ತಪ್ಪಿತಸ್ಥರ ಬಂಧನಕ್ಕೆ ಒತ್ತಾಯ
ಕ.ಪ್ರ.ವಾರ್ತೆ ಮೂಡಿಗೆರೆ ಮಾ.13
ಸಂಘಟನೆಯೊಂದರ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಗಿದ್ದ ಪ್ರತಿಭಟನೆಯಲ್ಲಿ ತಮ್ಮ ಕುರಿತು ಅಣುಕು ಶವಯಾತ್ರೆ ನಡೆಸಿದ್ದರಿಂದ ಮಾನಸಿಕ ಆಘಾತಕ್ಕೊಳಗಾದ ಗ್ರಾಪಂ ಅಧ್ಯಕ್ಷರೊಬ್ಬರು ಆಸ್ಪತ್ರೆಗೆ ದಾಖಲಾಗಿರುವ ಘಟನೆ ಕಳಸದಲ್ಲಿ ನಡೆದಿದೆ.
ಕಳಸ ಗ್ರಾಪಂ ಅಧ್ಯಕ್ಷೆ ಉಷಾ ಮಾನಸಿಕ ಆಘಾತಕ್ಕೊಳಗಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವವರು.
ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಕಳಸ ಗ್ರಾಪಂ ಎದುರು ಕಳಸ ಆಟೋ ಮಾಲಕರ ಮತ್ತು ಚಾಲಕರ ಸಂಘ ಪ್ರತಿಭಟನೆ ಹಮ್ಮಿಕೊಂಡಿತ್ತು. ಈ ಪ್ರತಿಭಟನೆಯಲ್ಲಿ ಉರುಳು ಸೇವೆ, ಅರೆಬೆತ್ತಲೆ ಧರಣಿ ಣಿ ಜೊತೆಗೆ ಗ್ರಾಪಂ ಅಧ್ಯಕ್ಷರ ಅಣುಕು ಶವಯಾತ್ರೆಯನ್ನೂ ಮಾಡಿ ದಹಿಸಲಾಗಿತ್ತು.
ಈ ಸಂದರ್ಭದಲ್ಲಿ ಕಳಸದ ಮಹಿಳಾ ಸಂಘಟನೆಗಳು ಪ್ರತಿಭಟನೆಗೆ ಅಡ್ಡಿ ಪಡಿಸಲು ಮುಂದಾಗಿದ್ದರು. ಆಗ ಪೊಲೀಸರು ಮಧ್ಯಸ್ಥಿಕೆ ವಹಿಸಿ ಕಳಸ ಗ್ರಾಪಂಗೆ ಮನವಿ ಕೊಡಿಸುವುದರ ಮುಖಾಂತರ ಪ್ರತಿಭಟನೆ ಹಿಂದೆಗೆದುಕೊಳ್ಳಲಾಗಿತ್ತು.
ಸಭೆ ನಡೆಸುವ ಭರವಸೆ: ಆದರೆ ಕಳಸ ಆಟೋ ಚಾಲಕ ಮತ್ತು ಮಾಲಕರು ಮಾಡುತ್ತಿರುವ ಪ್ರತಿಭಟನೆ ನನ್ನ ವ್ಯಾಪ್ತಿಗೆ ಸಂಬಂಧಿಸಿದ ವಿಷಯ ಅಲ್ಲದಿರುವುದರಿಂದ ಯಾವುದೇ ಕ್ರಮ ಕೈಗೊಳ್ಳಲು ಸಾಧ್ಯವಿಲ್ಲವೆಂಬ ಹೇಳಿಕೆ ನೀಡುತ್ತಾ ಬಂದಿದ್ದ ಗ್ರಾಪಂ ಅಧ್ಯಕ್ಷೆ ಉಷಾ, ಈ ವಿಷಯಕ್ಕೆ ಸಂಬಂಧಿಸಿದಂತೆ ಆಟೋ ಚಾಲಕ ಮಾಲೀಕರನ್ನು ಕರೆದು ಸಭೆ ಕರೆದು ಚರ್ಚಿಸುವ ಭರವಸೆಯನ್ನೂ ನೀಡಿದ್ದರು.
ಈ ಪ್ರತಿಭಟನೆ ರಾಜಕೀಯ ಪಿತೂರಿಯಿಂದ ನಡೆದಿದ್ದು, ಹೇಗಾದರೂ ಮಾಡಿ ನನ್ನನ್ನು ರಾಜಿನಾಮೆ ಕೊಡಿಸುವ ಉದ್ದೇಶದಿಂದ ಪ್ರತಿಭಟನೆ ನಡೆಸಿದ್ದಾರೆ. ಅಲ್ಲದೆ ಸಾರ್ವಜನಿಕವಾಗಿ ಅವಹೇಳನಕಾರಿಯಾಗಿ ಭಾಷಣ ಮಾಡಿದ್ದಾರೆ ಇದರಿಂದ ಮಾನಸಿಕ ಜರ್ಜರಿತಳಾಗಿದ್ದೇನೆ ಎಂದು ಕಳಸ ಪೋಲೀಸ್ ಠಾಣೆಗೆ ದೂರನ್ನು ಕೂಡ ನೀಡಿದ್ದರು.
ದೌರ್ಜನ್ಯದ ಆರೋಪ: ಆದರೆ ಇದೀಗ ಗ್ರಾಪಂ ಅಧ್ಯಕ್ಷೆ ಉಷಾ ಈ ಪ್ರತಿಭಟನೆಯಿಂದ ಮಾನಸಿಕವಾಗಿ ಆಘಾತಕ್ಕೊಳಗಾಗಿ ಕಳಸ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಸಂಬಂಧ ಪತ್ರಿಕೆಯೊಂದಿಗೆ ಮಾತನಾಡಿದ ಅವರು, ಕೆಲ ದಿನಗಳಿಂದ ಅಣುಕು ಶವಯಾತ್ರೆ ಮಾಡಿದ್ದೂ ಅಲ್ಲದೆ ಸಾರ್ವಜನಿಕವಾಗಿ ನನ್ನನ್ನು ನಿಂದಿಸಿದ್ದಾರೆ. ಒಬ್ಬ ಮಹಿಳೆ ಮೇಲೆ ದೌರ್ಜನ್ಯ ಮಾಡುತ್ತಿದ್ದು, ಕೂಡಲೇ ತಪ್ಪಿತ್ತಸ್ಥರನ್ನು ಬಂಧಿಸಿ ಮಹಿಳೆಯರ ಮೇಲೆ ಆಗುತ್ತಿರುವ ಅನ್ಯಾಯ ತಡೆಯಬೇಕು ಎಂದರು.
ಮಹಿಳಾ ಸಂಘಟನೆಯ ಅಧ್ಯಕ್ಷೆ ಮುಮ್ತಾಜ್ ಬೇಗಂ ಮಾತನಾಡಿ ಮಹಿಳೆಯರಿಗೆ ರಕ್ಷಣೆಯೇ ಇಲ್ಲದಂತ ಪರಿಸ್ಥಿತಿ ಕಳಸ ಪಟ್ಟಣದಲ್ಲಿ ಒದಗಿ ಬಂದಿದೆ. ಗ್ರಾಪಂ ಅಧ್ಯಕ್ಷೆ ಉಷಾ ಅವರ ಮೇಲೆ ಸಾರ್ವಜನಿಕ ನಿಂದನೆ ಮಾಡುವುದರೊಂದಿಗೆ, ಪೊಲೀಸರು ರಕ್ಷಣೆ ನೀಡುವಲ್ಲಿ ವಿಫಲರಾಗಿದ್ದಾರೆ. ಬದುಕಿರುವ ಅಧ್ಯಕ್ಷರನ್ನೇ ಅಣುಕು ಶವ ಯಾತ್ರೆ ನಡೆಸಿ ಅದನ್ನು ದಹಿಸುವುದರ ಮೂಲಕ ಮಹಿಳೆಯರಿಗೆ ಅಗೌರವವನ್ನುಂಟು ಮಾಡಿರುವವರ ವಿರುದ್ಧ ಕ್ರಮ ಜರುಗಿಸುವಂತೆ ಒತ್ತಾಯಿಸಿದ್ದಾರೆ.
ತಹಸೀಲ್ದಾರರ ಭೇಟಿ: ಕಳಸ ಗ್ರಾಪಂ ಅಧ್ಯಕ್ಷೆ ಉಷಾ ಅವರು ಆಸ್ಪತ್ರೆಯಲ್ಲಿ ದಾಖಲಾಗಿದ್ದು, ತಹಸೀಲ್ದಾರ್ ರುದ್ರಾಪ್ಪಾಜಿರಾವ್ ಆಸ್ಪತ್ರೆಗೆ ಭೇಟಿ ನೀಡಿ ಸಾಂತ್ವನ ಹೇಳಿದರು. ನಂತರ ಘಟನೆಯ ಸಂಪೂರ್ಣ ವಿವರಣೆ ತೆಗೆದುಕೊಂಡು ಘಟನೆಗೆ ವಿಷಾದ ವ್ಯಕ್ತಪಡಿಸಿದರು.