ನೀತಿ ಸಂಹಿತೆ ಉಲ್ಲಂಘನೆ: ಬಿಜೆಪಿ ವಿರುದ್ಧ ಆರೋಪ
ಚಿಕ್ಕಮಗಳೂರು: ಬಿಜೆಪಿಗೆ ನೀತಿ ಸಂಹಿತೆಯೂ ಇಲ್ಲ, ಯೂವುದೇ ಕಾರ್ಯಕ್ರಮವೂ ಇಲ್ಲ, ಹಣ, ಹೆಂಡ ಹಂಚಿ ಚುನಾವಣೆ ನಡೆಸುತ್ತಿದೆ ಎಂದು ಕೆಜೆಪಿ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಎಚ್.ಎಚ್. ದೇವರಾಜ್ ಆರೋಪಿಸಿದ್ದಾರೆ.
ಬಿಜೆಪಿ ಮುಖಂಡರು, ವಾರ್ಡ್ಗಳಲ್ಲಿ ಹೆಂಡ ಮತ್ತು ಹಣ ಹಂಚುತ್ತಿರುವ ಬಗ್ಗೆ ಜಿಲ್ಲಾಡಳಿತಕ್ಕೆ ದೂರು ಸಲ್ಲಿಸಲಾಗಿದೆ. ಆದರೆ, ಈವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಅಧಿಕಾರಿಗಳ ಉದಾಸೀನ ನೋಡಿದರೆ ಬಿಜೆಪಿಯ ಕೈಗೊಂಬೆಯಾಗಿದ್ದಾರೆಯೇ ಎಂಬ ಅನುಮಾನ ಬರುತ್ತಿದೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.
ಜಿಲ್ಲೆಯಲ್ಲಿ ಬಿಜೆಪಿ ವಾಮ ಮಾರ್ಗದಲ್ಲಿ ಚುನಾವಣೆ ನಡೆಸುತ್ತಿದೆ. ನಗರದ 27 ಮತ್ತು 29 ವಾರ್ಡ್ನಲ್ಲಿ ಕೆಜೆಪಿ ಅಭ್ಯರ್ಥಿಗಳಿಗೆ ಬಿಜೆಪಿ ಅಭ್ಯರ್ಥಿಗಳು ಹಾಗೂ ಅವರ ಹಿಂಬಾಲಕರು ಜೀವ ಬೆದರಿಕೆ ಹಾಕಿದ್ದಾರೆ. ಈ ಸಂಬಂಧ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ದೂರು ಸಲ್ಲಿಸಲಾಗಿದೆ ಎಂದು ಹೇಳಿದರು. ಕೆಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಿ.ಎಚ್. ಲೋಕೇಶ್ ಮಾತನಾಡಿ, ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರವನ್ನು ದತ್ತು ತೆಗೆದುಕೊಳ್ಳುವುದಾಗಿ ಯಡಿಯೂರಪ್ಪ ಅವರು ಕಳೆದ ವಿಧಾನಸಭಾ ಚುನಾವಣೆಯಲ್ಲಿ ಹೇಳಿದ್ದರು. ಅದರಂತೆ ಈ ಕ್ಷೇತ್ರಕ್ಕೆ ಕೋಟ್ಯಂತರ ರುಪಾಯಿ ಅನುದಾನ ಬಿಡುಗಡೆಯಾಗಿದೆ. ಈ ಹಣದಲ್ಲಿ ಕ್ಷೇತ್ರದಲ್ಲಿ ಕಳಪೆ ಕಾಮಗಾರಿಯಾಗಿವೆ ಎಂದು ಆರೋಪಿಸಿದರು.
ನಾವು ಅಭಿವೃದ್ಧಿಯ ವಿರೋಧಿಗಳಲ್ಲ. ಕಳಪೆ ಕಾಮಗಾರಿಗೆ ನಮ್ಮ ವಿರೋಧ ಇದೆ. ಬಿಜೆಪಿಯ ಹಲವು ಮಂದಿ ಗುತ್ತಿಗೆದಾರರು ಆಗಿದ್ದಾರೆ ಎಂದು ದೂಷಿಸಿದರು.
ಮತದಾನಕ್ಕೆ ಸಿದ್ಧತೆ
ಶೃಂಗೇರಿ: ಪಟ್ಟಣದ 11 ವಾರ್ಡ್ಗಳಿಗೆ ಗುರುವಾರ ಮತದಾನ ನಡೆಯಲಿದ್ದು, ಈಗಾಗಲೆ ಸಿದ್ಧತೆಗಳು ನಡೆದಿವೆ. ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ಶಾಂತಿಯುತ ಚುನಾವಣೆ ನಡೆಯುವಂತೆ ಕಟ್ಟು ನಿಟ್ಟಿನ ಕ್ರಮ ತೆಗೆದುಕೊಳ್ಳಲಾಗಿದೆ.
---