ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಮತಪೆಟ್ಟಿಗೆ ಸೇರಿದ ಅಭ್ಯರ್ಥಿಗಳ ಹಣೆಬರಹ

Parashurama
Updated On : 8 Mar 2013, 10:21 am

ಕ.ಪ್ರ.ವಾರ್ತೆ, ಚಿಕ್ಕಮಗಳೂರು, ಮಾ. 7
ಅನಿರೀಕ್ಷಿತವಾಗಿ ಬಂದ ನಗರ ಸ್ಥಳೀಯ ಸಂಸ್ಥೆ ಚುನಾವಣೆ ಗುರುವಾರದಂದು ಮುಕ್ತಾಯಗೊಂಡಿದ್ದು, ಮಾ. 11 ರಂದು ಮತ ಎಣಿಕೆಯ ಕಡೆ ಎಲ್ಲರ ಚಿತ್ತ ಹರಿದಿದೆ.
ಬೆಳಗ್ಗೆ 7 ಗಂಟೆಗೆ ಆರಂಭಗೊಂಡ ಮತದಾನ ಸಂಜೆ 5 ಗಂಟೆಗೆ ಅಂದರೆ 10 ಗಂಟೆಗಳ ಕಾಲ ಜಿಲ್ಲೆಯ 8 ನಗರ ಸ್ಥಳೀಯ ಸಂಸ್ಥೆಗಳಲ್ಲಿ ಶಾಂತಿಯುತವಾಗಿ ನಡೆದು ಮುಕ್ತಾಯಗೊಂಡಿತು.
ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭಗೊಂಡ ದಿನದಿಂದ ಇಷ್ಟು ದಿನಗಳವರೆಗೆ ಇದ್ದ ಪ್ರಚಾರದ ಅಬ್ಬರ, ಆರೋಪ ಪ್ರತ್ಯಾರೋಪಗಳಿಗೆ ಸಂಜೆ 5 ಗಂಟೆಗೆ ತೆರೆ ಬಿದ್ದಿತು.
148 ಅಭ್ಯರ್ಥಿಗಳು: ಜಿಲ್ಲೆಯ 8 ನಗರ ಸ್ಥಳೀಯ ಸಂಸ್ಥೆಗಳಲ್ಲಿ ಒಟ್ಟು 148 ವಾರ್ಡ್‌ಗಳಿದ್ದು, ಇವುಗಳಿಗೆ 686 ಅಭ್ಯರ್ಥಿಗಳು ಸ್ಪರ್ಧೆ ಮಾಡಿದ್ದಾರೆ. ಗುರುವಾರದಂದು ನಡೆದ ಚುನಾವಣೆಯಲ್ಲಿ ಶೇ. 76.5 ರಷ್ಟು ಮತದಾನವಾಗಿದೆ. ಮತ ಚಲಾವಣೆಯಲ್ಲಿ ಬೀರೂರು ಪ್ರಥಮ ಸ್ಥಾನದಲ್ಲಿದ್ದರೆ, ಚಿಕ್ಕಮಗಳೂರು ಕೊನೆಯ ಸ್ಥಾನದಲ್ಲಿದೆ.
ಚಿಕ್ಕಮಗಳೂರು ನಗರದಲ್ಲಿ ಶೇ. 67.67, ಕಡೂರು ಪುರಸಭೆಗೆ ಶೇ. 75.04, ಬೀರೂರು ಪುರಸಭೆ- ಶೇ. 81.37,  ತರೀಕೆರೆ ಪುರಸಭೆ ಶೇ. 80.28, ಮೂಡಿಗೆರೆ ಪಟ್ಟಣ ಪಂಚಾಯ್ತಿಗೆ ಶೇ. 72.54, ಕೊಪ್ಪ ಪಟ್ಟಣ ಪಂಚಾಯ್ತಿಗೆ ಶೇ. 78.56, ಶೃಂಗೇರಿ ಪಟ್ಟಣ ಪಂಚಾಯ್ತಿಯಲ್ಲಿ ಶೇ. 77.08 ಹಾಗೂ ಎನ್.ಆರ್. ಪುರ ಪಟ್ಟಣ ಪಂಚಾಯ್ತಿಯಲ್ಲಿ ಶೇ. 80.26 ರಷ್ಟು ಮತದಾನವಾಗಿದೆ.
ದೂರುಗಳು: ಬುಧವಾರದಂದು ಜಿಲ್ಲೆಯ ವಿವಿಧೆಡೆ ಈ ಚುನಾವಣೆಗೆ ಸಂಬಂಧಿಸಿದಂತೆ ವಿವಿಧ ಪೊಲೀಸ್ ಠಾಣೆಗಳಲ್ಲಿ  ಪ್ರಕರಣ ದಾಖಲಾಗಿವೆ. ಕೊಪ್ಪ ಪಟ್ಟಣದ 9ನೇ ವಾರ್ಡ್‌ನಿಂದ ಸ್ಪರ್ಧೆ ಮಾಡಿರುವ ಕಾಂಗ್ರೆಸ್ ಅಭ್ಯರ್ಥಿ ಪೂರ್ಣಿಮಾ ಅವರು ತಮಗೆ ಮಾನಹಾನಿ ಮಾಡುವ ಸುಳ್ಳು ಸುದ್ದಿಯ ಕರಪತ್ರ ಮುದ್ರಿಸಿ ಹಂಚಿದ್ದು, ಸಂಬಂಧಪಟ್ಟವರ ಮೇಲೆ ಕ್ರಮ ಕೈಗೊಳ್ಳುವಂತೆ ದೂರು ನೀಡಿದ್ದಾರೆ.
ಕಡೂರು ಪಟ್ಟಣದ ಮುದಿಯಪ್ಪ ಬಡಾವಣೆ ಬಳಿ ನಾಲ್ಕಾರು ಅಭ್ಯರ್ಥಿಗಳು ನೀಡಿರುವ ಹಣವನ್ನು ಹಂಚಿಕೊಳ್ಳುವ ವೇಳೆಯಲ್ಲಿ ಸ್ಥಳೀಯ ಪೊಲೀಸರು ರು. 8,100 ವಶಕ್ಕೆ ತೆಗೆದುಕೊಂಡಿದ್ದಾರೆ.
ಚಿಕ್ಕಮಗಳೂರು ನಗರದ ವಾರ್ಡ್ 31ರಲ್ಲಿ ರಾತ್ರಿ ಸುಮಾರು 11.45ರ ವೇಳೆಗೆ ಮಹಮದ್ ಮತ್ತು ಭಾಷಾ ಅವರು ಹೋಗುವ ವೇಳೆಯಲ್ಲಿ ರಾಜೇಶ್, ಧರ್ಮಶೆಟ್ಟಿ, ಕೃಷ್ಣ, ಮುರುಗೇಶ್, ಸತೀಶ್ ಅವರು ಅಡ್‌ಡಗಟ್ಟಿ ಹಲ್ಲೆ ನಡೆಸಿದ್ದು, ಇದೇ ವೇಳೆಗೆ ಸ್ಥಳಕ್ಕೆ ಆಗಮಿಸಿದ ಮಹಮದ್ ಅವರ ತಾಯಿ ನಬೀಸಾ ಅವರ ಮೇಲೂ ಹಲ್ಲೆ ನಡೆಸಿದ್ದಾರೆಂದು ದೂರಿನಲ್ಲಿ ತಿಳಿಸಲಾಗಿದೆ.
ಮಂದಗತಿ: ಬೆಳಗ್ಗೆ 7 ಗಂಟೆಗೆ ಮತದಾನ ಆರಂಭಗೊಂಡಿದ್ದು, 9 ಗಂಟೆ ವೇಳೆಗೆ ಜಿಲ್ಲೆಯ 8 ನಗರ ಸ್ಥಳೀಯ ಸಂಸ್ಥೆಗಳಲ್ಲಿ ಮತದಾನವಾಗಿದ್ದು ಶೇ. 11.79 ರಷ್ಟು ಮಾತ್ರ. ಪ್ರಾರಂಭದಲ್ಲಿ ಮತಗಟ್ಟೆಗಳ ಮುಂದೆ ಅಭ್ಯರ್ಥಿಗಳ ಪರವಾಗಿ ಮತಯಾಚನೆ ಮಾಡುವವರು ಮಾತ್ರ ಹೆಚ್ಚಿನ ಸಂಖ್ಯೆಯಲ್ಲಿ ಕಂಡು ಬಂದರು. ಮತದಾನ ಕೇಂದ್ರಗಳು ಖಾಲಿ ಖಾಲಿಯಾಗಿದ್ದವು.
ಬೆಳಗ್ಗೆ 9 ಗಂಟೆಯವರೆಗೆ ಚಿಕ್ಕಮಗಳೂರು ನಗರದಲ್ಲಿ ಶೇ. 8 ರಷ್ಟು ಮತದಾನವಾಗಿದ್ದರೆ, ಕಡೂರಿನಲ್ಲಿ ಶೇ. 12, ಬೀರೂರು- ಶೇ. 10, ತರೀಕೆರೆ- ಶೇ. 12, ಎನ್.ಆರ್.ಪುರ- ಶೇ. 7.53, ಕೊಪ್ಪ- ಶೇ. 16.08, ಶೃಂಗೇರಿ- ಶೇ. 12, ಮೂಡಿಗೆರೆಯಲ್ಲಿ ಶೇ. 16.77 ರಷ್ಟು ಮತದಾನವಾಗಿತ್ತು.
ಬೆಳಗ್ಗೆ 11 ಗಂಟೆಗೆ ಚಿಕ್ಕಮಗಳೂರು ನಗರದಲ್ಲಿ ಶೇ. 13.50 ರಷ್ಟು ಮತದಾನವಾಗಿತ್ತು. ಇನ್ನುಳಿದ ಸ್ಥಳೀಯ ಸಂಸ್ಥೆಗಳಿಗೆ ಹೋಲಿಕೆ ಮಾಡಿದರೆ ಇದು ಕಡಿಮೆ ಮತದಾನ. ಮಧ್ಯಾಹ್ನದ ವೇಳೆಗೆ ಮತಗಟ್ಟೆ ಕೇಂದ್ರಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮತದಾರರು ಸರದಿ ಸಾಲಿನಲ್ಲಿ ನಿಂತಿರುವುದು ಕಂಡು ಬಂದಿತು.
ಸಿ.ಟಿ. ರವಿ ಮತದಾನ: ಉನ್ನತ ಶಿಕ್ಷಣ ಸಚಿವ ಸಿ.ಟಿ. ರವಿ ಅವರು, ಭುವನೇಂದ್ರ ಶಾಲೆಯಲ್ಲಿ ಮತದಾನ ಮಾಡಿದರು. ಮಾಜಿ ಸಚಿವ ಸಿ.ಆರ್. ಸಗೀರ್ ಅಹಮ್ಮದ್ ಅವರು ಪೋರ್ಟರ್ ಪೇಟೆ ಶಾಲೆಯ ಮತಗಟ್ಟೆಯಲ್ಲಿ ಮತದಾನ ಮಾಡಿದರು.
ಮತಗಟ್ಟೆ ಕೇಂದ್ರದ 100 ಮೀಟರ್ ವ್ಯಾಪ್ತಿಯೊಳಗೆ ಮತಯಾಚನೆ ಮಾಡುವವರು ಕಂಡು ಬರುವ ಕಡೆಗಳಲ್ಲಿ ಸಂಚಾರಿ ದಳ ಪೊಲೀಸರು ದಿಢೀರ್ ಭೇಟಿ ನೀಡಿ ಅವರನ್ನು ಚದುರಿಸುತ್ತಿದ್ದರು. ಅತಿ ಸೂಕ್ಷ್ಮ ಹಾಗೂ ಸೂಕ್ಷ್ಮ ಮತಗಟ್ಟೆ ಕೇಂದ್ರಗಳ ಮೇಲೆ ಪೊಲೀಸರು ಕಣ್ಣಿಟ್ಟಿದ್ದರು.
ಮಾತಿನ ಚಕಮಕಿ: ಮತದಾನ ಮುಗಿಯುವ ವೇಳೆಗೆ ನಗರದ 5ನೇ ವಾರ್ಡ್‌ನ ವ್ಯಾಪ್ತಿಯಲ್ಲಿರುವ ಕೋಟೆ ಬಡಾವಣೆಯಲ್ಲಿ ಇಬ್ಬರು ಅಭ್ಯರ್ಥಿಗಳ ಬೆಂಬಲಿಗರ ನಡುವೆ ಮಾತಿನ ಚಕಮಕಿ ನಡೆಯಿತು. ಮತಯಾಚನೆಯಲ್ಲಿ ಪಾಲ್ಗೊಂಡಿದ್ದ ಯುವಕರು ನಾನ್‌ವೆಜ್ ಹೋಟೆಲ್‌ಗಳ ಮುಂದೆ ಗುಂಪು ಗುಂಪಾಗಿ ನಿಂತಿರುವುದು ಸಂಜೆ ಕಂಡು ಬಂದಿತು. ಬಾರ್ ಲೈನ್ ರಸ್ತೆಯಲ್ಲಿ ಕೆಲವು ಯುವಕರು ಬಿಜೆಪಿಗೆ ಜಯಕಾರ ಹಾಕುತ್ತಾ ಮನೆಗಳ ಕಡೆ ನಡೆದರು.
ಚುನಾವಣೆ ಮುಗಿಯಿತು. ಮುಂದೆ ಎಲ್ಲರ ಕಣ್ಣು ಫಲಿತಾಂಶದ ಮೇಲೆ. ಮಾ. 11 ರಂದು ಮಧ್ಯಾಹ್ನದ ವೇಳೆಗೆ ಜಿಲ್ಲೆಯ 148 ವಾರ್ಡ್‌ಗಳ ಫಲಿತಾಂಶ ಹೊರಬೀಳುವ ಸಾಧ್ಯತೆ ಇದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments