ಬಿಜೆಪಿ ಪಕ್ಷದ ಉಳಿವಿಗಾಗಿ ಈ ಬಾರಿ ಬಿಜೆಪಿ ಸೋಲಲಿ
ಕ.ಪ್ರ ವಾರ್ತೆ, ನರಸಿಂಹರಾಜಪುರ, ಮಾ.4
ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಸೋಲಿಸಿ, ಬಿಜೆಪಿ ಪಕ್ಷ ಉಳಿಸಿ ಎಂಬ ಘೋಷಣೆಯೊಂದಿಗೆ ಪಟ್ಟಣ ಪಂಚಾಯ್ತಿ ಚುನಾವಣೆಯಲ್ಲಿ ಮನೆ, ಮನೆಗೆ ಹೋಗಿ ಪ್ರಚಾರ ಮಾಡುತ್ತಿದ್ದೇವೆ ಎಂದು ಬಿಜೆಪಿ ಮೂಲ ಕಾರ್ಯಕರ್ತರ ಗುಂಪಿನ ವಕ್ತಾರ ನಾಗರಾಜ್ ಪುರಾಣಿಕ್ ತಿಳಿಸಿದ್ದಾರೆ.
ಅವರು ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ, ಬಿಜೆಪಿ ಮೂಲ ಕಾರ್ಯಕರ್ತರ ಗುಂಪಿನಲ್ಲಿ 30 ಜನ ಮುಖಂಡರಿದ್ದು ನೂರಾರು ಕಾರ್ಯಕರ್ತರು ನಮ್ಮ ಜೊತೆಯಲ್ಲಿದ್ದಾರೆ. ಬಿಜೆಪಿ ಪಕ್ಷದಲ್ಲಿ ಕಲುಷಿತ ವಾತಾವರಣ ಇದ್ದು ಬಿಜೆಪಿ ಪಕ್ಷವನ್ನು ಶುದ್ಧಗೊಳಿಸಬೇಕಾಗಿದೆ. ಈಗಾಗಾಲೇ ಮೂಲ ಬಿಜೆಪಿ ಗುಂಪಿನ ಮುಖಂಡರು ಸಭೆ ನಡೆಸಿ ಚರ್ಚೆ ನಡೆಸಿದ್ದಾರೆ. ಪಟ್ಟಣ ಪಂಚಾಯ್ತಿ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳನ್ನು ಸೋಲಿಸಿ ಎಂದು ಪ್ರಚಾರ ಮಾಡುತ್ತಿದ್ದೇವೆ. ನಾವು ಬಿಜೆಪಿ ಪಕ್ಷದ ವಿರುದ್ಧ ಅಲ್ಲ. ಬಿಜೆಪಿ ಪಕ್ಷದ ಉಳಿವಿಗಾಗಿ ಈ ಬಾರಿ ಬಿಜೆಪಿ ಸೋಲಬೇಕಾಗಿದೆ. ಈ ಹಿಂದೆ ನಮ್ಮ ಜೊತೆ ಗುರುತಿಸಿಕೊಂಡ ಕೆಲವು ಬಿಜೆಪಿ ಮೂಲ ಕಾರ್ಯಕರ್ತರು ಅನಿವಾರ್ಯವಾಗಿ ಬೇರೆ ಪಕ್ಷಕ್ಕೆ ಹೋಗಿದ್ದಾರೆ. ಆದರೆ, ಅವರು ಮಾನಸಿಕವಾಗಿ ನಮ್ಮ ಜೊತೆಯಲ್ಲೇ ಇದ್ದು ಮರಳಿ ಬಿಜೆಪಿ ಮೂಲ ಕಾರ್ಯಕರ್ತರ ಗುಂಪಿಗೆ ಮರಳಲಿದ್ದಾರೆ ಎಂದರು.
ನಾವು ಬಿಜೆಪಿ ಬಿಟ್ಟಿಲ್ಲ: ನಮ್ಮ ಗುಂಪಿನ ಸದಸ್ಯರು ಬಿಜೆಪಿ ಪಕ್ಷ ಬಿಟ್ಟಿಲ್ಲ. ಶಾಸಕರು ಹಾಗೂ ಬಿಜೆಪಿ ಮುಖಂಡರು ತಮ್ಮ ವರ್ತನೆ ತಿದ್ದಿಕೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಕ್ಷೇತ್ರ ಮಟ್ಟದಲ್ಲಿ ನಮ್ಮ ಹೋರಾಟ ಮುಂದುವರಿಸುತ್ತೇವೆ. ನಾವು ಈಗಲೂ ಬಿಜೆಪಿಯ ನಿಷ್ಟಾವಂತ ಕಾರ್ಯಕರ್ತರೇ ಆಗಿದ್ದೇವೆ. ಬಿಜೆಪಿ ಪಕ್ಷವನ್ನು ಸ್ವಚ್ಛಗೊಳಿಸುವುದೇ ನಮ್ಮ ಉದ್ದೇಶ ಎಂದರು.
ಬಿಜೆಪಿ ಮೂಲ ಕಾರ್ಯಕರ್ತರ ಗುಂಪಿನಲ್ಲಿ ಕೆ.ಪಿ. ಸುರೇಶ್ಕುಮಾರ್, ಬಿ.ಎಚ್. ಕೈಮರ, ಡಿ. ರಮೇಶ್, ಎಂ.ಆರ್. ರವಿಶಂಕರ್, ಕೋಳಿ ಜಯರಾಂ, ಪ್ರಸನ್ನ ಮುಂತಾದವರಿದ್ದಾರೆ ಎಂದು ನಾಗರಾಜ್ ಪುರಾಣಿಕ್ ತಿಳಿಸಿದರು.