ನರೇಂದ್ರ ಮೋದಿ ಸರ್ವಾಧಿಕಾರಿ: ಶಂಕರ್
ಕಪ್ರ ವಾರ್ತೆ, ಚಿಕ್ಕಮಗಳೂರು, ಮಾ. 4
ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಸರ್ವಾಧಿಕಾರಿ, ವಿಭಜಕ ಮನಸ್ಥಿತಿವುಳ್ಳವರು ಎಂದು ಕೆಪಿಸಿಸಿ ವಕ್ತಾರ ಬಿ.ಎಲ್. ಶಂಕರ್ ಗಂಭೀರವಾಗಿ ಆರೋಪಿಸಿದ್ದಾರೆ.
ಇನ್ನೊಬ್ಬರನ್ನು ಸಹಿಸುವ ಗುಣವಿಲ್ಲದ ಮೋದಿ ಅವರು ಪ್ರಧಾನಿ ಸ್ಥಾನಕ್ಕೆ ಅಗೌರವ ಸೂಚಿಸಿದ್ದಾರೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಟೀಕಿಸಿದರು.
ಪ್ರಧಾನಿ ಮನಮೋಹನ್ ಸಿಂಗ್ ಅವರನ್ನು ಆರ್ಥಿಕ ತಜ್ಞರು ಎಂದು ಅಮೆರಿಕದ ಅಧ್ಯಕ್ಷ ಒಬಾಮಾ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಂತಹ ಪ್ರಧಾನಿಯವರನ್ನು ಮೋದಿ ರಾತ್ರಿ ಕವಾಲುಗಾರರೆಂದು ಟೀಕಿಸಿದ್ದಾರೆ. ಪ್ರಧಾನಿ ಬಗ್ಗೆ ಅವರ ಪಾರದರ್ಶಕತೆಯ ಬಗ್ಗೆ ಈವರೆಗೆ ಅಟಲ್ ಜೀ, ಆಡ್ವಾಣಿ ಸೇರಿದಂತೆ ಯಾರೂ ಕೂಡ ವ್ಯಕ್ತಿಗತವಾಗಿ ಟೀಕೆ ಮಾಡಿರಲಿಲ್ಲ. ಆದರೆ, ಮೋದಿ ಅವರು ಟೀಕಿಸುವ ಮೂಲಕ ಈ ದೇಶದ ಅತ್ಯುನ್ನತ ಹುದ್ದೆಗೆ ಅಗೌರವ ತೋರಿದ್ದಾರೆ ಎಂದು ಆರೋಪಿಸಿದರು.
ವ್ಯಕ್ತಿಗತ ಟೀಕೆ ಸರಿಯಲ್ಲ: ಅತ್ಯುತ್ತಮ ವಾಗ್ಮಿ ಅಟಲ್ ಜೀ ಅವರು ಈ ದೇಶದ ಪ್ರಧಾನ ಮಂತ್ರಿಯಾಗಿದ್ದಾಗ ಗುಜರಾತ್‌ನಲ್ಲಿ ನರಮೇಧ ಘಟನೆ ನಡೆಸಿತ್ತು. ಆ ಸಂದರ್ಭದಲ್ಲಿ ಅವರು ಗುಜರಾತ್‌ಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ನರೇಂದ್ರ ಮೋದಿ ಅವರಿಗೆ ರಾಜಧರ್ಮ ಕಾಪಾಡಬೇಕೆಂದು ಕಿವಿ ಮಾತು ಹೇಳಿದ್ದರು ಎಂದ ಶಂಕರ್, ವ್ಯಕ್ತಿಗತ ಟೀಕೆ ಮಾಡುವುದರಿಂದ ನಾಯಕರಾಗಬಹುದೆಂದು ಅಂದುಕೊಂಡಿದ್ದರೆ, ಅವರಿಗೆ ನಿರಾಶೆ ಕಾದಿದೆ ಎಂದು ಹೇಳಿದರು.
ಸ್ಪೀಕರ್ ಸ್ಥಾನಕ್ಕೆ ಅಗೌರವ: ವಿಧಾನಸಭೆಯ ಸಭಾಧ್ಯಕ್ಷ ಸ್ಥಾನಕ್ಕೆ ವಿಶೇಷವಾದ ಸ್ಥಾನಮಾನವಿದೆ. ಇಲ್ಲಿನ ತೀರ್ಮಾನಗಳು ಮಾದರಿಯಾಗಬೇಕು. ಆದರೆ, ಸ್ಪೀಕರ್ ಅವರು ಆ ಸ್ಥಾನವನ್ನು ಮರೆತು ಬಿಜೆಪಿಯ ಮುಖಂಡರಂತೆ ವರ್ತಿಸುತ್ತಿದ್ದಾರೆ. ಪಕ್ಷೇತರ ಶಾಸಕರ ರಾಜಿನಾಮೆ, ಶಾಸಕರನ್ನು ಸದನದಿಂದ ಹೊರಗೆ ಹಾಕಿರುವುದು, ಇತ್ತೀಚೆಗೆ ಕೆಲವು ಶಾಸಕರು ರಾಜಿನಾಮೆ ಕೊಟ್ಟರೂ ಅದನ್ನು ಸ್ವೀಕರಿಸುವ ಅಥವಾ ತಿರಸ್ಕರಿಸುವ ಯಾವುದೇ ತೀರ್ಮಾನವನ್ನು ಈವರೆಗೆ ತೆಗೆದುಕೊಂಡಿಲ್ಲ. ಸರ್ಕಾರದ ಒತ್ತಡಕ್ಕೆ ಮಣಿಯುವುದಾದರೆ ಆ ಸ್ಥಾನಕ್ಕೆ ಸ್ಪೀಕರ್ ಅವರು ರಾಜಿನಾಮೆ ನೀಡಬೇಕು ಎಂದು ಆಗ್ರಹಿಸಿದರು.
ಸ್ವಜನಪಕ್ಷಪಾತ: ಕೆಲವು ವಿವಿಗಳಲ್ಲಿ ಇರುವ ಸಂಘಪರಿವಾರದ ಕುಲಪತಿಗಳನ್ನು ಮುಂದುವರಿಸುವ ಉದ್ದೇಶದಿಂದ ನಿವೃತ್ತಿಯ ವಯಸ್ಸು ಹೆಚ್ಚಳ ಮಾಡುವ ಕೆಲಸಕ್ಕೆ ರಾಜ್ಯ ಸರ್ಕಾರ ಕೈ ಹಾಕಿತ್ತು. ಆದರೆ, ಆ ಪ್ರಯತ್ನ ಯಶಸ್ವಿಯಾಗಲಿಲ್ಲ. ಖಾಸಗಿ ವಿವಿಗಳಿಗೆ ಅನುಮತಿ ನೀಡುವ ಮೂಲಕ ಅಧಿಕಾರ ದುರುಪಯೋಗ ಹಾಗೂ ಸ್ವಜನಪಕ್ಷಪಾತ ನಡೆದಿದೆ. ಕೆಲವು ಕಡೆಗಳಲ್ಲಿ ತಮ್ಮ ತಾಳಕ್ಕೆ ಕುಣಿಯುವ ಕುಲಪತಿಗಳನ್ನು ನೇಮಕ ಮಾಡಲಾಗುತ್ತಿದೆ. ಕಾನೂನು ಬದ್ಧವಾದ ಸಂಸ್ಥೆಗಳಿಗೆ ರಾಜ್ಯ ಸರ್ಕಾರ ದೊಡ್ಡ ಪೆಟ್ಟು ನೀಡಿದೆ. ಅವುಗಳನ್ನು ನಾಶಪಡಿಸುವ ಕೆಲಸ ಮಾಡುತ್ತಿದೆ ಎಂದು ಆರೋಪಿಸಿದರು.