ಅಗ್ನಿ ಆಕಸ್ಮಿಕ: ತೋಟ, ಚಪ್ಪಲಿ ಅಂಗಡಿ ಭಸ್ಮ
ಸಾಗರ: ತಾಲ್ಲೂಕಿನ ಆನಂದಪುರಂ ಸಮೀಪದ ಯಡೇಹಳ್ಳಿಯ ಸರ್ವೆ ನಂ. 39ರಲ್ಲಿರುವ ಎಂ.ಎಸ್.ಭದ್ರಪ್ಪ ಗೌಡ ಎಂಬುವವರ ತೋಟಕ್ಕೆ ಸೋಮವಾರ ಆಕಸ್ಮಿಕ ಬೆಂಕಿ ತಗುಲಿ ಲಕ್ಷಾಂತರ ರುಪಾಯಿ ನಷ್ಟ ಸಂಭವಿಸಿದೆ.
ಅಗ್ನಿ ಅನಾಹುತದಿಂದ ಒಂದು ಎಕರೆ ಕಬ್ಬು, ಒಂದು ಎಕರೆ ಬಾಳೆ, ಸಾಗುವಾನಿ ಗಿಡ ಹಾಗೂ ಸಸಿ, ಕೃಷಿಗೆ ಅಳವಡಿಸಿದ್ದ 200ಕ್ಕೂ ಹೆಚ್ಚು ಪೈಪುಗಳು ನಾಶಗೊಂಡಿದೆ. ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳ ಹೆಚ್ಚಿನ ನಷ್ಟವಾಗುವುದನ್ನು ತಪ್ಪಿಸಿದೆ.
ಚಪ್ಪಲಿ ಅಂಗಡಿಗೆ ಬೆಂಕಿ: ಆನಂದಪುರಂ ಪ್ರಾಥಮಿಕ ಆರೋಗ್ಯ ಕೇಂದ್ರ ಎದುರಿನ ಎರಡು ಚಪ್ಪಲಿ ಅಂಗಡಿಗೆ ಸೋಮವಾರ ರಾತ್ರಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದಾಗಿ ಬೆಂಕಿ ತಗಲಿ ಅಂಗಡಿ ಪೂರ್ಣ ಭಸ್ಮವಾಗಿದೆ.
ಮಹಾಬಲ ಎಂಬುವವರಿಗೆ ಸೇರಿದ ಅರುಣ್ ಫೂಟ್‌ವೇರ್ ಮತ್ತು ದೇವಪ್ಪ ಅವರ ರಾಘವೇಂದ್ರ ಫೂಟ್‌ವೇರ್ ಅಂಗಡಿಗೆ ಬೆಂಕಿ ತಗುಲಿದ್ದು, ಅಂಗಡಿಯೊಳಗಿದ್ದ ಎಲ್ಲ ವಸ್ತುಗಳು ಬೆಂಕಿಗೆ ಆಹುತಿಯಾಗಿದೆ. ಪಕ್ಕದಲ್ಲಿದ್ದ ಜ್ಯುವೆಲರಿ ಅಂಗಡಿಗೂ ಅಲ್ಪಸ್ವಲ್ಪ ಹಾನಿಯಾಗಿದ್ದು, ಯಾವುದೆ ವಸ್ತುಗಳು ನಾಶವಾಗಿಲ್ಲ.
ಈ ಸಂಬಂಧ ಆನಂದಪುರಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.