ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಜೆಡಿಎಸ್, ಕಾಂಗ್ರೆಸ್‌ನಿಂದ ಅಪಪ್ರಚಾರ

Lingaraj Badiger
Updated On : 6 Mar 2013, 10:59 am

ಕ.ಪ್ರ.ವಾರ್ತೆ, ಚಿಕ್ಕಮಗಳೂರು, ಮಾ. 5
ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ಈ ಚುನಾವಣೆಯಲ್ಲಿ ಅಪಪ್ರಚಾರವನ್ನು ತಮ್ಮ ಬಂಡವಾಳವನ್ನಾಗಿ ಮಾಡಿಕೊಂಡಿವೆ. ಇದರಿಂದ ಗೆಲ್ಲಲು ಸಾಧ್ಯವಿಲ್ಲ ಎಂದು ಉನ್ನತ ಶಿಕ್ಷಣ ಸಚಿವ ಸಿ.ಟಿ. ರವಿ ಹೇಳಿದ್ದಾರೆ.
ಈ ಚುನಾವಣೆಯಲ್ಲಿ ಬಿಜೆಪಿ ಪರ ಒಲವು ಮತ್ತು ಅಭಿವೃದ್ಧಿ ಪರ ಅಲೆ ಇರುವುದು ವ್ಯಕ್ತವಾಗುತ್ತಿದೆ.ಚಿಕ್ಕಮಗಳೂರು ನಗರದಲ್ಲಿ ಸುಮಾರು 180ಕ್ಕೂ ಹೆಚ್ಚು ಕಡೆಗಳಲ್ಲಿ ಸಣ್ಣ ಸಣ್ಣ ಸಭೆಗಳನ್ನು ಮಾಡಿದ್ದೇವೆ. ಪ್ರತಿಯೊಂದು ಕಡೆ ನಮ್ಮ ಪರ ಅಭಿಪ್ರಾಯ ವ್ಯಕ್ತವಾಗಿದೆ ಎಂದು  ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಕಾಂಗ್ರೆಸ್ ಪಕ್ಷದ ಒಂದೇ ಕುಟುಂಬದ ಮೂವರಿಗೆ ಟಿಕೆಟ್ ನೀಡಿದೆ. ಜೆಡಿಎಸ್ ಒಂದೇ ಕುಟುಂಬದ ಐವರಿಗೆ ಟಿಕೆಟ್ ನೀಡಿದೆ. ಒಂದೆಡೆ ಜೆಡಿಎಸ್ ಅಭ್ಯರ್ಥಿ. ಅದೇ ಅಭ್ಯರ್ಥಿ ಇನ್ನೊಂದೆಡೆ ತಮ್ಮ ಪಕ್ಷದ ಅಧಿಕೃತ ಅಭ್ಯರ್ಥಿಯ ಎದುರು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದ್ದಾರೆ. ಇದು, ಆ ಪಕ್ಷದ ದುಸ್ಥಿತಿಯೋ ಅಥವಾ ಶಿಸ್ತು ಇದೆ ರೀತಿಯೋ ಆ ಪಕ್ಷದ ಮುಖಂಡರೇ ಹೇಳಬೇಕು ಎಂದರು.
ಸುಳ್ಳಲ್ಲಿ ಅರ್ಥವಿಲ್ಲ: ಚಿಕ್ಕಮಗಳೂರು ನಗರಸಭಾ ವ್ಯಾಪ್ತಿಯಲ್ಲಿ ಅಭಿವೃದ್ಧಿ ಕೆಲಸಗಳೇ ಆಗಿಲ್ಲ ಎಂದು ಕಾಂಗ್ರೆಸ್ ಮುಖಂಡರು  ಹೇಳುತ್ತಿದ್ದಾರೆ. ಇನ್ನೊಂದೆಡೆ ಇಲ್ಲಿನ ಅಭಿವೃದ್ಧಿ ಕೆಲಸಗಳಲ್ಲಿ ಕೇಂದ್ರದ ಪಾಲಿದೆ ಎಂದು ಹೇಳಿದ್ದಾರೆ.
ಒಳಚರಂಡಿ ಕಾಮಗಾರಿಗೆ ಕೇಂದ್ರ ಸರ್ಕಾರ ಶೇ.70ರಷ್ಟು ಅನುದಾನ ನೀಡಬೇಕಾಗಿತ್ತು. ಆದರೆ, ಒಂದು  ಬಿಡಿಗಾಸು ನೀಡಿಲ್ಲ, ನಗರೋತ್ಥಾನ, ಕೆಎಂಆರ್‌ಪಿ ಇದೆಲ್ಲಾ ರಾಜ್ಯ ಸರ್ಕಾರದ ಅನುದಾನ. ಇದನ್ನು ಬಿಟ್ಟು ಕೇಂದ್ರ ಸರ್ಕಾರದ ಪಾಲು ಎಷ್ಟು ಕೊಟ್ಟಿದ್ದಾರೆ ತೋರಿಸಲಿ ಎಂದು ಸವಾಲು ಹಾಕಿದ ಸಚಿವರು, ಜನರಿಗೆ ಸುಳ್ಳು ಹೇಳುವುದರಲ್ಲಿ ಅರ್ಥವಿಲ್ಲ ಎಂದು ಹೇಳಿದರು.
ನಗರದ ಬಸವನಹಳ್ಳಿ ಕೆರೆ 2006-07ರಲ್ಲಿ ರು. 90 ಲಕ್ಷ, 2009-10ರಲ್ಲಿ ರು. 1.85 ಕೋಟಿ ಬಿಡುಗಡೆಯಾಗಿತ್ತು. ಈ ಹಣದಲ್ಲಿ ಅಭಿವೃದ್ಧಿ ಕೆಲಸಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಇನ್ನು ಕೆಲಸ ಆಗಬೇಕಾಗಿರುವ ಕೆಲಸ ಬಾಕಿ ಇದೆ. ಜತೆಗೆ ರು. 80 ಲಕ್ಷ ಹಣವೂ ಇದೆ. ಇಲ್ಲಿಗೆ ರು. 16 ಕೋಟಿ ಬಿಡುಗಡೆಯಾಗಿದೆ ಎಂದು ಜೆಡಿಎಸ್ ಮುಖಂಡರು ಹೇಳಿದ್ದಾರೆ.
ಅದನ್ನು ದಾಖಲೆಸಹಿತ ಬಹಿರಂಗಗೊಳಿಸಲಿ. ಅವರು ಹೇಳಿರುವುದು ಸತ್ಯವಾಗಿದ್ದರೆ ಮಂತ್ರಿಗಿರಿಗೆ ರಾಜೀನಾಮೆ ನೀಡಿ, ರಾಜಕೀಯ ನಿವೃತ್ತಿ ಪಡೆದು, ಅವರ ಮನೆಯಲ್ಲಿ ಜೀತಕ್ಕೆ ಇರುತ್ತೇನೆ. ಸುಳ್ಳಾಗಿದ್ದರೆ ನಮ್ಮ ಮನೆಯಲ್ಲಿ ಅವರು ಜೀತಕ್ಕೆ ಇರುವುದು ಬೇಡ. ಸುಳ್ಳುಗಾರರೆಂದು ಸ್ಲೇಟಿಗೆ ಬರೆಸಿ ಕೊರಳಿಗೆ ನೇತು ಹಾಕಿಕೊಂಡು ನಗರದಲ್ಲಿ ಓಡಾಡಲಿ ಎಂದು ಸವಾಲು ಹಾಕಿದರು.
ಕನಸು ಹಂಚಿಕೊಂಡಿದ್ದೇವೆ: ಕಾಂಗ್ರೆಸ್ ಪಕ್ಷ ಕೊನೆ ಗಳಿಗೆಯಲ್ಲಿ ಚುನಾವಣಾ ಪ್ರಣಾಳಿಕೆ ಬಿಡುಗಡೆ ಮಾಡಿದೆ. ಜೆಡಿಎಸ್‌ಗೆ ಚುನಾವಣಾ  ಪ್ರಣಾಳಿಕೆಯೇ ಇಲ್ಲ. ಬಿಜೆಪಿ ಜನರ ಮುಂದೆ ಅಭಿವೃದ್ಧಿ ಕೆಲಸ ಇಟ್ಟಿದೆ. ಭವಿಷ್ಯದ ಕನಸು ಹಂಚಿಕೊಂಡಿದ್ದೇವೆ. ಭವಿಷ್ಯದ ಕನಸಿಗೆ ಬೆಂಬಲ ನೀಡುವಂತೆ ಮತದಾರರಿಗೆ ಕೇಳಿಕೊಂಡಿದ್ದೇವೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ವರಸಿದ್ಧಿ ವೇಣುಗೋಪಾಲ್, ಕನಕರಾಜ್ ಅರಸ್, ವೆಂಕಟೇಶ್ ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement