ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ರಾಜಕೀಯ ಪಕ್ಷಗಳ ಬಿರುಸಿನ ಪ್ರಚಾರ

Lingaraj Badiger
Updated On : 4 Mar 2013, 11:12 am

ನರಸಿಂಹರಾಜಪುರ: ಪಪಂ ಚುನಾವಣೆ ಕಾವು ಏರುತ್ತಿದ್ದು ಭಾನುವಾರ ವಿವಿಧ ಪಕ್ಷಗಳ ಮುಖಂಡರು, ಕಾರ್ಯಕರ್ತರು ಮನೆ, ಮನೆಗೆ ಬೇಟಿ ನೀಡಿ ಮತ ಯಾಚಿಸಿದರು.
ಜಿಲ್ಲಾ ಉಸ್ತುವಾರಿ ಸಚಿವ ಡಿ.ಎನ್. ಜೀವರಾಜ್ ಮನೆ, ಮನೆಗೆ ಬೇಟಿ ನೀಡಿ ಬಿಜೆಪಿ ಅಭ್ಯರ್ಥಿಗಳಿಗೆ ಉತ್ಸಾಹ ತುಂಬಿದರು. ಮಧ್ಯಾಹ್ನದ ನಂತರ ಡಿ.ಎನ್. ಜೀವರಾಜ್ ಜೊತೆಗೆ ವಿಧಾನ ಪರಿಷತ್ ಸದಸ್ಯ ಗಣೇಶ್ ಕಾರ್ಣೀಕ್ ಸೇರಿ ಪ್ರಚಾರ ನಡೆಸಿದರು. ಸಚಿವರ ಜೊತೆಗೆ ಬಿಜೆಪಿ ಮುಖಂಡರು, ಕಾರ್ಯಕರ್ತರ ಪಡೆಯೆ ಹಿಂಬಾಲಿಸಿ ಚುನಾವಣೆಗೆ ಮತ್ತಷ್ಟು ರಂಗು ತಂದರು.
ಬಿರುಸಿನ ಪ್ರಚಾರ: ಕಾಂಗ್ರೆಸ್‌ನಿಂದ ಶನಿವಾರ ಬಿರುಸಿನ ಪ್ರಚಾರ ನಡೆಸಿದ್ದ ಜಿಪಂ ಮಾಜಿ ಅಧ್ಯಕ್ಷ ಟಿ.ಡಿ. ರಾಜೇಗೌಡ ಭಾನುವಾರವೂ ಮನೆ, ಮನೆಗೆ ತೆರಳಿ ಪ್ರಚಾರ ನಡೆಸಿದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಾ.ಕೆ.ಪಿ. ಅಂಶುಮಂತ್, ಜಿಪಂ ಸದಸ್ಯ ಆದಿಲ್, ಚೆನ್ನಗಿರಿ, ಎಸ್. ಪೇಟೆ ಸತೀಶ್, ಸೋಮೇಶ್, ಆರ್. ಸದಾಶಿವ, ಕೆ.ಎಂ. ಗಂಗಾಧರ್, ಸುಂದರೇಶ್, ಕೆ.ಎ. ಅಬೂಬಕರ್ ಸಾತ್ ನೀಡಿದರು.
ಜೆಡಿಎಸ್‌ನಿಂದ ಸ್ಥಳೀಯ ಮುಖಂಡರೆ ಮನೆ, ಮನೆಗೆ ತೆರಳಿ ಪ್ರಚಾರ ನಡೆಸಿದ್ದು, ಸೋಮವಾರ ವಿಧಾನ ಪರಿಷತ್ ಸದಸ್ಯ ಎಂ. ಶ್ರೀನಿವಾಸ್ ಆಗಮಿಸಲಿದ್ದು, ಮತ ಯಾಚನೆ ಮಾಡಲಿದ್ದಾರೆ ಎಂದು ಜೆಡಿಎಸ್ ಮೂಲಗಳು ತಿಳಿಸಿವೆ.
ಹಾಲಿ 6 ಸದಸ್ಯರು ಕಣದಲ್ಲಿ: ಪಪಂನ ಹಾಲಿ 6 ಸದಸ್ಯರು ಮತ್ತೆ ಆಯ್ಕೆ ಬಯಸಿದ್ದು, ಚುನಾವಣಾ ಕಣದಲ್ಲಿದ್ದಾರೆ. ಕಾಂಗ್ರೆಸ್ ಸದಸ್ಯರಾಗಿದ್ದ ಲೇಖಾ ವಸಂತ್, ಪಿ.ಆರ್. ಸುಕುಮಾರ್, ಅಪ್ರೋಜ್ ಕಣದಲ್ಲಿದ್ದಾರೆ.
ಜಿಡಿಎಸ್‌ನ ಏಕೈಕ ಸದಸ್ಯರಾಗಿದ್ದ ಅಬ್ದುಲ್ ಸುಬಾನ್, ಬಿಜೆಪಿಯ ಕೆ. ರಾಜೇಂದ್ರ ಹಾಗೂ ಆರ್. ರಾಜಶೇಖರ್ ಮತ್ತೆ ಚುನಾವಣೆ ಕಣದಲ್ಲಿದ್ದಾರೆ. ಹಿಂದೆ 9 ನೇ ವಾರ್ಡಿನಲ್ಲಿ ಜಯ ಗಳಿಸಿದ್ದ ಪಿ.ಆರ್. ಸುಕುಮಾರ್ ಈಗ 11 ವಾರ್ಡಿನಲ್ಲಿ ನಿಂತಿದ್ದಾರೆ. ಹಿಂದಿನ ಚುನಾವಣೆಯಲ್ಲಿ 11ನೇ ವಾರ್ಡಿನಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಜಯಗಳಿಸಿದ್ದ ಅಪ್ರೋಜ್ ಈಗ 8 ನೇ ವಾರ್ಡಿನಲ್ಲಿ ಅಭ್ಯರ್ಥಿಯಾಗಿದ್ದಾರೆ.
8ನೇ ಅವಧಿಗೆ ಸ್ಪರ್ಧೆ: ಪಪಂ ಚುನಾವಣೆಯಲ್ಲಿ ಈ ಹಿಂದೆ 7ನೇ ಬಾರಿ ಚುನಾವಣೆಯಲ್ಲಿ ಸ್ಪರ್ಧೆ ಮಾಡಿ 6 ಬಾರಿ ಗೆದ್ದು 1 ಅವಧಿಗೆ ಅಧ್ಯಕ್ಷರಾಗಿ ಹಾಗೂ 2.50 ಗಳ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದ ಲಕ್ಷ್ಣಣ ಶೆಟ್ಟರು 8ನೇ ಅವಧಿಗೆ 3 ವಾರ್ಡಿನಲ್ಲಿ ಮತ್ತೆ ಚುನಾವಣೆಗೆ ಸ್ಪರ್ಧಿಸಿರುವುದು ಕುತೂಹಲಕ್ಕೆ ಕಾರಣವಾಗಿದೆ. ಕಳೆದ ಬಾರಿ 3 ನೇ ವಾರ್ಡಿನಲ್ಲಿ ಸ್ಪರ್ಧೆ ಮಾಡಿದ್ದ ಲಕ್ಷ್ಮಣಶೆಟ್ಟರು ಕೇವಲ 9 ಮತಗಳ ಅಂತರದಿಂದ ಬಿಜೆಪಿಯ ಆಶೀಶ್ ಕುಮಾರ್ ವಿರುದ್ಧ ಸೋತಿದ್ದರು.
ಅತಿ ಕಿರಿಯ ವಯಸ್ಸಿನ (26) ಆಶೀಶ್ ಕುಮಾರ್ 2.50 ವರ್ಷದ ಅವದಿಗೆ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. 11 ವಾರ್ಡುಗಳ ಪೈಕಿ ಪ್ರತಿಷ್ಠಿತ ಕ್ಷೇತ್ರವಾಗಿ 3 ನೇ ವಾರ್ಡ್ ಸೇರಿಕೊಂಡಿದೆ.
ಈ ಬಾರಿ ಬಿಜೆಪಿಯಿಂದ ಆಶೀಶ್ ಕುಮಾರ್ ಸ್ಪರ್ಧೆ ಮಾಡದೆ ಬಿಜೆಪಿ ಅಭ್ಯರ್ಥಿಯಾಗಿ ಎಸ್.ಎ. ಖಾಸಿಂಖಾನ್‌ರನ್ನು ಕಣಕ್ಕಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement