ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಇಂದು 686 ಅಭ್ಯರ್ಥಿಗಳ ಹಣೆಬರಹ ನಿರ್ಧಾರ

Lingaraj Badiger
Updated On : 7 Mar 2013, 10:49 am

ಕ.ಪ್ರ.ವಾರ್ತೆ  ಚಿಕ್ಕಮಗಳೂರು  ಮಾ.5
ಜಿಲ್ಲೆಯ 8 ನಗರ ಸ್ಥಳೀಯ ಸಂಸ್ಥೆಗಳಿಗೆ ಗುರುವಾರ ಮತದಾನ ನಡೆಯಲಿದ್ದು, ಜಿಲ್ಲೆಯ ಒಟ್ಟು 148 ವಾರ್ಡ್‌ಗಳಿಗೆ 686 ಮಂದಿ ಅಭ್ಯರ್ಥಿಗಳು ಸ್ಪರ್ಧೆ ಮಾಡಿದ್ದು, ಇಂದು ಅವರ ರಾಜಕೀಯ ಭವಿಷ್ಯ ನಿರ್ಧಾರವಾಗಲಿದೆ.
ಬಹಿರಂಗ ಪ್ರಚಾರ ಸೋಮವಾರ ಸಂಜೆಗೆ ಮುಕ್ತಾಯಗೊಂಡಿತು. ಆದರೆ, ಕೊನೆ ಕ್ಷಣದವರೆಗೂ ರಾಜಕೀಯ ಪಕ್ಷಗಳಿಂದ ಮತಯಾಚನೆ ಮುಂದುವರೆದಿತ್ತು. ಬುಧವಾರ ಮಧ್ಯಾಹ್ನವೂ ಕೂಡ ಮನೆ ಮನೆಗೆ ತೆರಳಿ ಮತಯಾಚನೆ ಮಾಡುತ್ತಿರುವುದು ಅಲ್ಲಲ್ಲಿ ಕಂಡು ಬಂದಿತು.
1016 ಸಿಬ್ಬಂದಿ ನಿಯೋಜನೆ: ಚುನಾವಣಾ ಕರ್ತವ್ಯಕ್ಕೆ 1016 ಸಿಬ್ಬಂದಿಗಳು ಹಾಗೂ ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು 2 ಸಾವಿರ ಪೊಲೀಸರನ್ನು ನಿಯೋಜಿಸಲಾಗಿದೆ. ಬುಧವಾರ ಬೆಳಿಗ್ಗೆ ಕರ್ತವ್ಯಕ್ಕೆ ನಿಯೋಜಿತ ಸಿಬ್ಬಂದಿಗಳು ಮತಯಂತ್ರಗಳೊಂದಿಗೆ ಮತಗಟ್ಟೆ ಕೇಂದ್ರಗಳಿಗೆ ತೆರಳಿದರು. ಜಿಲ್ಲೆಯ 231 ಮತಗಟ್ಟೆ ಕೇಂದ್ರಗಳಲ್ಲಿ ಗುರುವಾರ ಬೆಳಿಗ್ಗೆ 7 ಗಂಟೆಗೆ ಆರಂಭಗೊಳ್ಳಲಿರುವ ಮತದಾನ ಸಂಜೆ 5 ಗಂಟೆಗೆ ಮುಕ್ತಾಯಗೊಳ್ಳಲಿದೆ.
ಜಿಲ್ಲೆಯ 231 ಮತಗಟ್ಟೆಗಳ ಪೈಕಿ ಸಾಮಾನ್ಯ ಸಂಖ್ಯೆ ತೀರ ಕಡಿಮೆ ಅಂದರೆ ಕೇವಲ 34 ಮಾತ್ರ. ಇನ್ನುಳಿದವುಗಳಲ್ಲಿ 80 ಅತಿ ಸೂಕ್ಷ್ಮ, 116 ಸೂಕ್ಷ್ಮ ಮತಗಟ್ಟೆಗಳು. ಇದು, ನಗರ ಪ್ರದೇಶಕ್ಕೆ ಮಾತ್ರ ಸೀಮಿತವಾಗಿರುವ ಚುನಾವಣೆಯಾಗಿದ್ದರಿಂದ ಹೆಚ್ಚಿನ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಇದರ ಜತೆಗೆ 75 ಸಂಚಾರಿ ದಳ, 10 ಮಂದಿ ಅಧಿಕಾರಿಗಳ ವಿಶೇಷ ತಂಡಗಳನ್ನು ರಚಿಸಲಾಗಿದೆ.
ನಗರಸಭೆ ಮೇಲೆ ಕಣ್ಣು: ಜಿಲ್ಲೆಯ 8 ನಗರ ಸ್ಥಳೀಯ ಸಂಸ್ಥೆಗಳಲ್ಲಿ ಎಲ್ಲರ ಕಣ್ಣು ಚಿಕ್ಕಮಗಳೂರು ನಗರಸಭೆಯ ಮೇಲೆ. ಇಲ್ಲಿನ 35 ವಾರ್ಡ್‌ಗಳಿಗೆ ಸ್ಪರ್ಧೆ ಮಾಡಿರುವ ಅಭ್ಯರ್ಥಿಗಳ ಸಂಖ್ಯೆ ಬರೋಬರಿ 198. ಪ್ರಮುಖ ರಾಜಕೀಯ ಪಕ್ಷಗಳ ಜತೆಗೆ ಪಕ್ಷೇತರ ಅಭ್ಯರ್ಥಿಗಳು ಅಧಿಕ ಸಂಖ್ಯೆಯಲ್ಲಿ ಸ್ಪರ್ಧೆ ಮಾಡಿದ್ದಾರೆ. ಅಂದರೆ 65 ಜನ ಪಕ್ಷೇತರರಾಗಿ ಸ್ಪರ್ಧೆ ಮಾಡಿದ್ದಾರೆ.
ಕಳೆದ ಅವಧಿಯಲ್ಲಿ ನಗರಸಭಾ ಸದಸ್ಯರಾಗಿದ್ದವರು ಮತ್ತೆ ಸ್ಪರ್ಧೆ ಮಾಡಿದ್ದಾರೆ, ಇನ್ನು ಕೆಲವರು ತಾವು ಮರು ಸ್ಪರ್ಧೆ ಮಾಡುವ ಬದಲು ತಮ್ಮ ಸಂಬಂಧಿಕರನ್ನು ಕಣಕ್ಕೆ ಇಳಿಸಿದ್ದಾರೆ. ಕೆಲವೆಡೆ ರಾಜಕೀಯ ಪಕ್ಷಗಳು ಪಕ್ಷೇತರ ಅಭ್ಯರ್ಥಿಗಳೊಂದಿಗೆ ಒಳ ಒಪ್ಪಂದ ಮಾಡಿಕೊಂಡು, ಅವರಿಗೆ ಪರೋಕ್ಷವಾಗಿ ತಮ್ಮ ಬೆಂಬಲ ವ್ಯಕ್ತಪಡಿಸಿದ್ದಾರೆ. ಒಟ್ಟಾರೆ ಚಿಕ್ಕಮಗಳೂರು ನಗರಸಭೆ ಚುನಾವಣೆ ಎಲ್ಲರ ಗಮನ ಸೆಳೆದಿದೆ.
ಕಳೆದ ಅವಧಿಯಲ್ಲಿ ಚಿಕ್ಕಮಗಳೂರು ನಗರಸಭೆ 35 ವಾರ್ಡ್‌ಗಳಲ್ಲಿ ಬಿಜೆಪಿ 19ರಲ್ಲಿ ಗೆಲವು ಸಾಧಿಸಿ, ಅಧಿಕಾರದ ಚುಕ್ಕಾಣಿ ಹಿಡಿದಿತ್ತು. ಆದರೆ, ಈ ಚುನಾವಣೆಯಲ್ಲಿ ಎಷ್ಟು ಸ್ಥಾನಗಳಿಸಬಹುದೆಂಬ ಕುತೂಹಲ ಮತದಾರರ ಮುಂದಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement