ಬಿಜೆಪಿ ಮತ್ತೆ ಅಧಿಕಾರಕ್ಕೆ: ಸಚಿವರ ವಿಶ್ವಾಸ
ನರಸಿಂಹರಾಜಪುರ: ಶೃಂಗೇರಿ ಕ್ಷೇತ್ರದ ಮೂರೂ ಪಪಂಗಳಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ರಾಜ್ಯ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಡಿ.ಎನ್. ಜೀವರಾಜ್ ವಿಶ್ವಾಸ ವ್ಯಕ್ತಪಡಿಸಿದರು.
ಭಾನುವಾರ ಪಟ್ಟಣದ ಮಾರಿ ಗದ್ದುಗೆ ರಸ್ತೆ, ಮೇದರಬೀದಿ, ಬಾವಿಹಟ್ಟಿ ಸೇರಿದಂತೆ ವಿವಿಧ ವಾರ್ಡ್ಗಳಲ್ಲಿ ಮನೆ, ಮನೆಗಳಿಗೆ ತೆರಳಿ ಬಿಜೆಪಿ ಅಭ್ಯರ್ಥಿಗಳ ಪರ ಪ್ರಚಾರ ನಡೆಸಿ ಮಾತನಾಡಿ, ನರಸಿಂಹರಾಜಪುರ, ಕೊಪ್ಪ ಹಾಗೂ ಶೃಂಗೇರಿ ಪಟ್ಟಣಗಳಲ್ಲಿ ಅಭಿವೃದ್ಧಿ ಮಾಡಿದ್ದೇವೆ. ಅಭಿವೃದ್ಧಿ ಆಧಾರದ ಮೇಲೆ ಮತ ಕೇಳುತ್ತಿದ್ದೇವೆ ಎಂದರು.
ಅಭಿವೃದ್ಧಿ- ಅಪಪ್ರಚಾರ: ಪಪಂ ಚುನಾವಣೆ ಅಭಿವೃದ್ಧಿ ಹಾಗೂ ಅಪಪ್ರಚಾರದ ನಡುವೆ ಸಂಘರ್ಷ ನಡೆಯುತ್ತಿದೆ. ನಾನು ಎರಡು ಬಾರಿ ಶಾಸಕನಾಗಿ ಕೆಲಸ ನಿರ್ವಹಿಸಿದ್ದೇನೆ. ಈಗ ಮಂತ್ರಿಯಾಗಿದ್ದೇನೆ. ನನಗೆ ಅಭಿವೃದ್ಧಿ ಬಗ್ಗೆ ಹೆಮ್ಮೆ ಇದೆ. ಈ ಆಧಾರದ ಮೇಲೆ ಮನೆ, ಮನೆಗೆ ತೆರಳಿ ಮತ ಯಾಚಿಸುತ್ತೇನೆ. ವಿರೋದ ಪಕ್ಷಗಳು ಅಪಪ್ರಚಾರ ಮಾಡುತ್ತಿದ್ದಾರೆ. ಮತದಾರರ ಪಟ್ಟಿಗೆ ಹೊಸದಾಗಿ ಬಿಜೆಪಿ ಕಾರ್ಯಕರ್ತರ ಹೆಸರು ಸೇರಿಸುತ್ತಿದ್ದಾರೆ ಎಂಬ ಅವರ ಆರೋಪದಲ್ಲಿ ಯಾವುದೇ ಸತ್ಯವಿಲ್ಲ. ಮತದಾರರ ಪಟ್ಟಿಗೆ ಕಾನೂನು ಬದ್ದವಾಗಿ ಯಾರೇ ದಾಖಲೆ ನೀಡಿದ್ದರೂ ಅವರ ಹೆಸರು ಸೇರ್ಪಡೆಯಾಗಿದೆ. ಇದರಲ್ಲಿ ಬಿಜೆಪಿ, ಕಾಂಗ್ರೆಸ್ ಅಥವಾ ಜೆಡಿಎಸ್ ಎಂಬ ಹಣೆ ಪಟ್ಟಿ ಸರಿಯಲ್ಲ. ಕಾಂಗ್ರೆಸ್ಗೆ ಸೋಲಿನ ಭೀತಿ ಎದುರಾಗಿರುವುದರಿಂದ ಸುಳ್ಳು ಆರೋಪ ಮಾಡುತ್ತಿದ್ದಾರೆ ಎಂದರು.
ಕಾಂಗ್ರೆಸ್, ಜೆಡಿಎಸ್ ಅಪವಿತ್ರ ಮೈತ್ರಿ: ಕಾಂಗ್ರೆಸ್ ಹಾಗೂ ಜೆಡಿಎಸ್ ಅಪವಿತ್ರ ಮೈತ್ರಿ ಮಾಡಿಕೊಂಡಿದೆ ಎಂದು ಜೀವರಾಜ್ ಆರೋಪಿಸಿದರು. 1999 ರ ವಿಧಾನ ಸಭೆ ಚುನಾವಣೆಯಿಂದ ಕಾಂಗ್ರೆಸ್ ಹಾಗೂ ಜೆಡಿಎಸ್ ಅಪವಿತ್ರ ಮೈತ್ರಿ ಪರಂಪರೆ ಪ್ರಾರಂಭವಾಯಿತು. ಈ ಚುನಾವಣೆಯಲ್ಲೂ ಈ ಪರಂಪರೆ ಮುಂದುವರಿದಿದೆ ಎಂದು ಅವರು ತಿಳಿಸಿದರು. ಶೃಂಗೇರಿ ಕ್ಷೇತ್ರ ಅಧ್ಯಕ್ಷ ನೀಲೇಶ್, ಬಿಜೆಪಿ ಕಸಬಾ ಹೋಬಳಿ ಅಧ್ಯಕ್ಷ ಎಚ್.ಎಂ. ಮನು, ಆಶೀಶ್ ಕುಮಾರ್, ಕೆ.ಪಿ. ಸಂಪತ್ ಕುಮಾರ್, ಪಿ.ಜೆ. ಆಂಟೋನಿ, ಸುಜಾತ, ಜೆ.ಜಿ. ನಾಗರಾಜ್, ಸತ್ಯನಾರಾಯಣಸ್ವಾಮಿ, ಮುತ್ತಿನಕೊಪ್ಪ ಗೋಪಾಲ್, ವೈ.ಎಸ್. ಸುಬ್ಬಣ್ಣ ಇದ್ದರು.