ಚುನಾವಣೆ ಶಾಂತಿಯುತವಾಗಿ ಮುಕ್ತಾಯ
ಕಪ್ರ ವಾರ್ತೆ, ನರಸಿಂಹರಾಜಪುರ
ಪಟ್ಟಣ ಪಂಚಾಯ್ತಿಯ 11 ವಾರ್ಡ್ಗಳಲ್ಲಿ ಗುರುವಾರ ನಡೆದ ಚುನಾವಣೆ ಶಾಂತಿಯುತವಾಗಿ ಮುಕ್ತಾಯಗೊಂಡಿದ್ದು ಶೇ.80.26ರಷ್ಟು ಮತದಾನ ನಡೆದಿದೆ.
ಬೆಳಿಗ್ಗೆಯಿಂದಲೇ ಮತದಾರರು ಉತ್ಸಾಹದಿಂದ ಮತಗಟ್ಟೆಗೆ ಧಾವಿಸಿ ಮತ ನೀಡಿದರು. ಕೆಲವು ವಾರ್ಡ್ಗಳಲ್ಲಿ ಮಧ್ಯಾಹ್ನದ ಹೊತ್ತಿಗೆ ಶೇ.60ರಷ್ಟು ಮತದಾನವಾಗಿತ್ತು. ಮಧ್ಯಾಹ್ನದ ನಂತರ ಮತದಾನ ಮತ್ತಷ್ಟು ಬಿರುಸುಗೊಂಡಿದೆ. ಸಂಜೆ 5 ಗಂಟೆಯ ಒಳಗೆ ಎಲ್ಲಾ ಮತದಾರರು ಮತ ನೀಡಿದ್ದರು.
ಪಟ್ಟಣ ಪಂಚಾಯ್ತಿಯ 11 ವಾರ್ಡ್ಗಳಲ್ಲಿ 4994 ಮತಗಳಲ್ಲಿ 4008 ಮತದಾರರು ತಮ್ಮ ಮತ ಚಲಾಯಿಸಿದರು. 2025 ಪುರುಷರು ಹಾಗೂ 1983 ಮಹಿಳೆಯರು ಸೇರಿದ್ದಾರೆ. 3ನೇ ವಾರ್ಡ್ನ 348 ಮತದಾರರಲ್ಲಿ 311 ಮತದಾರರು ಮತ ಚಲಾಯಿಸಿದ್ದು 11 ವಾರ್ಡ್ಗಳ ಪೈಕಿ ಅತಿ ಹೆಚ್ಚು ( 89.37)ರಷ್ಟು ಮತ ದಾನವಾಗಿದೆ. 7ನೇ ವಾರ್ಡ್ನಲ್ಲಿ 645 ಮತದಾರರು ಇದ್ದು ಇಲ್ಲಿ 477 ಮತದಾರರು ಮಾತ್ರ ಮತದಾನ ಮಾಡಿದ್ದು ಅತಿ ಕಡಿಮೆ (74.88) ಮತದಾನ ಅಗಿದೆ.
ವಯೋವೃದ್ಧರ ಮತದಾನ: ಹಲವು ವಾರ್ಡ್ಗಳಲ್ಲಿ 90 ವರ್ಷ ದಾಟಿದ ವಯೋವೃದ್ದರು ಕುಟುಂಬದವರ ಸಹಾಯದಿಂದ ಮತಗಟ್ಟೆಗೆ ಬಂದು ಮತ ಚಲಾಯಿಸಿದರು. 2ನೇ ವಾರ್ಡ್ನ ಸಲೀಂ ಮಾಬಿ ಎಂಬ 92 ವರ್ಷದ ಅಜ್ಜಿಯನ್ನು ಅವರ ಕುಟುಂಬದವರು ಮತಗಟ್ಟೆಗೆ ಹೊತ್ತುಕೊಂಡು ಬಂದು ಮತ ಹಾಕಿಸಿದರು. ಇದೇ ಮತಗಟ್ಟೆಗೆ ಅಂಗವಿಕಲತೆ ಹೊಂದಿದ್ದ ಅಜ್ಜಿಯನ್ನು ಸಹ ಹೊತ್ತುಕೊಂಡು ಬಂದು ಮತ ಹಾಕಿಸಲಾಯಿತು. 95 ವರ್ಷದ ಪ್ಯಾರಿಜಾನ್ ಎಂಬ ಅಜ್ಜಿ ಮೊಮ್ಮಗನ ಸಹಾಯದಿಂದ ನಡೆದುಬಂದು ಮತ ಚಲಾಯಿಸಿದರು.
ಮಾತಿನ ಚಕಮಕಿ: ಚುನಾವಣೆಯ ಹಿಂದಿನ ದಿನವಾದ ಬುಧವಾರ ಮಧ್ಯರಾತ್ರಿ ಪಟ್ಟಣದ 11 ಹಾಗೂ 1ನೇ ವಾರ್ಡ್ನಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆದಿದೆ. 11ನೇ ವಾರ್ಡ್ನಲ್ಲಿ ವಾತಾವರಣ ಕಾವೇರುತ್ತಿದ್ದಂತೆ ಪೊಲೀಸರು ಮಧ್ಯ ಪ್ರವೇಶ ಮಾಡಿ ಎರಡು ಪಕ್ಷದ ಕಾರ್ಯಕರ್ತರನ್ನು ಮನೆಗೆ ಕಳುಹಿಸಿದ್ದಾರೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.