ಬಿಜೆಪಿ ಹೆಚ್ಚು ಸ್ಥಾನ ಗೆಲ್ಲಲಿದೆ: ವಿಶ್ವಾಸ
ಕಡೂರು: ಬಿಜೆಪಿ ಸರ್ಕಾರದ ಅವಧಿಯಲ್ಲಿ ಕಡೂರು ಹಾಗು ಬೀರೂರು ಪಟ್ಟಣಗಳಿಗೆ ಭದ್ರಾ ನದಿಯಿಂದ ಶೀಘ್ರ ಶಾಶ್ವತ ಶುದ್ಧ ಕುಡಿಯುವ ನೀರು ದೊರಕಲಿರುವುದು ಸೇರಿದಂತೆ ಪುರಸಭೆಗಳಿಗೆ ಕೋಟ್ಯಂತರ ರುಪಾಯಿ ಅನುದಾನ ನೀಡಿ ಕೈಗೊಂಡಿರುವ ಸಾಕಷ್ಟು ಅಭಿವೃದ್ಧಿ ಕಾರ್ಯಗಳಿಂದಾಗಿ ಕಡೂರು ಹಾಗು ಬೀರೂರು ಪುರಸಭೆಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಹೆಚ್ಚು ಸ್ಥಾನಗಳಲ್ಲಿ ಗೆಲ್ಲಲಿದ್ದಾರೆ ಎಂದು ಶಾಸಕ ಡಾ ವೈ.ಸಿ. ವಿಶ್ವನಾಥ್ ಹೇಳಿದರು.
ಕಡೂರು ಪಟ್ಟಣದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ಈ ಭಾರಿಯ ಪುರಸಭಾ ಚುನಾವಣೆಯಲ್ಲಿ ಬಿಜೆಪಿ ಪರ ಅಲೆ ಎದ್ದಿದ್ದು ಪ್ರತಿ ಮತದಾರನ ಕುಟುಂಬದಲ್ಲಿ ನಮ್ಮ ಬಿಜೆಪಿ ಸರ್ಕಾರದ ಸವಲತ್ತು ಪಡೆದಿರುವ ವ್ಯಕ್ತಿಗಳು ಇರುವುದರಿಂದ ನಮ್ಮ ಸರ್ಕಾರದ ಸಾಧನೆಗಳು ಬಿಜೆಪಿ ಅಭ್ಯರ್ಥಿಗಳ ಗೆಲುವಿಗೆ ಕಾರಣವಾಗಲಿದೆ.
ಭದ್ರಾ ನದಿಯಿಂದ ಕಡೂರು ಬೀರೂರು ಪಟ್ಟಣಗಳಿಗೆ ಶಾಶ್ವತ ಕುಡಿಯುವ ನೀರು ಒದಗಿಸುವ ಮಹತ್ತರ ಯೋಜನೆ ಕಾಮಗಾರಿ ಮುಗಿಯುತ್ತಿರುವುದರಿಂದ ಜನರು ಬಿಜೆಪಿಯತ್ತ ಒಲವು ತೋರಿಸುತ್ತಿದ್ದಾರೆ. ನಮ್ಮ ಸರ್ಕಾರದಿಂದ ಮುಖ್ಯಮಂತ್ರಿಗಳ ಯೋಜನೆ, 13ನೇ ಹಣಕಾಸು ಯೋಜನೆ ಸೇರಿದಂತೆ ವಿವಿಧ ಯೋಜನೆಗಳಿಂದ ಕಡೂರು ಮತ್ತು ಬೀರೂರು ಪುರಸಭೆಗಳಿಗೆ ಸುಮಾರು ರು. 35 ಕೋಟಿ ಅನುದಾನ ನೀಡುವ ಮೂಲಕ ಪಟ್ಟಣದಲ್ಲಿ ರಸ್ತೆಗಳು, ಚಂರಡಿಗಳು, ಶೌಚಾಲಯ ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿ ಮಾಡಲಾಗಿದೆ.
ಸಾಧನೆಯಿಂದ ಗೆಲವು: ಕೊಳಚೆ ನಿರ್ಮೂಲನಾ ಮಂಡಳಿಯಿಂದ ರು. 40 ಕೋಟಿ ವೆಚ್ಚದ್ಲಲಿ ಕಡೂರು ಹಾಗು ಬೀರೂರು ಪಟ್ಟಣದಲ್ಲಿ ಒಳಚರಂಡಿ ನಿರ್ಮಾಣ ಮಾಡಲು ಕ್ರಮ ಕೈಗೊಂಡಿದ್ದು ಸ್ಥಳೀಯ ಸಂಸ್ಥೆಗಳ ಚುನಾವಣೆ ನಂತರ ಎರಡೂ ಪಟ್ಟಣಗಳಲ್ಲಿ ಈ ಕಾಮಗಾರಿ ಆರಂಭವಾಗಲಿದೆ. ಹೊಸದಾಗಿ ಕಡೂರು ಪಟ್ಟಣದಲ್ಲಿ 500 ವಿದ್ಯುತ್ ದೀಪ ಅಳವಡಿಕೆ ಸೇರಿದಂತೆ ಬಿಜೆಪಿ ಸರ್ಕಾರದ ಸಾಧನೆಗಳೇ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಅಭ್ಯರ್ಥಿಗಳು ಗೆಲುವಿಗೆ ಕಾರಣವಾಗಲಿದೆ ಎಂದರು.
ಬಿಜೆಪಿ ಸರ್ಕಾರದ ಬಗ್ಗೆ ಜನರಲ್ಲಿ ನಂಬಿಕೆ ಮೂಡಿದೆ. ಭಾಗ್ಯಲಕ್ಷ್ಮಿ ಬಾಂಡ್ ವಿತರಣೆ, ಸೈಕಲ್ ವಿತರಣೆ, ಅಂಗವಿಕಲವೇತನ, ಶೂನ್ಯ ಬಡ್ಡಿ ದರದಲ್ಲಿ ರೈತರಿಗೆ ಸಾಲ ವಿತರಣೆ ಸೇರಿದಂತೆ ನಮ್ಮ ಸರ್ಕಾರ ಅನೇಕ ಜನೋಪಯೋಗಿ ಕಾರ್ಯಕ್ರಮಗಳನ್ನು ಜಾರಿಗೆ ತಂದಿದೆ. ಕಳೆದ ಉಪ ಚುನಾವಣೆಯಲ್ಲಿ ನನ್ನನ್ನು ಶಾಸಕನನ್ನಾಗಿ ಆಯ್ಕೆ ಮಾಡಿರುವ ಮತದಾರರೇ ಈ ಭಾರಿ ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸುವ ಮೂಲಕ ಕಡೂರಿನಲ್ಲಿ 12 ಕ್ಕಿಂತ ಹೆಚ್ಚು ಅಭ್ಯರ್ಥಿಗಳನ್ನು ಗೆಲ್ಲಿಸಲಿದ್ದಾರೆ ಎಂದರು.
ಬಿಜೆಪಿ ಅಧಿಕಾರಕ್ಕೆ: ಕಡೂರಿನಲ್ಲಿ 19, ಬೀರೂರಿನಲ್ಲಿ 21 ವಾರ್ಡ್ಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಗಿದೆ. ಕಡೂರಿನಲ್ಲಿ ಈ ಹಿಂದೆ ಬಿಜೆಪಿ ಪುರಸಭಾ ಸದಸ್ಯರು ಇಲ್ಲದಿದ್ದರೂ ಕೂಡ ಜೆಡಿಎಸ್ ಆಡಳಿತ ನಡೆಸಿದ ಕಡೂರು ಪುರಸಭೆಯಲ್ಲಿ ನಮ್ಮ ಬಿಜೆಪಿ ನಾಮಕರಣ ಸದಸ್ಯರು ಪಾರ್ಕ್ಗಳ ಒತ್ತುವರಿ ಹಾಗು ಪುರಸಭೆಯಲ್ಲಿ ನಡೆದಿರುವ ಅವ್ಯವಹಾರಗಳನ್ನು ಬಯಲಿಗೆ ಎಳೆದು ಚುನಾಯಿತ ಜನಪ್ರತಿನಿಧಿಗಳಂತೆ ಕೆಲಸ ಮಾಡಿದ್ದಾರೆ. ಈ ಭಾರಿ ಪಕ್ಷದ ಅಭ್ಯರ್ಥಿಗಳು ಗೆಲ್ಲುವ ಮೂಲಕ ಬಿಜೆಪಿ ಪಕ್ಷ ಅಧಿಕಾರ ಹಿಡಿಯಲಿದೆ. ಬೀರೂರು ಪಟ್ಣಣದಲ್ಲಿಯೂ ಹೆಚ್ಚು ಸ್ಥಾನಗಳಲ್ಲಿ ಬಿಜೆಪಿ ಗೆಲ್ಲಲಿದೆ ಎಂದು ವಿಶ್ವನಾಥ್ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ತಾಲೂಕು ಉಪಾಧ್ಯಕ್ಷ ಎ. ಮಣಿ, ಕಾರ್ಯದರ್ಶಿ ಶಿವಶಂಕರ್ ಅಭ್ಯರ್ಥಿ ಆರ್. ಕೃಷ್ಣಮೂರ್ತಿ ಉಪಸ್ಥಿತರಿದ್ದರು.