ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ವಿರೋಧಿಗಳ ಟೀಕೆಗೆ ಅಭಿವೃದ್ಧಿ ಉತ್ತರ

Parashurama
Updated On : 10 Mar 2013, 11:51 am

ಕ.ಪ್ರ.ವಾರ್ತೆ, ಚಿಕ್ಕಮಗಳೂರು, ಮಾ. 9
ವಿರೋಧಿಗಳ ಟೀಕೆಗೆ ನಾವು ಕೇತ್ರದಲ್ಲಿ ಮಾಡಿರುವ ಅಭಿವೃದ್ಧಿಯೇ ಉತ್ತರ ಎಂದು ಉನ್ನತ ಶಿಕ್ಷಣ ಸಚಿವ ಸಿ.ಟಿ. ರವಿ ಹೇಳಿದ್ದಾರೆ.
ಈಶ್ವರಹಳ್ಳಿ, ಗಾಳಿಹಳ್ಳಿ, ಕಳಸಾಪುರ ಡಾಂಬರೀಕರಣ ರಸ್ತೆಗೆ ಗಾಳಿಹಳ್ಳಿಯಲ್ಲಿ ಶನಿವಾರ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ಈ ಹಿಂದೆ ಅಧಿಕಾರ ನಡೆಸಿದವರು ಗ್ರಾಮಗಳಲ್ಲಿ ಜಾತಿ ವಿಷ ಬೀಜ ಬಿತ್ತಿ ಗ್ರಾಮದ ನೆಮ್ಮದಿ ಕೆಡಿಸಿ ಗ್ರಾಮಸ್ಥರಲ್ಲಿ ದ್ವೇಷದ ವಾತಾವರಣ ನಿರ್ಮಿಸಿದ್ದರು. ಇಂದು ನಾವು ಅಭಿವೃದ್ಧಿ  ಮೂಲಕ ಜನರ ನಡುವೆ ಸ್ನೇಹದ ಸೇತುವೆ ಕಟ್ಟಿದ್ದೇವೆ ಎಂದರು.
ಬಲಿಷ್ಠ ರಾಷ್ಟ್ರ: ಗ್ರಾಮೀಣ ಜನರು ಸ್ವಾವಲಂಬಿಗಳಾಗಿ ಸದೃಢರಾದಲ್ಲಿ ಮಾತ್ರ ಬಲಿಷ್ಠ ರಾಷ್ಟ್ರ ನಿರ್ಮಾಣ ಸಾಧ್ಯ. ನಮ್ಮ ಸರ್ಕಾರ ಅಭಿವೃದ್ಧಿ ಕಾರ್ಯದ ಮೂಲಕ ಇಂತಹ ಬಲಿಷ್ಠ ರಾಷ್ಟ್ರ ನಿಮಾರ್ಣಕ್ಕೆ ಬದ್ಧವಾಗಿದೆ ಎಂದು ಹೇಳಿದರು.
ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 25 ಗ್ರಾಮಗಳ ಸಂಪರ್ಕ ಸೇತುವೆಯಾಗಿ ರಸ್ತೆ ಕಾಮಗಾರಿಯನ್ನು ಶೀಘ್ರವೇ ಪ್ರಾರಂಭಿಸಲಾಗುವುದು. ನಮ್ಮ ಗ್ರಾಮ ನಮ್ಮ ರಸ್ತೆ ಯೋಜನೆಯಡಿ ರಾಜ್ಯ ಸರ್ಕಾರ ಸಂಪೂರ್ಣ ಹಣ ನೀಡಿದೆ. ಈ ರಸ್ತೆ ಕಾಮಗಾರಿಯನ್ನು ರು. 13 ಕೋಟಿ ವೆಚ್ಚದಲ್ಲಿ ಮಾಡಲಾಗಿದೆ. ಸುವರ್ಣ  ಗ್ರಾಮದ 3 ಮತ್ತು 4ನೇ ಹಂತದ ಕೆಲಸಗಳು ಶೀಘ್ರವೇ ಪ್ರಾರಂಭವಾಗುತ್ತವೆ ಎಂದರು.
ಬಿಜೆಪಿ ಸರ್ಕಾರದ ಅವಧಿಯಲ್ಲಿ ನಡೆದ ಜನೋಪಯೋಗಿ ಕೆಲಸಗಳು ಯಾವುದೇ ಸರ್ಕಾರದ ಅವಧಿಯಲ್ಲಿ  ನಡೆದಿರಲಿಲ್ಲ. ಮುಂಬರುವ ಚುನಾವಣೆಯಲ್ಲಿ ಅಭಿವೃದ್ಧಿ ಗುರುತಿಸಿ, ಅಭ್ಯರ್ಥಿಗಳನ್ನು ಚುನಾಯಿಸಬೇಕು ಎಂದು ಮನವಿ ಮಾಡಿದರು.
ಟೆಕ್ಸ್‌ಟೈಲ್ಸ್ ಪಾರ್ಕ್: ಈ ಭಾಗದಲ್ಲಿ ನಿರುದ್ಯೋಗ ಸಮಸ್ಯೆ ಬಗೆಹರಿಸಲು ಟೆಕ್ಸ್‌ಟೈಲ್ಸ್ ಪಾರ್ಕ್ ನಿರ್ಮಾಣ ನನ್ನ ಕನಸಾಗಿದೆ. ಅದನ್ನು ಕಲ್ಪಿಸಿ ನಿರುದ್ಯೋಗಿಗಳಿಗೆ ಉದ್ಯೋಗ ಸೃಷ್ಟಿಸಲಾಗುವುದು. ಯಾವುದೇ ಗ್ರಾಮಗಳಿಗೂ ಅನುದಾನದ ಕೊರತೆ ಮಾಡದೇ ಅಭಿವೃದ್ಧಿ ಮಾಡಲಾಗಿದೆ ಎಂದರು.
ಜಿಪಂ ಅಧ್ಯಕ್ಷೆ ರೇಖಾ ಹುಲಿಯಪ್ಪಗೌಡ ಮಾತನಾಡಿ, ಸಮಗ್ರ ಗ್ರಾಮೀಣ ಅಭಿವೃದ್ಧಿ ಕಲ್ಪನೆಯಿಂದ ಅಧಿಕಾರಕ್ಕೆ ಬಂದ ಬಿಜೆಪಿ ಸರ್ಕಾರ ಗ್ರಾಮಗಳ ಅಭಿವೃದ್ಧಿಗೆ ಪಣತೊಟ್ಟು ಮಾದರಿ ಗ್ರಾಮಗಳಾಗಿ ಹಳ್ಳಿಗಳನ್ನು ಅಭಿವೃದ್ಧಿಗೊಳಿಸಿದ್ದೇವೆ. ಜಿಪಂನಿಂದ ಕುಡಿಯುವ ನೀರಿಗೆ ಸೂಕ್ತ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಸಾದರಹಳ್ಳಿ- ಕ್ಯಾತನಬೀಡು, ಕಾಮೇನಹಳ್ಳಿ- ದೊಡ್ಡಿಬೀರನಹಳ್ಳಿ, ಚಿಕ್ಕದೇವನೂರು ರಸ್ತೆ, ಬೋಳನಹಳ್ಳಿ ಗ್ರಾಮದ ರಸ್ತೆ, ಚಂದ್ರಶೇಖರಪುರ, ನಾಗೇನಹಳ್ಳಿ, ಪಿಳ್ಳೇನಹಳ್ಳಿ, ಕಲ್ಲೊಳೆ, ಹಿರೇಬಿದರೆ, ಅರವಿಂದ ನಗರ, ಗುಡ್ಡೇನಹಳ್ಳಿ, ತೊಗರಿಹಂಕಲ್ ರಸ್ತೆ ಡಾಂಬರೀಕರಣಕ್ಕೆ ಗುದ್ದಲಿ ಪೂಜೆ ನೇರವೇರಿಸಲಾಯಿತು.
ಈ ಸಂದರ್ಭದಲ್ಲಿ ಜಿಪಂ ಕೈಗಾರಿಕಾ ಮತ್ತು ಕೃಷಿ ಸ್ಥಾಯಿ ಸಮಿತಿ ಅಧ್ಯಕ್ಷ ನಿರಂಜನ್, ಜಿಪಂ ಮಾಜಿ ಅಧ್ಯಕ್ಷೆ ಪ್ರಫುಲ್ಲ ಮಂಜುನಾಥ್, ಸದಸ್ಯ ಕಲ್ಮುರಡಪ್ಪ, ಜೆ.ಡಿ. ಲೋಕೇಶ್, ಗ್ರಾಪಂ ಅಧ್ಯಕ್ಷೆ ಈರಮ್ಮ ಈಶ್ವರಪ್ಪ, ಎ.ಪಿ.ಎಂ.ಸಿ. ಅಧ್ಯಕ್ಷ ರವೀಂದ್ರ, ಗ್ರಾಪಂ ಉಪಾಧ್ಯಕ್ಷ ಶಿವಾನಂದ್, ತಾಪಂ ಅಧ್ಯಕ್ಷ ಬಸವರಾಜ್, ಈಶ್ವರಹಳ್ಳಿ ಮಹೇಶ್ ಮೊದಲಾದವರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments