ಕಾವೇರಿದ ಚುನಾವಣೆ ಪ್ರಚಾರ
ಕ.ಪ್ರ.ವಾರ್ತೆ, ನರಸಿಂಹರಾಜಪುರ, ಮಾ.4
ಪಟ್ಟಣ ಪಂಚಾಯ್ತಿ ಚುನಾವಣೆ ಕಾವು ದಿನೇ ದಿನೇ ಏರುತ್ತಿದ್ದು, ಸೋಮವಾರ ಬೆಳಗ್ಗೆಯಿಂದ ರಾತ್ರಿಯವರೆಗೂ ಎಲ್ಲಾ ಪಕ್ಷದ ಮುಖಂಡರು, ಕಾರ್ಯಕರ್ತರು, ಅಭ್ಯರ್ಥಿಗಳು ಮನೆ, ಮನೆಗೆ ತೆರಳಿ ಮತಯಾಚನೆ ಮಾಡಿದರು.
ಶೃಂಗೇರಿ ಕ್ಷೇತ್ರದ ಅಭಿವೃದ್ಧಿ ಸಂಭ್ರಮ 2008 -2013 ಎಂಬ ಪಟ್ಟಣದ ಸಮಗ್ರ ಅಭಿವೃದ್ಧಿಯ ಮಾಹಿತಿ ನೀಡುವ ಕಿರು ಹೊತ್ತಿಗೆಯನ್ನು ಮತದಾರರರಿಗೆ ನೀಡಿ ಮತಯಾಚನೆ ಮಾಡಿದ ಸಚಿವ ಡಿ.ಎನ್. ಜೀವರಾಜ್ ಹಳೇಪೇಟೆ, ಬೆಟಗೆರೆ,ಅಗ್ರಹಾರ, ಹೊಸಬೀದಿ, ಭವಾನಿ ಶಂಕರ ಬೀದಿ, ಅಂಬೇಡ್ಕರ್ನಗರ, ರಾಜೀವನಗರ, ಬಸ್ತಿಮಠ, ಸಂಕದಕಟ್ಟೆ, ರಾಘವೇಂದ್ರ ನಗರದ ಮನೆ, ಮನೆಗಳಿಗೆ ಬೇಟಿ ನೀಡಿ ಮತಯಾಚನೆ ಮಾಡಿದರು.
ಬಿಜೆಪಿ ಮುಖಂಡರಾದ ಆಶೀಶ್ಕುಮಾರ್, ನೀಲೇಶ್, ಎಚ್.ಎಂ. ಮನು, ಪಿ.ಜೆ. ಆಂಟೋನಿ, ಮಂಜನಾಥ್ ಲಾಡ್, ಅಭ್ಯರ್ಥಿಗಳಾದ ಸತೀಶ್, ಲಿಲ್ಲಿ, ಗೋಪಿ, ರಾಜಶೇಖರ್ ಮುಂತಾದವರಿದ್ದರು.
ಕಾಂಗ್ರೆಸ್ ಮತಯಾಚನೆ: ಕಾಂಗ್ರೆಸ್ ಪಕ್ಷವು ಸೋಮವಾರ ಬೆಳಿಗ್ಗೆ ಬಸ್ತಿಮಠದಿಂದ ಬಸ್ ನಿಲ್ದಾಣವರೆಗೆ ರೋಡ್ ಶೋ ನಡೆಸಿತು. ಮಾಜಿ ಸಚಿವ ಬೇಗಾನೆ ರಾಮಯ್ಯ, ಮಾಜಿ ಕೇಂದ್ರ ಸಚಿವೆ ಡಿ.ಕೆ. ತಾರಾದೇವಿ, ಕಾಂಗ್ರೆಸ್ ಮುಖಂಡರಾದ ಸಚಿನ್ ಮೀಗ, ಎಚ್.ಜಿ. ವೆಂಕಟೇಶ್, ಡಾ.ಕೆ.ಪಿ. ಅಂಶುಮಂತ್, ಆರ್. ಸದಾಶಿವ, ಕೆ.ವಿ. ವಸಂತಕುಮಾರ್, ಕೆ.ಎಂ. ಗಂಗಾಧರ್, ಕೆ.ಎಂ. ಸುಂದರೇಶ್, ಟಿ.ವಿ. ರಾಜು, ಕೆ.ಎ. ಅಬುಬೂಕರ್,ಬಿ.ಎಸ್. ಸುಬ್ರಮಣ್ಯ, ಲೇಖಾ ವಸಂತ್ ಮುಂತಾದವರಿದ್ದರು.
ನಂತರ ಅಂಬೇಡ್ಕರ್ ನಗರ, ವಾಟರ್ ಟ್ಯಾಂಕ್ ವೃತ್ತ, ಟಿ.ಬಿ. ಸರ್ಕಲ್, ಮೇದರ ಬೀದಿ, ಆಸ್ಪತ್ರೆಯ ಹಿಂಭಾಗದ ರಸ್ತೆ ಸೇರಿದಂತೆ ವಿವಿಧ ಕಡೆಗಳಲ್ಲಿ ಬಹಿರಂಗ ಸಭೆ ನಡೆಯಿತು. ಬೇಗಾನೆ ರಾಮಯ್ಯ, ಎಚ್.ಜಿ. ವೆಂಕಟೇಶ್, ಆರ್. ಸದಾಶಿವ,ಬಿ.ಎಸ್. ಸುಬ್ರಮಣ್ಯ ಮುಂತಾದ ಮುಖಂಡರು ಮಾತನಾಡಿ ಮತ ಯಾಚನೆ ಮಾಡಿದರು.
ಜೆಡಿಎಸ್ ಪ್ರಚಾರ: ಜೆಡಿಎಸ್ ಪಕ್ಷದಿಂದ ವಿವಿಧ ವಾರ್ಡುಗಳಲ್ಲಿ ಬಿರುಸಿನ ಪ್ರಚಾರ ನಡೆಯಿತು. ರಾಜ್ಯ ಜೆಡಿಎಸ್ ಉಪಾಧ್ಯಕ್ಷ ಎಚ್.ಟಿ. ರಾಜೇಂದ್ರ, ತಾಪಂ ಸದಸ್ಯ ಎಸ್.ಎಸ್. ಶಾಂತಕುಮಾರ್, ತಾಲೂಕು ಜೆಡಿಎಸ್ ಅಧ್ಯಕ್ಷ ಇ.ಸಿ. ಜೋಯಿ, ಜೆಡಿಎಸ್ ರಾಜ್ಯ ರೈತ ಮೋರ್ಚ ಉಪಾಧ್ಯಕ್ಷ ಕಣುವೆ ವಿನಯ ಮುಖಂಡರಾದ ಬಿ.ಟಿ. ರವಿ ಮುಂತಾದವರು ರಾಜೀವನಗರ, ಸಂಕದಕಟ್ಟೆ, ಅಂಬೇಡ್ಕರ್ನಗರ, ಅಗ್ರಹಾರದಲ್ಲಿ ಮನೆ, ಮನೆಗಳಿಗೆ ತೆರಳಿ ಪ್ರಚಾರ ನಡೆಸಿದರು.
ಮೇದರ ಬೀದಿ, ಪ್ರವಾಸಿ ಮಂದಿರ, ಮಂಡಗದ್ದೆ ಸರ್ಕಲ್ ಮುಂತಾದ ಕಡೆ ಜೆಡಿಎಸ್ ಮುಖಂಡರಾದ ಎಸ್.ಎಸ್. ಸಂತೋಷ್ಕುಮಾರ್, ಶೆಟ್ಟಿಕೊಪ್ಪ ಮಹೇಶ್ ಮುಂತಾದವರು ಆಯಾ ವಾರ್ಡಿನ ಅಭ್ಯರ್ಥಿಗಳು ಕಾರ್ಯಕರ್ತರೊಂದಿಗೆ ಪ್ರಚಾರ ನಡೆಸಿದರು.
ಶೃಂಗೇರಿಯಲ್ಲೂ...
ಕ.ಪ್ರ.ವಾರ್ತೆ, ಶೃಂಗೇರಿ, ಮಾ.4
ಪಟ್ಟಣ ಪಂಚಾಯಿತಿ 11 ವಾರ್ಡ್ಗಳಿಗೆ ಮಾ.7ರಂದು ಚುನಾವಣೆಗೆ ಇನ್ನೆರೆಡು ದಿನಗಳು ಬಾಕಿಯಿದ್ದಂತೆ ಪಟ್ಟಣದಲ್ಲಿ ವಿವಿಧ ಪಕ್ಷಗಳ ಅಭ್ಯರ್ಥಿಗಳ ಚುನಾವಣಾ ಪ್ರಚಾರ ಚುರುಕುಗೊಂಡಿದೆ.
ಮನೆ ಮನೆಗೆ ತೆರಳಿ ಮತದಾರರ ಮನವೊಲಿಸಿ ಮತಯಾಚನೆಯ ಕೆಲಸ ಭರದಿಂದ ಸಾಗಿದೆ. ಪಕ್ಷೇತರರು ಸೇರಿದಂತೆ ಒಟ್ಟು 31 ಅಭ್ಯರ್ಥಿಗಳು ಅಖಾಡದಲ್ಲಿದ್ದು, ಕಾಂಗ್ರೆಸ್, ಬಿಜೆಪಿ ತಲಾ 11 ಅಭ್ಯರ್ಥಿಗಳನ್ನು ಕಣಕ್ಕಿಳಿಸಿ ಪಟ್ಟಣ ಪಂಚಾಯಿತಿ ಅಧಿಕಾರದ ಚುಕ್ಕಾಣಿ ಹಿಡಿಯಲು ಶತಾಯಗತಾಯ ಪ್ರಯತ್ನ ನಡೆಸುತ್ತಿದೆ.
ಜೆಡಿಎಸ್ ಮಾತ್ರ ಕೇವಲ 6 ಮಂದಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿ ಆಡಳಿತದಲ್ಲಿ ಪ್ರಮುಖ ಪಾತ್ರ ವಹಿಸುವ ಪ್ರಯತ್ನದಲ್ಲಿದೆ. ಬಿಎಸ್ಪಿ, ಬಿಎಸ್ಆರ್ ಕಾಂಗ್ರೆಸ್ ಲಾ ಒಬ್ಬೊಬ್ಬರನ್ನು ಕಣಕ್ಕಿಳಿಸಿ ಗೆಲ್ಲುವ ಭರವಸೆಯಲ್ಲಿದೆ. ಬಿಜೆಪಿಯ ರೋಡ್ ಶೋನಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಡಿ.ಎನ್. ಜೀವರಾಜ್ ಪಾಲ್ಗೊಂಡು ಬಿಜೆಪಿ ಅಭ್ಯರ್ಥಿಗಳ ಪರ ಪಟ್ಟಣದಲ್ಲಿ ಮತಯಾಚಿಸಿದರು.