ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಚುನಾವಣೆಗೆ ಜಿಲ್ಲಾಡಳಿತ ಸಿದ್ಧತೆ

Lingaraj Badiger
Updated On : 6 Mar 2013, 10:59 am

ಕ.ಪ್ರ.ವಾರ್ತೆ, ಚಿಕ್ಕಮಗಳೂರು, ಮಾ. 5
ಜಿಲ್ಲೆಯ 8 ನಗರ ಸ್ಥಳೀಯ ಸಂಸ್ಥೆಗಳಿಗೆ ಮಾ. 7 ರಂದು ಚುನಾವಣೆ ನಡೆಯಲಿದ್ದು, ಇದಕ್ಕಾಗಿ ಜಿಲ್ಲಾಡಳಿತ ಸಕಲ ಸಿದ್ಧತೆಯನ್ನು ಮಾಡಿಕೊಂಡಿದೆ.
ಇಲ್ಲಿನ 148 ವಾರ್ಡ್‌ಗಳಲ್ಲಿ 231 ಮತಗಟ್ಟೆಗಳಿದ್ದು, ಇವುಗಳಲ್ಲಿ 80 ಅತೀ ಸೂಕ್ಷ್ಮ, 116 ಸೂಕ್ಷ್ಮ ಹಾಗೂ 34 ಸಾಮಾನ್ಯ ಮತಗಟ್ಟೆಗಳು. ಜಿಲ್ಲೆಯಲ್ಲಿ ಚುನಾವಣಾ ಕರ್ತವ್ಯಕ್ಕಾಗಿ 2 ಸಾವಿರ ಪೊಲೀಸ್ ಸಿಬ್ಬಂದಿಗಳನ್ನು ನಿಯೋಜನೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ವಿ. ಯಶವಂತ್ ಹಾಗೂ ಜಿಲ್ಲಾ ರಕ್ಷಣಾಧಿಕಾರಿ ಎನ್. ಶಶಿಕುಮಾರ್ ಜಂಟಿ ಸುದ್ದಿಗೋಷ್ಠಿಯಲ್ಲಿ ಮಂಗಳವಾರ ಮಾಹಿತಿ ನೀಡಿದರು.
ಜಿಲ್ಲೆಯ ಸ್ಥಳೀಯ ಸಂಸ್ಥೆಗಳಲ್ಲಿ 75,036 ಪುರುಷರು ಹಾಗೂ 74,430 ಮಹಿಳಾ ಮತದಾರರು ಇದ್ದಾರೆ. ಚುನಾವಣಾ ಕರ್ತವ್ಯಕ್ಕೆ 22 ಬಸ್‌ಗಳು, 65 ಜೀಪ್ ಸೇರಿದಂತೆ ಒಟ್ಟು 411 ವಾಹನಗಳನ್ನು ಬಳಸಿಕೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿಗಳು ಹೇಳಿದರು.
ರಾಜ್ಯ ಚುನಾವಣಾ ಆಯೋಗದಿಂದ ನೇಮಕವಾಗಿರುವ ಚುನಾವಣಾ ವೀಕ್ಷಕರು ಚುನಾವಣಾ ನೀತಿ ಸಂಹಿತೆ ವಿಚಾರವಾಗಿ ಅನಿರೀಕ್ಷಿತವಾಗಿ, ಹಗಲು ರಾತ್ರಿ ಪ್ರವಾಸ ಮಾಡುವುದರಲ್ಲದೆ ದೂರವಾಣಿ ಮೂಲಕ ಸಹ ಸಂಪರ್ಕಿಸುವ ಸಾಧ್ಯತೆ ಇರುವುದರಿಂದ ಈ ವಿಚಾರದಲ್ಲಿ ಎಲ್ಲಾ ಅಧಿಕಾರಿಗಳು ಜವಬ್ದಾರಿಯುತವಾಗಿ ಕಾರ್ಯ ನಿರ್ವಹಿಸಬೇಕು ಎಂದು ಸೂಚನೆ ನೀಡಲಾಗಿದೆ ಎಂದರು.
ಮದ್ಯ ಮಾರಾಟ ನಿಷೇಧ: ಮಾರ್ಚ್ 7 ರಂದು ಮತದಾನ ಹಾಗೂ 11 ರಂದು ಮತ ಎಣಿಕೆ ನಡೆಯಲಿದ್ದು, ಈ ಸಂದರ್ಭದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಮದ್ಯ ಮಾರಾಟವನ್ನು ನಿಷೇಧ ಮಾಡಲಾಗಿದೆ ಎಂದು ಹೇಳಿದರು.
ಚಿಕ್ಕಮಗಳೂರು ನಗರದ ಉಡೇದಾಸರಹಳ್ಳಿ ಹಾಗೂ ಉಪ್ಪಳ್ಳಿ ಬಡಾವಣೆಯಲ್ಲಿ ಕೆಲವು ಮತದಾರರ ಹೆಸರು ಕೈಬಿಟ್ಟು ಹೋಗಿವೆ ಎಂಬ ದೂರುಗಳು ಬಂದಿವೆ. ಆದರೆ, ಮತದಾರರ ಪಟ್ಟಿ ಅಂತಿಮಗೊಳಿಸಿದ್ದರಿಂದ ಇದೀಗ ಯಾವುದೇ ಬದಲಾವಣೆ ಮಾಡಲು ಸಾಧ್ಯವಿಲ್ಲ. ಮತದಾರರ ಪಟ್ಟಿಯಲ್ಲಿ ಹೆಸರಿದ್ದವರಿಗೆ ಮತದಾನಕ್ಕೆ ಅವಕಾಶ ನೀಡಲಾಗುವುದು ಎಂದರು.
75 ಮೊಬೈಲ್ ಸ್ಕ್ವಾಡ್: ಜಿಲ್ಲೆಯಲ್ಲಿ ಬಂದೋಬಸ್ತ್‌ಗೆ ಸುಮಾರು 2 ಸಾವಿರ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ ಎಂದು ಜಿಲ್ಲಾ ರಕ್ಷಣಾಧಿಕಾರಿ ಎನ್. ಶಶಿಕುಮಾರ್ ಹೇಳಿದರು.
ಎಸ್ಪಿ, ಎಎಸ್ಪಿ, 3 ಮಂದಿ ಡಿವೈಎಸ್ಪಿ, 15 ಮಂದಿ ಸಿಪಿಐ, 40 ಎಸ್ಸೈ, 50 ಮಂದಿ ಎಎಸ್‌ಐ, 600 ಮಂದಿ ಮುಖ್ಯಪೇದೆ ಮತ್ತು ಪೇದೆ, 400 ಗೃಹರಕ್ಷಕದಳ ಸಿಬ್ಬಂದಿ, 4 ಕೆಎಸ್‌ಆರ್‌ಪಿ, 12 ಜಿಲ್ಲಾ ಸಶಸ್ತ್ರ ಮೀಸಲು ತುಕಡಿ ನಿಯೋಜನೆ ಮಾಡಲಾಗಿದೆ. ಜಿಲ್ಲೆಯಲ್ಲಿ 18 ಚೆಕ್ ಪೋಸ್ಟ್‌ಗಳು ಹಾಗೂ 75 ಮೊಬೈಲ್ ಸ್ಕ್ವಾಡ್ ಕರ್ತವ್ಯ ನಿರ್ವಹಿಸಲಿವೆ ಎಂದು ತಿಳಿಸಿದರು.
ಅತಿ ಸೂಕ್ಷ್ಮ ಮತಗಟ್ಟೆಗೆ ಓರ್ವ ಮುಖ್ಯಪೇದೆ, ಓರ್ವ ಪೇದೆ ಹಾಗೂ ಓರ್ವ ಗೃಹ ರಕ್ಷಕ ದಳ ಸಿಬ್ಬಂದಿ ನಿಯೋಜಿಸಲಾಗುವುದು. ಸೂಕ್ಷ್ಮ ಮತಗಟ್ಟೆಗೆ ಓರ್ವ ಪೇದೆ, ಓರ್ವ ಗೃಹ ರಕ್ಷಕದಳ ಸಿಬ್ಬಂದಿ ನೇಮಕ ಮಾಡಲಾಗುವುದು. ಸಾಮಾನ್ಯ ಮತಗಟ್ಟೆಗೆ ಓರ್ವ ಪೇದೆಯನ್ನು ನಿಯೋಜಿಸಲಾಗುವುದು ಎಂದು ಹೇಳಿದ ಅವರು, ಜಿಲ್ಲೆಯಲ್ಲಿ ಈವರೆಗೆ ನೀತಿ ಸಂಹಿತೆಯ ಯಾವುದೇ ಪ್ರಕರಣ ದಾಖಲಾಗಿಲ್ಲ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪಿ. ಶಿವಶಂಕರ್, ಅಪರ ಜಿಲ್ಲಾಧಿಕಾರಿ ಕೆ.ಪಿ. ಹೊನಕೇರಿ ಉಪಸ್ಥಿತರಿದ್ದರು.
7 ರಂದು ಸಾರ್ವತ್ರಿಕ ರಜೆ: ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ ಹಿನ್ನೆಲೆಯಲ್ಲಿ ಮತದಾರರು ಮತಚಲಾಯಿಸಲು ಅನುಕೂಲವಾಗುವಂತೆ ಚುನಾವಣೆ ನಡೆಯುವ ಕ್ಷೇತ್ರಗಳ ವ್ಯಾಪ್ತಿಯಲ್ಲಿರುವ ಎಲ್ಲಾ ಕೇಂದ್ರ ಹಾಗೂ ರಾಜ್ಯ ಸರ್ಕಾರಿ ಕಚೇರಿಗಳಿಗೆ, ಶಾಲಾ ಕಾಲೇಜುಗಳಿಗೆ ಮಾ. 7 ರಂದು ಸಾರ್ವತ್ರಿಕ ರಜೆಯನ್ನು ಸರ್ಕಾರವು ಘೋಷಿಸಿದೆ.
ಚುನಾವಣಾ ಕ್ಷೇತ್ರ ವ್ಯಾಪ್ತಿ ಬರುವ ಬ್ಯಾಂಕ್‌ಗಳು, ಜೀವ ವಿಮಾ ನಿಗಮ ಮುಂತಾದ ಕಚೇರಿಗಳಿಗೆ ನಗೋಷಿಯೇಬಲ್ ಇನ್‌ಸ್ಟ್ರೂಮೆಂಟ್ ಕಾಯ್ದೆ ಅನ್ವಯ  ಸರ್ಕಾರವು ರಜೆಯನ್ನು ಘೋಷಿಸಿದೆ.
ಯಾವುದೇ ವ್ಯವಹಾರ ಕೈಗಾರಿಕೆ ಅಥವಾ ಇನ್ನಿತರ ಸ್ಥಾಪನೆಗಳಲ್ಲಿ ಮತ್ತು ದಿನಗೂಲಿ ಮೇಲೆ ಕಾರ್ಯ ನಿರ್ವಹಿಸುತ್ತಿರುವ ನೌಕರರು ಮತದಾನ ದಿನಾಂಕದಂದು ವೇತನ ಸಹಿತ ರಜೆಗೆ ಅರ್ಹರಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement