ಜೆಡಿಎಸ್ ದುರಾಡಳಿತದಿಂದ ಬೇಸತ್ತಿರುವ ಜನ: ಮಹೇಶ್
ಬೀರೂರು: ಜೆಡಿಎಸ್ ಮುಖಂಡರಾದ ವೈ.ಎಸ್.ವಿ. ದತ್ತ ನೇತೃತ್ವದಲ್ಲಿ ಕಡೂರು ಪುರಸಭೆಯಲ್ಲಿ ಅಧಿಕಾರ ಹಿಡಿದಿದ್ದ ಜೆಡಿಎಸ್ ನಡೆಸಿದ ದುರಾಡಳಿತದಿಂದ ಬೇಸತ್ತಿರುವ ಜನರು ಕಡೂರು ಹಾಗೂ ಬೀರೂರು ಪಟ್ಟಣದಲ್ಲಿ ಈ ಬಾರಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸುವ ಮೂಲಕ ಎರಡೂ ಪುರಸಭೆಗಳಲ್ಲಿ ಕಾಂಗ್ರೆಸ್ ಅಧಿಕಾರ ಹಿಡಿಯಲಿದೆ ಎಂದು ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ಮಹೇಶ್ ಒಡೆಯರ್ ಹೇಳಿದರು.
ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಅವರು, ಕಳೆದ 2007ರಲ್ಲಿ ಮಾಜಿ ವಿಧಾನಪರಿಷತ್ ಸದಸ್ಯರಾದ ವೈ.ಎಸ್.ವಿ. ದತ್ತ ನೇತೃತ್ವದಲ್ಲಿ ಕಡೂರು ಪುರಸಭೆಯಲ್ಲಿ ಅಧಿಕಾರ ಹಿಡಿದ ಜೆಡಿಎಸ್ ಹಗರಣಗಳಲ್ಲಿಯೂ ಮುಳುಗುವ ಮೂಲಕ ಪುರಸಭೆಯಲ್ಲಿ
ತಮ್ಮದೇ ಪಕ್ಷದಿಂದ ನಡೆಯುತ್ತಿರುವ ಹಗರಣಗಳ ಬಗ್ಗೆಯಾಗಲಿ, ಆಡಳಿತದತ್ತ ಗಮನಹರಿಸುವುದಾಗಲಿ ಮಾಡಲಿಲ್ಲ. ಅದರ ಪರಿಣಾಮ ಪುರಸಭೆಯಲ್ಲಿ ಪಾರ್ಕ್‌ಗಳ ಒತ್ತುವರಿ, ಅಕ್ರಮ ನಿವೇಶನಗಳ ಹಗರಣಗಳು ನಡೆಯಲು ಕಾರಣವಾಯಿತು ಎಂದು ಆರೋಪಿಸಿದ್ದಾರೆ.
ಮತ ಕೇಳುವ ನೈತಿಕತೆ: ದತ್ತ ವಿಧಾನಪರಿಷತ್ ಸದಸ್ಯರಾಗಿ ಮತ್ತು ಜೆಡಿಎಸ್ ನೇತೃತ್ವದ ಸರ್ಕಾರ ಅಧಿಕಾರದಲ್ಲಿದ್ದಾಗ ಕಡೂರು ಪುರಸಭೆಗೆ ಯಾವುದೇ ಅನುದಾನ ತಾರದೆ, ಅಭಿವೃದ್ಧಿಯನ್ನೂ ಮಾಡದೆ ಆಶ್ವಾಸನೆ ನೀಡುತ್ತಾ ಜನರನ್ನು ಮರುಳು ಮಾಡುತ್ತಿರುವುದನ್ನು ಕಡೂರು ಬೀರೂರು ಪಟ್ಟಣದ ನಾಗರಿಕರು ನಂಬುವ ಸ್ಥಿತಿಯಲ್ಲಿ ಇಲ್ಲ. ಜೆಡಿಎಸ್ ಕಡೂರು ಪುರಸಭೆಯಲ್ಲಿ ನಡೆಸಿದ ದುರಡಾಳಿತದಿಂದಾಗಿ ದತ್ತಗೆ ಜನರ ಬಳಿ ಹೋಗಿ ಮತ ಕೇಳಲು ಯಾವ ನೈತಿಕತೆ ಇದೆ ಎಂದು ಪ್ರಶ್ನಿಸಿದರು.
ಕಾಂಗ್ರೆಸ್ ಜಿಲ್ಲಾ ನಾಯಕರಾದ ಕೆ.ಬಿ. ಮಲ್ಲಿಕಾರ್ಜುನ್, ಕೆ.ಎಂ. ಕೆಂಪರಾಜು, ಕಡೂರು ಹಾಗೂ ಬೀರೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಎಂ.ಎಚ್. ಚಂದ್ರಪ್ಪ, ಕೆ.ಎಂ. ವಿನಾಯಕ ನೇತೃತ್ವದಲ್ಲಿ ಈ ಭಾರಿಯ ಚುನಾವಣೆ ಎದುರಿಸಲಾಗುವುದು. ಉತ್ತಮ ಅಭ್ಯರ್ಥಿಗಳು ಕಣದಲ್ಲಿದ್ದು ಕಡೂರು, ಬೀರೂರು ಪುರಸಭೆಗಳಲ್ಲಿ ಮತದಾರರು ಜೆಡಿಎಸ್, ಬಿಜೆಪಿ ಪಕ್ಷದ ಅಭ್ಯರ್ಥಿಗಳನ್ನು ತಿರಸ್ಕರಿಸುವ ಮೂಲಕ ಹೆಚ್ಚಿನ ಸಂಖ್ಯೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳನ್ನು ಮಹೇಶ್ ಹೇಳಿದರು.