ಚುನಾವಣೆಗೆ ಸಿದ್ಧ
ನರಸಿಂಹರಾಜಪುರ: ಪಪಂ ಚುನಾವಣೆಗೆ ಸಿದ್ಧತೆ ಮಾಡಿಕೊಳ್ಳಲಾಗಿದ್ದು 11 ವಾರ್ಡಿನ 5,065 ಮತದಾರರರು ಗುರುವಾರ ತಮ್ಮ ಮತ ಚಲಾವಣೆ ಮಾಡಲಿದ್ದಾರೆ. ಪ್ರವಾಸಿ ಮಂದಿರ ಸಮೀಪದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ 3 ನೇ ಮತಗಟ್ಟೆಯಲ್ಲಿ ಅತಿ ಕಡಿಮೆ 348 ಮತದಾರರು ಇದ್ದಾರೆ. 7 ನೇ ಮತಗಟ್ಟೆ (ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಬಾಲಕರ ಶಾಲೆ) ಯಲ್ಲಿ ಅತಿ ಹೆಚ್ಚು 645 ಮತದಾರರಿದ್ದಾರೆ. 11 ಮತಗಟ್ಟೆಯಲ್ಲಿ 6 ಮತಗಟ್ಟೆಯನ್ನು ಸೂಕ್ಷ್ಮ ಮತಗಟ್ಟೆ ಹಾಗೂ 5 ಮತಗಟ್ಟೆಯನ್ನು ಅತಿ ಸೂಕ್ಷ್ಮ ಮತಗಟ್ಟೆ ಎಂದು ಗುರುತಿಸಲಾಗಿದೆ ಎಂದು ಚುನಾವಣಾಧಿಕಾರಿ ಬಿ.ಜಿ. ಮಾಳಮ್ಮನವರ್ ತಿಳಿಸಿದ್ದಾರೆ. ಬೆಳಿಗ್ಗೆ 7 ರಿಂದ ಸಂಜೆ 5 ರವರೆಗೆ ಮತದಾನ ನಡೆಯಲಿದೆ. ಮತದಾರರು ತಮ್ಮ 21 ಗುರುತಿನ ಪತ್ರಗಳಲ್ಲಿ ಯಾವುದಾದರೂ ಒಂದು ಗುರುತಿನ ಪತ್ರ ನೀಡಿ ಮತ ಚಲಾಯಿಸಬಹುದು. ಪಪಂ ಚುನಾವಣೆಗೆ ಪೊಲೀಸ್ ಬಿಗಿ ಬಂದೋಬಸ್ತು ಏರ್ಪಡಿಸಲಾಗಿದೆ ಎಂದು ಆರಕ್ಷಕ ವೃತ್ತ ನಿರೀಕ್ಷಕ ಕೃಷ್ಣಮೂರ್ತಿ ತಿಳಿಸಿದ್ದಾರೆ.
ಪೊಲೀಸ್ ಬಂದೋಬಸ್ತಿಗೆ ಒಬ್ಬರು ವೃತ್ತ ನಿರೀಕ್ಷಕರು, 2 ಸಬ್ ಇನ್ಸ್‌ಪೆಕ್ಟರ್, 50 ಪೊಲೀಸ್ ಸಿಬ್ಬಂದಿ, 20 ಹೋಂ ಗಾರ್ಡ್ಸ್, 1 ಡಿಎಆರ್, 1 ರಿಜರ್ವ್ ಪೊಲೀಸ್ ಸಿದ್ಧವಾಗಿದ್ದಾರೆ. ಪ್ರತಿ ಮತಗಟ್ಟೆಗೆ ಒಬ್ಬರು ಎಎಸ್‌ಐ ಹಾಗೂ 3 ಜನ ಪೊಲೀಸ್ ಸಿಬ್ಬಂದಿ ಬಂದೋಬಸ್ತು ಕಾರ್ಯ ನಿರ್ವಹಿಸಲಿದ್ದಾರೆ ಎಂದು ಅವರು ತಿಳಿಸಿದ್ದಾರೆ. ಮತದಾನ ಮುಗಿದ ನಂತರ ಮತ ಯಂತ್ರಗಳನ್ನು ಪೊಲೀಸ್ ಬಿಗಿ ಕಾವಲಿನಲ್ಲಿ ತಾಪಂಗೆ ಸಾಗಿಸಲಾಗುವುದು. ಅಲ್ಲಿನ ಭದ್ರತಾ ಕೊಠಡಿಯಲ್ಲಿ ಮತ ಯಂತ್ರಗಳನ್ನು ಇಡಲಾಗುವುದು. 11 ರಂದು ಮತ ಎಣಿಕೆ ಕಾರ್ಯ ನಡೆಯಲಿದೆ ಎಂದು ತಿಳಿಸಿದ್ದಾರೆ.
