ಒಳ ಚರಂಡಿ ಕಾಮಗಾರಿ ಕಳಪೆ: ಆರೋಪ
ಕಪ್ರ ವಾರ್ತೆ, ಚಿಕ್ಕಮಗಳೂರು
ನಗರದಲ್ಲಿ ಸುಮಾರು 65 ಕೋಟಿ ರುಪಾಯಿ ವೆಚ್ಚದಲ್ಲಿ ನಡೆಯುತ್ತಿರುವ ಒಳ ಚರಂಡಿ ಕಾಮಗಾರಿ ಕಳಪೆ ಗುಣಮಟ್ಟದ್ದಾಗಿದೆ ಎಂದು ಜಿಲ್ಲಾ ಕಾಂಗ್ರೆಸ್ ವಕ್ತಾರ ಎ.ಎನ್. ಮಹೇಶ್ ಆರೋಪಿಸಿದ್ದಾರೆ.
ಈ ಕಾಮಗಾರಿಗೆ ಐಎಸ್‌ಐ ಮಾರ್ಕಿನ ಇಟ್ಟಿಗೆ ಬಳಸಬೇಕು. ಆದರೆ, ಸ್ಥಳೀಯವಾಗಿ ಸಿಗುವಂತ ಇಟ್ಟಿಗೆ ಬಳಸಿಕೊಳ್ಳಲಾಗುತ್ತಿದ್ದು, ಇದರಿಂದಾಗಿ ಮುಂದಿನ ದಿನಗಳಲ್ಲಿ ಇಡೀ ವ್ಯವಸ್ಥೆ ಹಾಳಾಗಲಿದೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
20 ಕೋಟಿ: ಈಗ ಹಾಕಿರುವ ಇಟ್ಟಿಗೆಗಳು ಅರ್ಧ ಗಂಟೆಯಲ್ಲಿ ನೀರಿನಲ್ಲಿ ಇಟ್ಟರೆ ಸಾಕು ಕರಗಿ ಹೋಗುತ್ತಿವೆ. ಈ ಕಾಮಗಾರಿಗೆ ಕ್ಯೂರಿಂಗ್ ಮಾಡಿಲ್ಲ ಎಂದ ಅವರು, 65 ಕೋಟಿ ರುಪಾಯಿಯಲ್ಲಿ ಈಗಾಗಲೇ 20 ಕೋಟಿ ರುಪಾಯಿ ಬಿಡುಗಡೆಯಾಗಿದೆ ಎಂದು ತಿಳಿಸಿದರು. ಚಿಕ್ಕಮಗಳೂರು ನಗರಸಭೆಗೆ ಕೇಂದ್ರ ಸರ್ಕಾರ ಬಿಡಿಗಾಸು ನೀಡಿಲ್ಲ ಎಂದು ಶಾಸಕರು ಆರೋಪಿಸಿದ್ದಾರೆ. 12 ಮತ್ತು 13ನೇ ಹಣಕಾಸು, ಸ್ವರ್ಣ ಜಯಂತಿ ಶಹರಿ ರೋಜ್ಗಾರ್ ಯೋಜನೆಗೆ ಕೇಂದ್ರ ಸರ್ಕಾರದಿಂದ ಹಣ ಬಿಡುಗಡೆಯಾಗಿದೆ. ಇಲ್ಲಿನ ಕೆರೆಗಳ ಅಭಿವೃದ್ಧಿಗೆ ಸೆಂಟ್ರಲ್ ಟ್ಯಾಂಕ್ ಡೆವಲಪ್‌ಮೆಂಟ್‌ನಿಂದ ಅನುದಾನ ಬಂದಿದ್ದು, ಕೇಂದ್ರ ಸರ್ಕಾರ ಚಿಕ್ಕಮಗಳೂರು ನಗರಕ್ಕೆ ಸುಮಾರು 50 ಕೋಟಿ ರುಪಾಯಿ ಬಿಡುಗಡೆ ಮಾಡಿದೆ ಎಂದು ಹೇಳಿದರು.
ಸಾರ್ವಜನಿಕರಿಂದ ತೆರಿಗೆ ರೂಪದಲ್ಲಿ ಸಂಗ್ರಹವಾಗಿರುವ ಹಣವನ್ನು ಅನುದಾನ ರೂಪದಲ್ಲಿ ಸರ್ಕಾರ ಬಿಡುಗಡೆ ಮಾಡಿದೆ. ಹಣ ಖರ್ಚಾಗಿರುವ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡಬೇಕು ಎಂದು ಆಗ್ರಹಿಸಿದರು.
ಹಣ ಬಿಡುಗಡೆ: ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂ.ಎಲ್. ಮೂರ್ತಿ ಮಾತನಾಡಿ, ಉಡುಪಿ- ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸಂಸದರು ಚಿಕ್ಕಮಗಳೂರು ನಗರಕ್ಕೆ ಒಂದು ರುಪಾಯಿ ಅನುದಾನ ನೀಡಿಲ್ಲ ಎಂದು ಸಚಿವ ಸಿ.ಟಿ. ರವಿ ಆರೋಪಿಸಿದ್ದಾರೆ. ಜಯಪ್ರಕಾಶ್ ಹೆಗ್ಡೆ ಸಂಸದರಾಗಿ ಒಂದು ವರ್ಷ ಆಗಿಲ್ಲ. ಆದರೆ, 1998 ರಿಂದ 2012ರವರೆಗೆ ಈ ಕ್ಷೇತ್ರದಲ್ಲಿ ಬಿಜೆಪಿ ಸಂಸದರು ಇದ್ದರು. ಅವರು ಎಷ್ಟು ಹಣ ಬಿಡುಗಡೆ ಮಾಡಿದ್ದಾರೆ ಎಂದು ಪ್ರಶ್ನಿಸಿದರು.
ಮುನಿಯಪ್ಪ ಅವರು ರೈಲ್ವೆಯ ಸಚಿವರಾಗಿದ್ದಾಗ, ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಕಡೂರು- ಚಿಕ್ಕಮಗಳೂರು ರೈಲ್ವೆ ಕಾಮಗಾರಿಗೆ ಹಣ ಬಿಡುಗಡೆಯಾಗಿದೆ. ಈ ಯೋಜನೆಯ ಪೊಲಿಟಿಕಲ್ ಕ್ರೆಡಿಟ್ ಅವರಿಗೆ ಸಲ್ಲಬೇಕು ಎಂದು ಹೇಳಿದರು.