18 ಲಕ್ಷ ವೆಚ್ಚದಲ್ಲಿ ಶಾಲೆ ಕಟ್ಟಡ
ಕಪ್ರ ವಾರ್ತೆ, ಚಿಕ್ಕಮಗಳೂರು
ಹಿರೇಮಗಳೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿಸ್ತರಣಾ ಕಟ್ಟಡವನ್ನು 18 ಲಕ್ಷ ವೆಚ್ಚದಲ್ಲಿ ರೌಂಡ್ ಟೇಬಲ್ ತಂಡದ ಮೂಲಕ ನಿರ್ಮಿಸಿಕೊಡುವುದಾಗಿ ಚಿಕ್ಕಮಗಳೂರು ಕಾಪ್ಟರ್ ಅಧ್ಯಕ್ಷ ರೋಹಿತ್ ರಾಜಗೋಪಾಲ್ ಹೇಳಿದ್ದಾರೆ.
ರೌಂಡ್ ಟೇಬಲ್ ವಲಯಾಧ್ಯಕ್ಷರ ಭೇಟಿ ಹಿನ್ನೆಲೆಯಲ್ಲಿ ಹಿರೇಮಗಳೂರಿನಲ್ಲಿ ಶನಿವಾರ ನಡೆದ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಹಿರೇಮಗಳೂರು ಸರ್ಕಾರಿ ಪ್ರಾಥಮಿಕ ಶಾಲೆ ನಗರದ ಪ್ರವೇಶ ಜಾಗದಲ್ಲಿದ್ದು, ಇಲ್ಲಿ 100ಕ್ಕೂ ಹೆಚ್ಚು ಮಕ್ಕಳಿದ್ದು, ವಿಶಾಲವಾದ ಆಟದ ಮೈದಾನವೂ ಇರುವ ಹಿನ್ನೆಲೆಯಲ್ಲಿ ಪ್ರಸಕ್ತ ಸಾಲಿನ ಶಾಲಾ ಕೊಠಡಿಯನ್ನು ನಿರ್ಮಿಸಲು ತೀರ್ಮಾನಿಸಲಾಗಿದೆ ಎಂದರು.
ಪ್ರೋತ್ಸಾಹಿಸುವ ಉದ್ದೇಶ: ಈ ಹಿಂದೆ ಆಜಾದ್ ಪಾರ್ಕ್ ಶಾಲೆ ನಂತರ ಆಶಾಕಿರಣಕ್ಕೆ ನೆರವು ನೀಡಿದ್ದು, ಬಸವನಹಳ್ಳಿ ಶಾಲೆಗೆ ಈ ಕಲಿಕೆ ಉಪಕರಣಗಳನ್ನು ಕೊಡಿಸಲಾಗಿದೆ. ಗಾಲ್ಫ್ ಪಂದ್ಯಾವಳಿಯನ್ನು ಆಯೋಜಿಸುವ ಮೂಲಕ ಹಣ ಸಂಗ್ರಹಿಸಿ ಸದಸ್ಯರ ದೇಣಿಗೆಯನ್ನೂ ಸೇರಿಸಿ ಶೈಕ್ಷಣಿಕ ಚಟುವಟಿಕೆಗಳನ್ನು ಪ್ರೋತ್ಸಾಹಿಸುವ ಉದ್ದೇಶ ಹೊಂದಲಾಗಿದೆ ಎಂದು ಹೇಳಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಜಿ. ನಾಗೇಶ್ ಮಾತನಾಡಿ, ತಾಲೂಕಿನಲ್ಲಿ ಸುಮಾರು 500 ಶಾಲೆಗಳಿದ್ದು, ಅದರಲ್ಲಿ 350 ಸರ್ಕಾರಿ ಶಾಲೆಗಳಿವೆ. ಸರ್ಕಾರ ಸರ್ವ ಶಿಕ್ಷಣ ಅಭಿಯಾನದ ಅಡಿ ಸಾಕಷ್ಟು ನೆರವು ನೀಡುತ್ತಿದೆ. ರೌಂಡ್ ಟೇಬಲ್ ತಂಡ ಶಿಕ್ಷಣ ಪ್ರೀತಿ ತೋರಿಸಿ ಸಮಾಜಮುಖಿಯಾಗಿ ಕಾರ್ಯನಿರ್ವಹಿಸುತ್ತಿರುವುದು ಅಭಿನಂದನೀಯ. ತಾಲೂಕಿನ ಕೆಲ ಶಾಲೆಗಳಿಗೆ ಕುಡಿಯುವ ನೀರು, ಕಂಪ್ಯೂಟರ್, ವಿದ್ಯುತ್ ವ್ಯವಸ್ಥೆ ಮತ್ತಿತರ ಅಗತ್ಯತೆಗಳ ಪೂರೈಸಲು ಸಹಕಾರ ನೀಡಬೇಕೆಂದು ಮನವಿ ಮಾಡಿದರು.
ಕಟ್ಟಡ ವಿನ್ಯಾಸಗಾರ ರೌಂಡ್ ಟೇಬಲ್ ಖಜಾಂಚಿಯೂ ಆಗಿರುವ ಅಜಯ್, ಎರಡು ತರಗತಿಗಳ ಕಟ್ಟಡವನ್ನು 13 ಚದರ ಅಡಿ ಕಟ್ಟಿ ವಿಸ್ತರಣೆಗೂ ಅವಕಾಶವಿರುವಂತೆ ವಿನ್ಯಾಸಗೊಳಿಸಲಾಗಿದೆ. 25್ಗ20 ಅಡಿ ವಿಸ್ತೀರ್ಣದ ಎರಡು ಕೊಠಡಿಗಳು ಸಿದ್ಧವಾಗಲಿದೆ ಎಂದರು.
ರೌಂಡ್ ಟೇಬಲ್ ವಲಯಾಧ್ಯಕ್ಷ ಮನೋಜ್ ಮೆಹರಾ ಮಾತನಾಡಿ, ಮಕ್ಕಳೆ ದೇಶದ ಭವಿಷ್ಯ. ಮಕ್ಕಳು ಚೆನ್ನಾಗಿ ಆಡಿ, ಓದಿ, ಸುಸಂಸ್ಕೃತರಾಗಿ ಉತ್ತಮ ಪ್ರಜೆಗಳಾಗಿ ಉಪಕಾರಿಗಳಾಗಿ ಬಾಳಬೇಕೆಂದರು.
ವಲಯ ಉಪಾಧ್ಯಕ್ಷ ಆನಂದರಾಮ್ ಮಾತನಾಡಿದರು. ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಎಚ್.ಎಸ್. ಮಲ್ಲೇಶ್, ನಗರಸಭಾ ಮಾಜಿ ಸದಸ್ಯ ಜಾನಯ್ಯ, ಶ್ರೀದೇವಿ ಯುವಕ ಸಂಘದ ಅಧ್ಯಕ್ಷ ಮೋಹನ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ರೌಂಡ್ ಟೇಬಲ್- 164 ಉಪಾಧ್ಯಕ್ಷ ಕೆ.ಎನ್. ಚಂಚಲ್, ಕಾರ್ಯದರ್ಶಿ ನಕುಲ್, ನಿಕಟಪೂರ್ವ ಅಧ್ಯಕ್ಷ ಪ್ರವೀಣ್ ಉಪಸ್ಥಿತರಿದ್ದರು. ಶಿಕ್ಷಕ ಪುಟ್ಟಸ್ವಾಮಿ ಸ್ವಾಗತಿಸಿ, ಮುಖ್ಯ ಶಿಕ್ಷಕ ಚನ್ನಯ್ಯ ವಂದಿಸಿದರು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.