ಗ್ರಾಮೀಣ ಸೊಗಡು ಉಳಿಸಿ: ಸಿ.ಟಿ. ರವಿ
ಕಪ್ರ ವಾರ್ತೆ, ಚಿಕ್ಕಮಗಳೂರು, ಮಾ. 4
ಹಳ್ಳಿ ನಾಟಕಗಳನ್ನು ಗ್ರಾಮೀಣ ಜನ ಪ್ರೋತ್ಸಾಹಿಸುವ ಮೂಲಕ ಗ್ರಾಮೀಣ ಸೊಗಡನ್ನು ಮುಂದಿನ ಪೀಳಿಗೆಗೆ ಉಳಿಸಿ ಬೆಳೆಸುವ ಕೆಲಸ ಮಾಡಬೇಕು ಎಂದು ಉನ್ನತ ಶಿಕ್ಷಣ ಸಚಿವ ಸಿ.ಟಿ. ರವಿ ಹೇಳಿದ್ದಾರೆ.
ನಗರ ಹೊರ ವಲಯದ ತೇಗೂರಿನಲ್ಲಿ ಗ್ರಾಮದ ಇತಿಹಾಸ ಪ್ರಸಿದ್ಧ ಶ್ರೀ ರಾಮಾಂಜನೇಯ ಸ್ವಾಮಿ ದೇವಾಲಯದ ಬೆಳ್ಳಿ ಹಬ್ಬದ ಪ್ರಯುಕ್ತ ಭಾನುವಾರ ಸಂಜೆ ಏರ್ಪಡಿಸಿದ್ದ ಕುರುಕ್ಷೇತ್ರ ನಾಟಕ ಪ್ರದರ್ಶನವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಚಲನಚಿತ್ರ ಮತ್ತು ವೃತ್ತಿ ರಂಗಭೂಮಿಯಲ್ಲಿ ಹೊಸ ಪ್ರಯೋಗಗಳು ನಡೆಯಲಾರಂಭಿಸಿದ ನಂತರ ಅವುಗಳು ಆಧುನಿಕತೆಯ ಸ್ಪರ್ಷವನ್ನು ಪಡೆದುಕೊಳ್ಳತೊಡಗಿವೆ. ಇದರಿಂದಾಗಿ ನಮ್ಮ ಸಂಸ್ಕೃತಿ, ಸಂಸ್ಕಾರ ಅವುಗಳಲ್ಲಿ ಮರೆಯಾಗತೊಡಗಿವೆ ಎಂದು ವಿಷಾಧ ವ್ಯಕ್ತಪಡಿಸಿದರು.
ಬದುಕಿನ ಸಂದೇಶವಿದೆ: ಆದರೆ, ಹಳ್ಳಿಗಳಲ್ಲಿ ನಡೆಯುವ ನಾಟಕಗಳಲ್ಲಿ ಗ್ರಾಮೀಣ ಸೊಗಡು, ನಮ್ಮ ಸಂಸ್ಕೃತಿ, ಸಂಸ್ಕಾರ ಇನ್ನೂ ಜೀವಂತವಾಗಿವೆ ಎಂದ ಅವರು, ಉದಾಹರಣೆಗೆ ರಾಮಾಯಣ ಮತ್ತು ಮಹಾಭಾರತ ನಾಟಕಗಳಲ್ಲಿ ಬದುಕಿನ ಸಂದೇಶವಿದೆ. ಮನುಷ್ಯ ಯಾವ ರೀತಿ ಬದುಕಿದರೆ ಆತನು ಏನಾಗುತ್ತಾನೆ ಎಂಬ ನೀತಿಯಿದೆ ಎಂದು ತಿಳಿಸಿದರು.
ಸಮಾರಂಭದ ನಂತರ ಗ್ರಾಮದ ಶ್ರೀ ರಾಮಾಂಜನೇಯ ಕೃಪಾ ಪೋಷಿತ ನಾಟಕ ಮಂಡಳಿ ವತಿಯಿಂದ ಕುರುಕ್ಷೇತ್ರ ನಾಟಕ ಪ್ರದರ್ಶಿಸಲಾಯಿತು. ಗ್ರಾಮದ ಯುವಕರು ತಮ್ಮ ಅದ್ಭುತ ನಟನೆಯ ಮೂಲಕ ಸಾರ್ವಜನಿಕರ ಗಮನ ಸೆಳೆದರು.
ತಾ.ಪಂ. ಮಾಜಿ ಅಧ್ಯಕ್ಷ ಕನಕರಾಜ್ ಅರಸ್, ನಿವೃತ್ತ ಪಶು ಪರೀಕ್ಷಕ ಲಕ್ಷ್ಮಣರಾಜು, ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷ ತೇಗೂರು ಜಗದೀಶ್, ಗ್ರಾ.ಪಂ. ಅಧ್ಯಕ್ಷ ದಿನೇಶ್ ರಾಜ್ ಅರಸ್, ಸದಸ್ಯರುಗಳಾದ ಮೀನಾಕ್ಷಿ ಕಾಂತರಾಜ್ ರಮೇಶ್ ರಾಜ್, ಶ್ರೀನಿವಾಸ್ ರಾಜ್, ಪುಷ್ಪ ಮಂಜುನಾಥ್ ಗ್ರಾಮದ ಮುಖಂಡರಾದ ಜನಕರಾಜ್ ಅರಸ್, ಚಂದ್ರಾರಾಜ ಅರಸ್, ಜನಾರ್ಧನ ರಾಜ ಅರಸ್ ಉಪಸ್ಥಿತರಿದ್ದರು.