ಖಾಸಗಿ ವಿವಿಗಳಿಗೆ ವಿರೋಧ
ಕಪ್ರ ವಾರ್ತೆ, ಚಿಕ್ಕಮಗಳೂರು, ಮಾ. 4
ಖಾಸಗಿ ವಿವಿಗಳಿಗೆ ಅನುಮತಿ ನೀಡಿರುವುದನ್ನು ವಿರೋಧಿಸಿ ಎಬಿವಿಪಿ ಕಾರ್ಯಕರ್ತರು ಸೋಮವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.
ಇಲ್ಲಿನ ಹಳೇ ತಾಲೂಕು ಕಚೇರಿಯಿಂದ ಮೆರವಣಿಗೆಯಲ್ಲಿ ಹೊರಟ ಕಾರ್ಯಕರ್ತರು ಹನುಮಂತಪ್ಪ ವೃತ್ತದಲ್ಲಿ ಕೆಲ ಕಾಲ ರಸ್ತೆ ತಡೆ ನಡೆಸಿ, ರಾಜ್ಯ ಸರ್ಕಾರದ ಕ್ರಮವನ್ನು ಖಂಡಿಸಿದರು.
ಇತ್ತೀಚೆಗೆ ನಡೆದ ಅಧಿವೇಶನದಲ್ಲಿ ರಾಜ್ಯ ಸರ್ಕಾರ ಖಾಸಗಿ ವಿವಿಗಳ ವಿಧೇಯಕ ಮಂಡಿಸಿ ಅನುಮೋದನೆ ಪಡೆದಿರುವುದು, ರಾಜ್ಯದಲ್ಲಿ ಖಾಸಗಿ ವಿವಿಗಳಿಗೆ ತಮ್ಮ ವ್ಯಾಪಾರ ಕೇಂದ್ರಗಳನ್ನು ತೆರೆಯಲು ಸರ್ಕಾರ ಪೂರ್ಣ ಸಹಕಾರ ಮಾಡಿದಂತಾಗಿದೆ. ಖಾಸಗಿ ವಿವಿಗಳ ಬಗ್ಗೆ ಯಾವುದೇ ಸರಿಯಾದ ಚರ್ಚೆಯನ್ನು ವಿಧಾನಸಭೆ ಮತ್ತು ವಿಧಾನಪರಿಷತ್‌ನಲ್ಲಿ ಮಾಡದೇ ಅನುಮತಿ ನೀಡಿರುವುದು ಸರಿಯಲ್ಲ. ಅನೇಕ ಖಾಸಗಿ ಕಾಲೇಜುಗಳು ಅತ್ಯಂತ ಕಳಪೆಯಾಗಿದ್ದರೂ ಅವುಗಳ ಮಾಹಿತಿಯನ್ನು ಪಡೆಯದೆ ಅವಕಾಶವನ್ನು ಕಲ್ಪಿಸಲಾಗಿದೆ. ಬಹುತೇಕ ಖಾಸಗಿ ವಿವಿಗಳು ಹಣ ಮಾಡುವ ಉದ್ದೇಶದಿಂದ ಮಾತ್ರ ಪ್ರಾರಂಭವಾಗಿವೆ, ಅರ್ಹತೆ ಇಲ್ಲದ ಖಾಸಗಿ ವಿವಿಗಳಿಗೆ ರಾಜ್ಯಪಾಲರು ಅಂತಿಮ ಅಂಕಿತವನ್ನು ಹಾಕಬಾರದು ಎಂದು ಆಗ್ರಹಿಸಿದರು.
ಸಮೀಕ್ಷಾ ವರದಿ ನೀಡಿ: ಅನುಮತಿ ಪಡೆದಿರುವ 22 ವಿವಿಗಳ ಪೈಕಿ 18 ವಿವಿಗಳು ಬೆಂಗಳೂರಿನಲ್ಲಿ ಕಾರ್ಯ ನಿರ್ವಹಿಸಲಿವೆ. ಒಂದು ಪ್ರದೇಶದಲ್ಲಿ ಇಷ್ಟು ಪ್ರಮಾಣದಲ್ಲಿ ವಿವಿಗಳ ಅವಶ್ಯಕತೆ ಇತ್ತೆ. ಯಾವ ಸಮಿಕ್ಷೆಯ ಆಧಾರದ ಮೇಲೆ ಇಷ್ಟೊಂದು ವಿವಿಗಳಿಗೆ ಒಂದೇ ಸ್ಥಳದಲ್ಲಿ ಅವಕಾಶ ನೀಡಲಾಗಿದೆ. ಇದಕ್ಕೆ ಅನುಸರಿಸಿದ ಮಾನದಂಡ ಯಾವುದು, ಈ ಕುರಿತ ಸಮೀಕ್ಷಾ ವರದಿಯನ್ನು ಬಹಿರಂಗಗೊಳಿಸಬೇಕು ಎಂದು ಒತ್ತಾಯಿಸಿದ್ದಾರೆ.
ರಾಜ್ಯದ ವಿಶ್ವವಿದ್ಯಾನಿಲಯಗಳು ಈಗಾಗಲೇ ಭ್ರಷ್ಟಾಚಾರದಿಂದ ಹಾಗೂ ಜಾತಿಯ ಲೆಕ್ಕಾಚಾರ, ಹಣದ ವಹಿವಾಟು, ರಾಜಕೀಯ ಚಟುವಟಿಕೆಗಳ ಕೇಂದ್ರಗಳಾಗಿವೆ. ಇಂತಹ ಸಂದರ್ಭದಲ್ಲಿ ವಿವಿಗಳ ಸಿಂಡಿಕೇಟ್‌ಗೆ ಶಾಸಕರು ಮತ್ತು ವಿಧಾನಪರಿಷತ್ ಸದಸ್ಯರನ್ನು ನೇಮಕ ಮಾಡಲು ವಿವಿ ವಿಧೇಯಕ- 2000ಗೆ ತಿದ್ದುಪಡಿ ಮಾಡಲಾಗಿದೆ. ಶಿಕ್ಷಣ ತಜ್ಞರು, ವಿದ್ಯಾರ್ಥಿ ಸಂಘಟನೆಗಳ ಅಭಿಪ್ರಾಯ ಕೇಳದೇ ದಿಢೀರನೇ ಈ ನಿರ್ಧಾರವನ್ನು ತೆಗೆದುಕೊಂಡಿರುವುದು ಸರಿಯಲ್ಲ. ಈ ನಿರ್ಧಾರವನ್ನು ಕೈಬಿಡಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಎಬಿವಿಪಿ ಮುಖಂಡರಾದ ದರ್ಶನ್ ಹಿರೇಮಠ್, ದಯಾನಂದ್ ತಿರುಗುಣ, ಸಂತೋಷ್ ಕೋಟ್ಯಾನ್, ನವೀನ್ ಪೂಜಾರಿ, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.