ದ್ವಂದ್ವ ನಿಲುವು ಸರಿಯಲ್ಲ: ರಂಜನ್
ಮೂಡಿಗೆರೆ: ಪಟ್ಟಣ ಪಂಚಾಯತ್ನಲ್ಲಿ ಬಿಜೆಪಿ, ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳ ಮುಖಂಡರು ಕೆಜೆಪಿ ಅಭ್ಯರ್ಥಿಗಳ ವಿರುದ್ಧ ಅಪಪ್ರಚಾರದಲ್ಲಿ ತೊಡಗಿರುವುದರ ಕುರಿತು ಮತದಾರರು ದ್ವಂದ್ವ ನಿಲುವು ತಳೆಯಬಾರದು ಎಂದು ಕೆಜೆಪಿ ಜಿಲ್ಲಾ ಯುವ ಘಟಕದ ಅಧ್ಯಕ್ಷ ರಂಜನ್ ಅಜೀತ್ಕುಮಾರ್ ಮನವಿ ಮಾಡಿದ್ದಾರೆ.
ಈ ಕುರಿತು ಬುಧವಾರ ಹೇಳಿಕೆ ನೀಡಿದ್ದು, ಸ್ಥಳೀಯಾಡಳಿತ ಚುನಾವಣೆಯಲ್ಲಿ ಸೆಡ್ಡು ಹೊಡೆಯಲು ಸಜ್ಜಾಗಿರುವ ಕೆಜೆಪಿ ಅಭ್ಯರ್ಥಿಗಳು ಅತ್ಯಂತ ಬಲಾಡ್ಯರಾಗಿರುವುದನ್ನು ಮನಗಂಡಿರುವ ಈ ಮೂರೂ ಪಕ್ಷಗಳು ಹೊಂದಾಣಿಕೆ ಮಾಡಿಕೊಂಡಿರುವುದಾಗಿ ಹೇಳಿ ಮತದಾರರಲ್ಲಿ ಗೊಂದಲ ಮೂಡಿಸುತ್ತಿದ್ದಾರೆ. ಜಿಲ್ಲೆಯ ಯಾವುದೇ ಕ್ಷೇತ್ರಗಳಲ್ಲಿಯೂ ಕೆಜೆಪಿ ಅಭ್ಯರ್ಥಿಗಳು ಯಾರೊಂದಿಗೂ ಒಪ್ಪಂದ ಮಾಡಿಕೊಂಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಕೆಲವು ರಾಜಕೀಯ ಪಕ್ಷಗಳು ನಮ್ಮ ಅಭ್ಯರ್ಥಿಗಳನ್ನು ಎದುರಿಸಲು ಶಕ್ತಿಯಿಲ್ಲದಿರುವುದರಿಂದ ಬೇರೆ ಪಕ್ಷದೊಂದಿಗೆ ಒಪ್ಪಂದ ಮಾಡಿಕೊಂಡಿರುವ ಮಾತುಗಳಿವೆ. ಅದರ ಸತ್ಯಾಸತ್ಯತೆಗಳ ಕುರಿತು ತಿಳಿದಿಲ್ಲ. ಆ ಕುರಿತು ಮಾತನಾಡುವುದು ಸರಿಯಲ್ಲ ಎಂದು ಹೇಳಿದರು.