕಡೆ ಮುಖ ಮಾಡುತ್ತಿದ್ದೇವೆ. ಧರ್ಮದ ಬಗ್ಗೆ ಜಗತ್ತಿನಲ್ಲಿ ಪುನರ್ ವ್ಯಾಖ್ಯಾನವಾಗುತ್ತಿರುವ ಸಂದರ್ಭದಲ್ಲಿ ಡಾ. ಜೋಷಿಯಂತವರು ಈ ಕಾಲವನ್ನು ಹದಗೊಳಿಸಲು ಪ್ರಯತ್ನಿಸುತ್ತಿದ್ದಾರೆ. ಹೊರನಾಡು ಕ್ಷೇತ್ರ ಸಾಂಸ್ಕೃತಿಕ ರೂಪಕವಾಗುತ್ತಿದೆ ಎಂದು ಹೇಳಿದರು.  
ನಾವು ಸುಂದರ ಜಗತ್ತಲ್ಲಿ:  ನಾವು ನಿರಂತರವಾಗಿ ಚಲನಶೀಲವಾಗಿರುವ ಸುಂದರ ಜಗತ್ತಿನಲ್ಲಿದ್ದೇವೆ. ಪೃಥ್ವಿ, ಸಂಪತ್ತು, ಭೋಗ ಪರಸ್ಪರ ಸಂಬಂಧ ಹೊಂದಿವೆ. ಸಾಮಾಜಿಕ ವ್ಯವಸ್ಥೆಯ ಆತ್ಮ ವೇಗವಾಗಿ ಸಾಗುತ್ತಿದೆ. ವೇಗ ನಿಯಂತ್ರಿಸುವ ತೀವ್ರಭಾವ ಹದಗೊಳಿಸುವುದು ಸಾಮಾಜಿಕ ಹೊಣೆಗಾರಿಕೆ ಎಂದರು.  
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಸಮಿತಿ ಅಧ್ಯಕ್ಷ ಡಿ.ಎಚ್. ನಟರಾಜ್ ಮಾತನಾಡಿ, ಒಳಿತನ್ನು ಗುರುತಿಸಿ, ಗೌರವಿಸಿ, ಪ್ರೋತ್ಸಾಹಿಸುವ ಕೆಲಸ ಜಾಗೃತ ನಾಗರಿಕ ಸಮಾಜದ ಕರ್ತವ್ಯ. ಒಳಿತನ್ನು ಪೋಷಿಸುವುದರಿಂದ  ಸಮಾಜದಲ್ಲಿ ದುಷ್ಟಶಕ್ತಿಗಳು ಕಡಿಮೆಯಾಗಿ ಶಿಷ್ಟಶಕ್ತಿಗಳು ವಿಜೃಂಭಿಸಲು ಸಹಕಾರಿಯಾಗುವುದು ಎಂದರು.  
ಕೃತಿ ಲೋಕಾರ್ಪಣೆ: ಸತ್ಯವಿಠಲ ಅವರ ಸಮಗ್ರಭಾಮಿನಿ ಕಾವ್ಯಗಳ ಅಧ್ಯಯನ ಬೆಳವಾಡಿ ಮಂಜುನಾಥ ವಿರಚಿತ ಭಾಮಿನಿ ಭಾಸ್ಕರ ಕೃತಿಯನ್ನು ಲೋಕಾರ್ಪಣೆಗೊಳಿಸಿದ ಮಕ್ಕಳ ತಜ್ಞ ಡಾ.ಜೆ.ಪಿ. ಕೃಷ್ಣೇಗೌಡ, ಕನ್ನಡ ಮತ್ತು ಸಂಸ್ಕೃತದಲ್ಲಿ  ಅಪಾರಜ್ಞಾನ ಹೊಂದಿರುವ ಇಬ್ಬರು ಸಾಹಿತಿಗಳ ಪರಿಶ್ರಮದ ಫಲ ಈ ಸುಂದರ ಕೃತಿ ಎಂದರು.  
ಮಹಿಳಾ ಜಾಗೃತಿ ಸಂಘದ ಅಧ್ಯಕ್ಷೆ ಗೌರಮ್ಮ ಬಸವೇಗೌಡ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ನಾಗರಿಕ ಅಭಿನಂದನಾ ಸಮಿತಿ ಪದಾಧಿಕಾರಿಗಳಾದ ಗಣೇಶ್‌ಕುಮಾರ್ ಸ್ವಾಗತಿಸಿ, ಶಂಕರನಾರಾಯಣಭಟ್ಟ  ವಂದಿಸಿದರು. ಸಾಹಿತಿ ಬೆಳವಾಡಿ ಮಂಜುನಾಥ ಕಾರ್ಯಕ್ರಮ ನಿರೂಪಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement