ಶಾಸಕ ಕುಮಾರಸ್ವಾಮಿ ರೋಡ್ ಶೋ
ಮೂಡಿಗೆರೆ: ಪಪಂ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳನ್ನು ಬೆಂಬಲಿಸುವಂತೆ ಶಾಸಕ ಕುಮಾರಸ್ವಾಮಿ ತಮ್ಮ ಬೆಂಬಲಿಗರೊಂದಿಗೆ ಬಧವಾರವೂ ರೋಡ್ ಶೋ ನಡೆಸಿದರು. ಗಂಗನಮಕ್ಕಿಯ ಗಣಪತಿ ದೇವಾಲಯದಲ್ಲಿ ಬಿಜೆಪಿ ಅಭ್ಯರ್ಥಿಗಳ ಪರವಾಗಿ ಪೂಜೆ ಸಲ್ಲಿಸಿದ ಶಾಸಕರು. 80 ಕ್ಕೂ ಅಧಿಕ ಕಾರ್ಯಕರ್ತರೊಂದಿಗೆ ಕಾಲ್ನಡಿಗೆ ಮೂಲಕ ಕೈ ಮುಗಿಯುತ್ತಾ ಮೌನವಾಗಿ ಗಂಗನಮಕ್ಕಿಯಿಂದ ಮೇಗಲ ಪೇಟೆಯ ಎಂಜಿಎಂ ಸರ್ಕಾರಿ ಆಸ್ಪತ್ರೆವರೆಗೆ, ದೊಡ್ಡಬೀದಿ, ಛತ್ರಮೈದಾನ, ಎಂ.ಜಿ.ರಸ್ತೆ ಹಾಗೂ ಕೆ.ಎಂ. ರಸ್ತೆಯ ಮೂಲಕ ರೋಡ್ ಶೋ ನಡೆಸಿ ಬಿಜೆಪಿ ಕಚೇರಿಯ ಬಳಿ ಸಮಾವೇಶ ಮುಕ್ತಾಯ ಗೊಳಿಸಲಾಯಿತು.
ಅಸಮಾಧಾನ: ಮಾಜಿ ಸಚಿವ ಬಿ.ಬಿ. ನಿಂಗಯ್ಯ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಪಿ. ಮನು ಪತ್ರಕರ್ತರೊಂದಿಗೆ ಮಾತನಾಡಿ, ಬಿಜೆಪಿ ಶಾಸಕರ ರೋಡ್ ಶೋ ಬಗ್ಗೆ ಅಸಮಧಾನ ವ್ಯಕ್ತಪಡಿಸಿ ಚುನಾವಣಾ ಆಯೋಗ ಆಡಳಿತ ಸಕಾರದ ಪರವಾಗಿ ಕಾರ್ಯ ನಿರ್ವಹಿಸುತ್ತಿದೆ.
ಚುನಾವಣೆಗೆ ಕೇವಲ 48 ಗಂಟೆಗಳಿರಬೇಕಾದರೆ ರೋಡ್ ಶೋ ನಡೆಸಬಾರದೆಂಬ ಚುನಾವಣೆ ನಿಯಮವಿದ್ದರೂ, ಅದನ್ನು ಉಲ್ಲಂಘನೆ ಮಾಡಿರುವ ಶಾಸಕರ ವಿರುದ್ದ ಕ್ರಮ ಜರುಗಿಸುವಂತೆ ಚುನಾವಣಾ ಆಯೋಗಕ್ಕೆ ದೂರು ನೀಡುವುದಾಗಿ ತಿಳಿಸಿದ್ದಾರೆ.
---
ಅಕ್ರಮ ಗುಡಿಸಲಿಗೆ ಬೆಂಕಿ: ಲಘು ಲಾಠಿ ಪ್ರಹಾರ
ಕ.ಪ್ರ.ವಾರ್ತೆ ಟಿ ಚಿಕ್ಕಮಗಳೂರು ಟಿ ಮಾ.5
ಖಾಲಿ ನಿವೇಶನದಲ್ಲಿ ರಾತ್ರೋರಾತ್ರಿ ನಿರ್ಮಾಣಗೊಂಡಿದ್ದ ಗುಡಿಸಲುಗಳಿಗೆ ಸಾರ್ವಜನಿಕರು ಬೆಂಕಿ ಹಚ್ಚಿದ್ದು, ಇದೇ ವೇಳೆಗೆ ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿರುವ ಘಟನೆ ಇಲ್ಲಿನ ಚಂದ್ರನಗರ ಬಡಾವಣೆಯಲ್ಲಿ ಬುಧವಾರ ಮಧ್ಯಾಹ್ನ ನಡೆದಿದೆ.
ಕುಮ್ಮಕ್ಕು: ಮತದಾರರನ್ನು ಸೆಳೆಯಲು ಬಿಜೆಪಿ ಅಭ್ಯರ್ಥಿ ಅಕ್ರಮವಾಗಿ ಗುಡಿಸಲು ನಿರ್ಮಾಣಕ್ಕೆ ಕುಮ್ಮಕ್ಕು ನೀಡಿದ್ದಾರೆಂದು ಪ್ರತಿಭಟನಾಕಾರರು ಆರೋಪಿಸಿದರು. ನಗರಸಭೆಯ 35ನೇ ವಾರ್ಡಿನ ವ್ಯಾಪ್ತಿಗೆ ಒಳಪಡಲಿರುವ ಚಂದ್ರನಗರ ಬಡಾವಣೆಯಲ್ಲಿ ಸುಮಾರು 200ಕ್ಕೂ ಹೆಚ್ಚು ಮನೆಗಳಿದ್ದು, ಇಲ್ಲೇ ಇರುವ ಸರ್ಕಾರಿ ಜಾಗದಲ್ಲಿ ಮಂಗಳವಾರ ರಾತ್ರಿ ಮೂರು ಗುಡಿಸಲು ನಿರ್ಮಾಣ ಮಾಡಲಾಗಿದೆ. ಬೆಳಗಾಗುತ್ತಿದ್ದಂತೆ ಅಕ್ರಮ ಗುಡಿಸಲು ಗಮನಿಸಿದ ಸ್ಥಳೀಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಘೋಷಣೆ: ತಮ್ಮ ಮಕ್ಕಳು, ಇಲ್ಲಿ ಮನೆಗಳು ನಿರ್ಮಾಣಕ್ಕೆ ಜಾಗ ಇಲ್ಲದೆ ಬೇರೆ ಕಡೆಗಳಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದಾರೆ. ಎಲ್ಲಿಂದಲೋ ಬಂದು ಇಲ್ಲಿ ಗುಡಿಸಲು ನಿರ್ಮಾಣ ಮಾಡಿರುವುದು ಸರಿಯಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು. ಗುಡಿಸಲು ನಿರ್ಮಾಣಕ್ಕೆ ಸ್ಥಳೀಯ ಬಿಜೆಪಿ ಅಭ್ಯರ್ಥಿಯ ಕುಮ್ಮಕ್ಕು ಕಾರಣ ಎಂದು ಪ್ರತಿಭಟನಾಕಾರರು ಆರೋಪಿಸಿ, ಅವರ ವಿರುದ್ಧ ಘೋಷಣೆ ಹಾಕಿದರು.
ಲಾಠಿ ಪ್ರಹಾರ: ಭಾರೀ ಸಂಖ್ಯೆಯಲ್ಲಿ ಸೇರಿದ್ದ ಜನರು ಗುಡಿಸಲುಗಳಿಗೆ ಬೆಂಕಿ ಹಚ್ಚಿದರು. ಈ ವಿಷಯ ತಿಳಿಯುತ್ತಿದ್ದಂತೆ ಇಬ್ಬರು ಪೊಲೀಸರು ಚಂದ್ರನಗರಕ್ಕೆ ಬರುವ ಮಾರ್ಗದಲ್ಲಿ ಗುಂಪಾಗಿ ನಿಂತಿದ್ದ ಯುವಕರನ್ನು ಚದುರಿಸಲು ಲಾಠಿ ಬೀಸಿದರು, ಆಗ ಕುಪಿತಗೊಂಡ ಮಹಿಳೆಯರು ಹಾಗೂ ಪುರುಷರು ಏಕಾಏಕಿ ಪೊಲೀಸರ ವಿರುದ್ಧ ತಿರುಗಿ ಬಿದ್ದರು. ಆಗ ಪರಿಸ್ಥಿತಿ ಅರಿತ ಪೊಲೀಸರು ಅಲ್ಲಿಂದ ಹೊರಟು ಹೋದರು. ಕೆಲ ಸಮಯದ ನಂತರ ಸುಮಾರು ಐದಾರೂ ವಾಹನಗಳಲ್ಲಿ ಸ್ಥಳಕ್ಕೆ ಬಂದ ಪೊಲೀಸರು ಜನರನ್ನು ಚದುರಿಸಲು ಲಘು ಲಾಠಿ ಪ್ರಹಾರ ನಡೆಸಿದರು. ಈ ವೇಳೆಯಲ್ಲಿ ಮಹಿಳೆಯರು ಸೇರಿದಂತೆ ಕೆಲವರಿಗೆ ಇದರ ಬಿಸಿ ತಾಕಿತು.
ಬಂದೋಬಸ್ತ್: ಇದರಿಂದ ಇನ್ನಷ್ಟು ಆಕ್ರೋಶಗೊಂಡ ಗ್ರಾಮಸ್ಥರು ಹಂಪಾಪುರ ರಸ್ತೆಯಲ್ಲಿ ಧರಣಿ ಆರಂಭಿಸಿದರು. ಆಗ ಹೆಚ್ಚಿನ ಸಂಖ್ಯೆಯಲ್ಲಿ ನೆರೆದಿದ್ದ ಪೊಲೀಸರು, ಗ್ರಾಮಸ್ಥರ ಮನಮೊಲಿಸಿ ವಾಪಸ್ ಕಳುಹಿಸಿದರು. ಇಷ್ಟೇಲ್ಲಾ ರದ್ಧಾಂತಕ್ಕೆ ಬಿಜೆಪಿ ಅಭ್ಯರ್ಥಿಯೇ ಕಾರಣ ಎಂದು ನಿವಾಸಿಗರಾದ ಗೌರಮ್ಮ ಅವರು ಸುದ್ದಿಗಾರರೊಂದಿಗೆ ಮಾತನಾಡುವಾಗ ಆರೋಪಿಸಿದರು. ಜಿಲ್ಲಾ ರಕ್ಷಣಾಧಿಕಾರಿ ಎನ್. ಶಶಿಕುಮಾರ್ ಅವರು ಸ್ಥಳಕ್ಕೆ ಭೇಟಿ ನೀಡಿದ್ದರು. ಮುಂಜಾಗ್ರತಾ ಕ್ರಮವಾಗಿ ಸ್ಥಳದಲ್ಲಿ ಹೆಚ್ಚಿನ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ.
ನಿರಾಕರಣೆ: ಇಲ್ಲಿ ಗುಡಿಸಲು ನಿರ್ಮಾಣಕ್ಕೂ ತಮಗೂ ಯಾವುದೇ ಸಂಬಂಧ ಇಲ್ಲ ಎಂದು 35ನೇ ವಾರ್ಡಿನ ಬಿಜೆಪಿ ಅಭ್ಯರ್ಥಿ ಕೆ.ಎಸ್. ಪುಷ್ಪರಾಜ್ ಹೇಳಿಕೆಯಲ್ಲಿ ಸ್ಪಷ್ಟನೆ ನೀಡಿದ್ದಾರೆ. ಹಲವಾರು ವರ್ಷಗಳಿಂದ ತಾವು ಇಲ್ಲೇ ವಾಸವಾಗಿದ್ದು, ಕಳೆದ ಬಾರಿ ನಗರಸಭಾ ಸದಸ್ಯರಾಗಿದ್ದಾಗ ಹಲವು ಅಭಿವೃದ್ಧಿ ಕೆಲಸಗಳು ಮಾಡಲಾಗಿದ್ದು, ಗುಡಿಸಲು ನಿರ್ಮಾಣಕ್ಕೆ ಸಂಬಂಧಿಸಿದಂತೆ ವಿನಾಕಾರಣ ತಮ್ಮ ಹೆಸರನ್ನು ಪ್ರಸ್ತಾಪ ಮಾಡಲಾಗಿದೆ. ಇದು ವಿರೋಧಿಗಳ ಅಪಪ್ರಚಾರ ಎಂದು ಹೇಳಿದ್ದಾರೆ.