'ಮಠಗಳಿಗೆ ಹಣ ನೀಡಿ ಬಿಜೆಪಿ ಹೊಸ ಸಂಪ್ರದಾಯ'
ಕ.ಪ್ರ.ವಾರ್ತೆ, ಕಡೂರು, ಮಾ.3:
ಜನರ ತೆರಿಗೆ ಹಣವನ್ನು ಮಠಗಳಿಗೆ ನೀಡುತ್ತಿರುವ ಬಿಜೆಪಿ ಸರ್ಕಾರ ಸಂವಿಧಾನದ ನಿಯಮ ಮುರಿದು ಹೊಸ ಸಂಪ್ರದಾಯಕ್ಕೆ ನಾಂದಿ ಹಾಡಿದೆ ಎಂದು ಕೆಪಿಸಿಸಿ ರಾಜ್ಯ ಉಪಾಧ್ಯಕ್ಷ ಬಿ.ಕೆ. ಚಂದ್ರಶೇಖರ್ ಅವರು ಆರೋಪಿಸಿದರು.
ಸ್ಥಳೀಯ ಸಂಸ್ಥೆಗಳ ಚುನಾವಣೆ ಹಿನ್ನೆಲೆಯಲ್ಲಿ ಪಟ್ಟಣದ ಕೆ.ಎಂ. ರಸ್ತೆಯಲ್ಲಿ ಪಕ್ಷದ ಪ್ರಚಾರ ಕಾರ್ಯಾಲಯ ಉದ್ಘಾಟಿಸಿ ಮಾತನಾಡಿ, ಬಿಜೆಪಿ ಸರ್ಕಾರ ಜನರಿಂದ ಸಂಗ್ರಹಿಸಿದ ತೆರಿಗೆ ಹಣವನ್ನು ಮಠಗಳಿಗೆ ನೀಡುವುದನ್ನು ಹಲವಾರು ಮಠಾಧೀಶರೇ ವಿರೋಧಿಸಿದ್ದಾರೆ. ಆದರೆ ಬಿಜೆಪಿ ಸರ್ಕಾರವು ಅನುದಾನ ನೀಡುವ ಮೂಲಕ ರಾಜ್ಯದಲ್ಲಿ ಜಾತೀಯತೆ ಹುಟ್ಟುಹಾಕುತ್ತಿದೆ ಎಂದರು.
ಕಮಲವನ್ನು ಬಿಜೆಪಿ ನಾಯಕರು ಆಪರೇಷನ್ ಕಮಲ ಎಂದು ಮಾಡಿಕೊಂಡು ಕಮಲದ ದಳಗಳನ್ನು ಕಿತ್ತು ಕಮಲವನ್ನೇ ನಾಶಪಡಿಸಿದ್ದಾರೆ ಎಂದ ಅವರು, ರಾಜ್ಯದಲ್ಲಿ ಹೆಚ್ಚುತ್ತಿರುವ ಅತ್ಯಾಚಾರ ಪ್ರಕರಣಗಳನ್ನು ಮಟ್ಟ ಹಾಕುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ. ಈ ಬಗ್ಗೆ ಬಿಜೆಪಿ ನಾಯಕರಾದ ಅನಂತಕುಮಾರ್ ತಾವು ಚರ್ಚೆಗೆ ಕರೆದರೂ ಅವರು ಬರಲು ಸಿದ್ಧರಿಲ್ಲ ಎಂದರು.
ದಿನಕ್ಕೊಂದು ಆದೇಶ ಮಾಡುತ್ತಿರುವ ಸರ್ಕಾರವನ್ನು ಜನರೇ ಕಿತ್ತೆಸೆಯುತ್ತಾರೆ ಎಂದ ಚಂದ್ರಶೇಖರ್, ಕಾಂಗ್ರೆಸ್ ಪ್ರಣಾಳಿಯಂತೆ ಜನ ಅಧಿಕಾರ ನೀಡಿದಲ್ಲಿ ನಾಲ್ಕೈದು ತಿಂಗಳಲ್ಲಿ ಕುಡಿಯುವ ನೀರು ಪೂರೈಕೆ, ಒಳಚಂರಡಿ ವ್ಯವಸ್ಥೆ, ಕಸ ವಿಲೇವಾರಿ, ಭ್ರಷ್ಟಾಚಾರ ನಿಗ್ರಹ ಸೇರಿದಂತೆ ಪ್ರಮುಖ ಭರವಸೆ ನೀಡಲಾಗಿದೆ.
ರಾಜ್ಯದ ಮತದಾರರು ಕಾಂಗ್ರೆಸ್ ಅಭ್ಯರ್ಥಿಗಳನ್ನು ಗೆಲ್ಲಿಸಿ ಅಧಿಕಾರಕ್ಕೆ ತರಬೇಕು ಎಂದು ಮನವಿ ಮಾಡಿ ಮತಯಾಚನೆ ಮಾಡಿದರು. ಕಾರ್ಯಕ್ರಮದಲ್ಲಿ ಕೆಪಿಸಿಸಿ ರಾಜ್ಯ ಕಾರ್ಯದರ್ಶಿ ಕಡೂರು ಸಿ.ನಂಜಪ್ಪ, ಕಾಂಗ್ರೆಸ್ ಮುಖಂಡರಾದ ಕೆ.ಬಿ. ಮಲ್ಲಿಕಾರ್ಜುನ್, ಎಂ.ಎಚ್. ಚಂದ್ರಪ್ಪ, ಕೆ.ಎಂ.ವಿನಾಯಕ, ಮಹೇಶ್ ಒಡೆಯರ್, ಕೆ.ಜಿ. ಶ್ರೀನಿವಾಸಮೂರ್ತಿ, ಕೆ.ಎಸ್.ಆನಂದ್, ಚಂದ್ರಮೌಳಿ ಮತ್ತಿತರರು ಉಪಸ್ಥಿತರಿದ್ದರು.