23 ಮತಗಟ್ಟೆಯಲ್ಲಿ ಮತದಾನಕ್ಕೆ ಸಿದ್ಧತೆ
ತರೀಕೆರೆ: ತರೀಕೆರೆ ಪುರಸಭಾ ಸದಸ್ಯರ ಚುನಾವಣೆ ಮಾರ್ಚಿ 7ರಂದು ನಡೆಯಲಿದ್ದು, ಪಟ್ಟಣದ 23 ಮತಗಟ್ಟೆಗಳಲ್ಲಿ ಮತದಾನಕ್ಕೆ ಸರ್ವ ಸಿದ್ಧತೆ ನಡೆಸಲಾಗಿದೆ ಎಂದು ತಹಸೀಲ್ದಾರ್ ರಂಜಿತ ತಿಳಿಸಿದ್ದಾರೆ. 23 ಮತಗಟ್ಟೆಗಳಲ್ಲಿ 11 ಅತಿ ಸೂಕ್ಷ್ಮ, 10 ಸೂಕ್ಷ್ಮ, ಮತ್ತು 2 ಸಾಮಾನ್ಯ ಮತಗಟ್ಟೆಯಾಗಿದ್ದು, ಪ್ರತಿ ಮತಗಟ್ಟೆಯಲ್ಲಿ ಒಬ್ಬ ಮತಗಟ್ಟೆ ಅಧಿಕಾರಿ, ಸಹಾಯಕ ಮತಗಟ್ಟೆ ಅಧಿಕಾರಿ, ಇಬ್ಬರು ಪೋಲಿಂಗ್ ಪರ್ಸನ್ಸ್ ಹಾಗೂ ಒಬ್ಬರು ಸಹಾಯಕರು ಇರುತ್ತಾರೆ. ಬೆಳಗ್ಗೆ 7 ರಿಂದ ಸಂಜೆ 5 ಗಂಟೆಯವರೆಗೆ ಮತದಾನ ಕಾರ್ಯ ನೆಡಯಲಿದ್ದು, ಮತದಾನಕ್ಕೆ ವಿದ್ಯುನ್ಮಾನ ಯಂತ್ರ ಬಳಕೆ ಮಾಡಲಾಗುವುದು ಎಂದು ಅವರು ತಿಳಿಸಿದ್ದಾರೆ.
23590 ಮತದಾರರು: ಇದೇ ಪ್ರಥಮ ಬಾರಿಗೆ ಪುರಸಭಾ ಚುನಾವಣೆಯಲ್ಲಿ ವಿದ್ಯುನ್ಮಾನ ಯಂತ್ರಗಳನ್ನು ಬಳಸುತ್ತಿದ್ದು, ಪುರಸಭಾ ಚುನಾವಣೆಯಲ್ಲಿ ಒಟ್ಟು 23,590 ಮತದಾರರಿದ್ದಾರೆ. ಅದರಲ್ಲಿ 12,072 ಪುರುಷ ಮತದಾರರು, 11518 ಮಹಿಳಾ ಮತದಾರರಿದ್ದಾರೆ ಎಂದು ಅವರು ತಿಳಿಸಿದ್ದಾರೆ.