ಜನಾದೇಶಕ್ಕೆ ತಲೆ ಬಾಗುವೆ
ಕ.ಪ್ರ ವಾರ್ತೆ, ಮೂಡಿಗೆರೆ, ಮಾ.13
ಪಟ್ಟಣ ಪಂಚಾಯ್ತಿ ಫಲಿತಾಂಶ ಹೊರ ಬಂದಿದ್ದು, ಜನಾದೇಶದ ಎದುರು ಶಿರ ಭಾಗುವುದಾಗಿ ಕೆಜೆಪಿ ಯುವ ಘಟಕದ ಜಿಲ್ಲಾಧ್ಯಕ್ಷ ರಂಜನ್ ಅಜೀತ್ ಕುಮಾರ್‌ಕೃತಜ್ಞತೆ ಸಲ್ಲಿಸಿದ್ದಾರೆ. ಈ ಕುರಿತು ಅವರು ಹೇಳಿಕೆ ನೀಡಿದ್ದು, ಮತದಾನದ ದಿನದಂದು ಯುವಜನರು, ಮಹಿಳೆಯರು ಸೇರಿದಂತೆ ಜಿಲ್ಲೆಯ ಮತದಾರರು ಉತ್ಸಾಹದಿಂದ ಮತದಾನದಲ್ಲಿ ಬಾಗಿಯಾಗಿರುವುದಕ್ಕೆ ಪಕ್ಷ ಅಭಾರಿಯಾಗಿದೆ.
ಜನಾದೇಶದ ಎದುರು ನಾವೆಲ್ಲರೂ ತಲೆ ಬಾಗಲೇಬೇಕು. ಭವಿಷ್ಯದ ಚುನಾವಣೆ ಎದುರಿಸಲು ಪಕ್ಷ ಸಜ್ಜಾಗುವತ್ತ ಹೆಜ್ಜೆ ಹಾಕಲಿದೆ ಎಂದು ಹೇಳಿದ್ದಾರೆ.
ಟೆಲಿಕಾಂ ಅದಾಲತ್
ಕ.ಪ್ರ ವಾರ್ತೆ, ಚಿಕ್ಕಮಗಳೂರು, ಮಾ. 13
ಭಾರತ ಸಂಚಾರ ನಿಗಮ ನಿಯಮಿತ ವತಿಯಿಂದ ಮಾರ್ಚ್ ಮಾಹೆಯ ಕೊನೆಯ ವಾರದಲ್ಲಿ ಟೆಲಿಕಾಂ ಅದಾಲತ್ ಅನ್ನು ಆಯೋಜಿಸಲಾಗಿದೆ. ಗ್ರಾಹಕ ಬಂಧುಗಳು ತಮ್ಮ ಪಿರ್ಯಾದುಗಳನ್ನು ಮಾ. 25 ರೊಳಗೆ ಟೆಲಿಕಾಂ ಅದಾಲತ್‌ಗೆ ಸಲ್ಲಿಸಬಹುದಾಗಿದ್ದು, ಹೆಚ್ಚಿನ ಮಾಹಿತಿಗಾಗಿ ಸಾರ್ವಜನಿಕ ಸಂಪರ್ಕಾಧಿಕಾರಿ, ಜಿಲ್ಲಾ ಮಹಾ ಪ್ರಬಂಧಕರ ಕಚೇರಿ, ಬಿ.ಎಸ್.ಎನ್.ಎಲ್. ಬೆಲ್ಟ್ ರಸ್ತೆ, ಚಿಕ್ಕಮಗಳೂರು ಇವರನ್ನು ಸಂಪರ್ಕಿಸಲು ಪ್ರಕಟಣೆ ತಿಳಿಸಿದೆ.
19ಕ್ಕೆ ರಥೋತ್ಸವ
ಕ.ಪ್ರ ವಾರ್ತೆ, ಶೃಂಗೇರಿ, ಮಾ. 13
ಇಲ್ಲಿನ ಶ್ರೀ ಶಾರದಾ ಪೀಠದ ಶಕ್ತಿ ದೇವತೆಗಳಲ್ಲಿ ಒಂದಾಗಿರುವ ಹರಾವರಿ ದುರ್ಗಾಂಬಾ ಮಹಾರಥೋತ್ಸವ ಮಾರ್ಚ್ 19 ರಂದು ನಡೆಯಲಿದೆ. ರಥೋತ್ಸವಾಂಗ ವಿಶೇಷ ಪೂಜೆ, ಹೋಮ ಹವನಗಳು ಸೇರಿದಂತೆ ಧಾರ್ಮಿಕ ಕಾರ್ಯಕ್ರಮಗಳು ನೆರವೇರಲಿದೆ. ಮಾರನೇ ದಿನ ಸಂದಾನೋತ್ಸವ, ಅದರ ಮಾರನೇ ದಿನ ಅವಭೃತ ನಡೆಯಲಿದೆ.
ಜನ ಸಂಪರ್ಕ ಸಭೆ
ಕ.ಪ್ರ ವಾರ್ತೆ, ಕೊಪ್ಪ ಮಾ13
ಮೆಸ್ಕಾಂ ಇಲಾಖೆಯಿಂದ ಮಾ.16 ರಂದು ಬೆಳಿಗ್ಗೆ 10 ಗಂಟೆಗೆ ಕೊಪ್ಪ ಮೆಸ್ಕಾಂ ಕಚೇರಿಯ ಆವರಣದಲ್ಲಿ ತಾಲೂಕು ಮಟ್ಟದ ಜನ ಸಂಪರ್ಕ ಸಭೆಯನ್ನು ಕರೆದಿದ್ದು, ತಾಲೂಕಿನ ವಿದ್ಯುತ್ ಬಳಕೆದಾರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ತಮ್ಮ ಅಹವಾಲು ಸಲ್ಲಿಸಬಹುದು ಎಂದು ಮೆಸ್ಕಾಂ ಸಹಾಯಕ ಇಂಜಿನಿಯರ್ ತಿಳಿಸಿದ್ದಾರೆ.
ವಿಪ್ರ ಸಮ್ಮೇಳನ
ಕ.ಪ್ರ ವಾರ್ತೆ, ಶೃಂಗೇರಿ, ಮಾ. 13
ತಾಲೂಕು ಬ್ರಾಹ್ಮಣ ಮಹಾ ಸಭಾದ ಆಶ್ರಯಲ್ಲಿ ಇಲ್ಲಿ ಶ್ರೀ ವಿದ್ಯಾಭಾರತೀ ಭವನದಲ್ಲಿ ಮಾರ್ಚ್ 30 ಮತ್ತು 31 ರಂದು ಶೃಂಗೇರಿ ಕ್ಷೇತ್ರ ಮಟ್ಟದ ವಿಪ್ರ ಸಮ್ಮೇಳನ ಆಯೋಜಿಸಲಾಗಿದೆ. ಈ ಸಮ್ಮೇಳನದಲ್ಲಿ ವಿವಿಧ ಗೋಷ್ಠಿಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು, ಸಾಧಕರಿಗೆ ಅಭಿನಂದನೆ, ಸಮುದಾಯದ ಹಿರಿಯರಿಗೆ ಸನ್ಮಾನ ಹೀಗೆ ಹಲವಾರು ಕಾರ್ಯಕ್ರಮಗಳು ನಡೆಯಲಿದೆ.