ಇಟ್ಟಿಗೆ ಸೀಗೋಡು ಕಾಲೋನಿಯಲ್ಲಿ ನೀರು ಸಮಸ್ಯೆ
ಕ.ಪ್ರವಾರ್ತೆ, ನರಸಿಂಹರಾಜಪುರ, ಮಾ.5
ತಾಲೂಕಿನ ಬಾಳೆಹೊನ್ನೂರು ಸಮೀಪದ ಜಯಪುರ ರಸ್ತೆಯಲ್ಲಿರುವ ಇಟ್ಟಿಗೆ ಸೀಗೋಡು ಕಾಲೋನಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೋರಿದೆ ಎಂದು ಸ್ಥಳೀಯರು ದೂರಿದ್ದಾರೆ.
ಈ ಕಾಲೋನಿಯಲ್ಲಿ ಅಂದಾಜು 100 ಮನೆಗಳಿವೆ. ಇಲ್ಲಿನ ಮನೆಗಳಿಗೆ ಸಂಜೆಯ ಸಮಯ ಮಾತ್ರ ಕೇವಲ ಅರ್ಧ ಗಂಟೆ ನೀರು ಬಿಡಲಾಗುತ್ತದೆ. ಇಲ್ಲಿ ತೆರೆದ ಬಾವಿ ಇದ್ದು ಬಾವಿಯಿಂದ ನೀರನ್ನು ಟ್ಯಾಂಕಿಗೆ ಮೇಲೆತ್ತಿ ಮನೆಗಳಿಗೆ ನೀರನ್ನು ಕೊಡುವ ವ್ಯವಸ್ಥೆ ಇದೆ. ಬೇಸಿಗೆ ಬಂದಿರುವುದರಿಂದ ಬಾವಿಯ ನೀರು ಕಡಿಮೆಯಾಗಿದೆ. ದಿನಕ್ಕೆ ಅರ್ದ ಗಂಟೆ ನೀರು ಕೊಡಲು ಸಹ ಸಾಧ್ಯವಾಗುತ್ತಿಲ್ಲ. ಬಾವಿ ತೆಗೆದ ನಂತರ ಹೂಳು ತೆಗೆದಿಲ್ಲ. ಇದರಿಂದ ಬಾವಿಯ ಜಲ ಬತ್ತಲು ಕಾರಣವಿರಬಹುದು ಎನ್ನುತ್ತಾರೆ ಸ್ಥಳೀಯರು.
ಇಟ್ಟಿಗೆ ಸೀಗೋಡು ಗ್ರಾಮ ಪಂಚಾಯ್ತಿಯು ಬಿ. ಕಣಬೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಗೆ ಸೇರುತ್ತಿದ್ದು ತಕ್ಷಣ ಗ್ರಾಮ ಪಂಚಾಯ್ತಿ ಕುಡಿಯುವ ನೀರಿಗೆ ಬೇರೆ ವ್ಯವಸ್ಥೆ ರೂಪಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.